ಶನಿವಾರ, ಏಪ್ರಿಲ್ 10, 2021
29 °C
ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌

ಸಂವಿಧಾನ ಅರಿಯುವುದು ಇಂದಿನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಪ್ರಪಂಚದ ನ್ಯಾಯಶಾಸ್ತ್ರ ಪಂಡಿತರು ಭಾರತದ ಸಂವಿಧಾನ ಉತ್ತಮ, ಪ್ರಸ್ತುತ ಹಾಗೂ ಅತಿ ದೊಡ್ಡ ಸಂವಿಧಾನ ಎಂದು ಮೆಚ್ಚಿದ್ದಾರೆ. ಆದರೆ ಭಾರತೀಯರಾದ ನಾವು ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಅದನ್ನು ಓದಲಿಲ್ಲ. ಅದರಂತೆ ನಡೆಯಲಿಲ್ಲ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಹಯಾನ ಮತ್ತು ಸಮುದಾಯ ಕರ್ನಾಟಕ ಸಂಘಟನೆಯ ವತಿಯಿಂದ ಶುಕ್ರವಾರ ನಡೆದ ‘ಸಂವಿಧಾನ ಓದು ಕಾರ್ಯಾಗಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯಾಂಗ, ಶಾಸಕಾಂಗ, ನ್ಯಾಯಾಂಗ, ವಿದೇಶಾಂಗ ನೀತಿ, ಮೂಲಭೂತ ಹಕ್ಕುಗಳು, ನಮ್ಮ ಮೌಲ್ಯಗಳು, ನಿಯಮಗಳ ಒಟ್ಟು ಸಂಗ್ರಹವೇ ಸಂವಿಧಾನ. ಸಂವಿಧಾನದ ಬಗ್ಗೆ ಎಲ್ಲರೂ ಅರಿಯುವುದು ಅಗತ್ಯ. ಸರ್ಕಾರಗಳು ಸಂವಿಧಾನದ ಬಗ್ಗೆ ಜನರಿಗೆ ಸರಿಯಾಗಿ ತಿಳಿವಳಿಕೆ ನೀಡಲಿಲ್ಲ. ಪಠ್ಯಕ್ರಮದಲ್ಲಿ ಇದನ್ನು ಅಳವಡಿಸಿದರೂ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಓದಿದರೆ ವಿನಾ ಅದನ್ನು ಅರ್ಥಮಾಡಿಕೊಂಡು, ಅದರಂತೆ ನಡೆಯಲಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನ ಓದು ಇಂದಿನ ಜರೂರು’ ಎಂದು ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಕೆಲವೊಂದು ಸಾಧನೆ ಮಾಡಿದ್ದೇವೆ. ಪ್ರಜಾಪ್ರಭುತ್ವ ರಾಷ್ಟ್ರ ಇದೆ. ಪಾಳೇಗಾರ, ಜಮೀನ್ದಾರಿ ಪದ್ಧತಿ ಸೇರಿ ಹಲವು ಪದ್ಧತಿಗಳನ್ನು ರದ್ದು ಮಾಡಿದ್ದೇವೆ. ಸಾಕ್ಷರತೆ, ಬಡತನ ನಿರ್ಮೂಲನೆ, ಆಹಾರಧಾನ್ಯಗಳ ಉತ್ಪಾದನೆ, ಮೂಲ ಸೌಕರ್ಯಗಳಲ್ಲಿ ಅಭಿವೃದ್ಧಿ ಹೊಂದಿದ್ದೇವೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಿಸಿದೆ. ಇದಕ್ಕೆ ಕಾರಣ ನಮ್ಮ ಸಂವಿಧಾನ’ ಎಂದರು.

‘ದಲಿತರು, ಮಹಿಳೆಯರು ರಾಷ್ಟ್ರಪತಿ, ಪ್ರಧಾನಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿದ್ದಾರೆ. ಇದಕ್ಕೆ ಕಾರಣ ಸಂವಿಧಾನ ನೀಡಿದ ಅವಕಾಶ. ದೇಶ ಅರ್ಥವಾಗಬೇಕು ಎಂದರೆ ಸಂವಿಧಾನ ಅರ್ಥವಾಗಬೇಕು. ಸಂವಿಧಾನ ಅರ್ಥವಾಗಬೇಕೆಂದರೆ ಅದರ ಮೂಲತತ್ವಗಳು ಅರ್ಥವಾಗಬೇಕು. ದೇಶದಲ್ಲಿ ವಿಭಿನ್ನ ಸಂಸ್ಕೃತಿ, ವೈವಿಧ್ಯಮಯ ಭಾಷೆ, ಹಲವು ಜಾತಿ, ಧರ್ಮಗಳಿವೆ. ನಮ್ಮದು ವೈವಿಧ್ಯದಲ್ಲಿ ಏಕತೆ ಇರುವ ರಾಷ್ಟ್ರ. ನಮ್ಮ ಬಹುತ್ವದ ಬಗ್ಗೆ ಅರಿಯಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ‘ಶಾಲಾ ಮಟ್ಟದಲ್ಲಿಯೇ ಸಂವಿಧಾನದ ಬಗ್ಗೆ ಅರಿವಿನ ಬೀಜ ಬಿತ್ತಬೇಕು’ ಎಂದು ಹೇಳಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಮಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್‌ ಜಿ. ಅಧ್ಯಕ್ಷತೆ ವಹಿಸಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌. ಬಸವರಾಜೇಂದ್ರ, ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್‌,  ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್‌., ವಕೀಲರಾದ ಎಸ್‌.ವಿ.ಪಾಟೀಲ, ಎನ್. ಸುರೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್‌, ಸಂವಿಧಾನ ಓದು ಸಮಿತಿಯ ಸಂಚಾಲಕ ಡಾ.ವಿಠಲ ಭಂಡಾರಿ ಇದ್ದರು. ಸಂವಿಧಾನದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಂವಾದ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.