ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ನಳನಳಿಸುತ್ತಿರುವ ಕಡಲೆ ಬೆಳೆ, ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

Last Updated 28 ಡಿಸೆಂಬರ್ 2021, 6:05 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನಲ್ಲಿ ಹಿಂಗಾರು ಬೆಳೆ ಸಮೃದ್ಧವಾಗಿದ್ದು, ಹೆಚ್ಚಿನ ರೈತರು ಕಡಲೆ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ನವೆಂಬರ್ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಯಿಂದ ಬಹುತೇಕ ಭಾಗದಲ್ಲಿ ನಷ್ಟವುಂಟಾಗಿದ್ದರೆ ಬರಪೀಡಿತ ಪ್ರದೇಶ ತಾಲ್ಲೂಕಿನಲ್ಲಿ ಸೋನೆಮಳೆಯಿಂದ ಸ್ವಲ್ಪಮಟ್ಟಿಗೆ ಅಂತರ್ಜಲ ಸುಧಾರಣೆಯಾಗಿದೆ. ಇದು ರೈತರಿಗೆ ವರದಾನವಾಗಿದ್ದು,ಹಿಂಗಾರು ಬೆಳೆಗಳಾದ ಕಡಲೆ, ಬಿಳಿಜೋಳ ಬೆಳೆಗಳು ಸಮೃದ್ಧವಾಗಿವೆ.

ಈ ಬಾರಿ ಮುಂಗಾರು ಹಂಗಾಮು ತಾಲ್ಲೂಕಿನಲ್ಲಿ ದುರ್ಬಲವಾಗಿತ್ತು. ಒಂದೆರೆಡು ಕೆರೆ ಹೊರತುಪಡಿಸಿ ಬಹುತೇಕ ಕೆರೆಕಟ್ಟೆಗಳು ಹನಿ ನೀರಿಲ್ಲದಂತೆ ಬರಿದಾಗಿದ್ದವು. ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುವ ಭೀತಿ ಎದುರಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಕಳೆದ ತಿಂಗಳು ವಾಡಿಕೆಗಿಂತಲೂ ದುಪ್ಪಟ್ಟು ಮಳೆ ಸುರಿದಿದ್ದು, ಕೃಷಿ ಭೂಮಿ ತೇವಾಂಶದಿಂದ ಕೂಡಿದೆ.

ಹಸಿರಿನ ಹೊದಿಕೆ ಹಾಸಿದ ಕಡಲೆ: ಕೇವಲ ಇಬ್ಬನಿ ಆಧಾರದಲ್ಲಿ ಬೆಳೆಯುವ ಕಡಲೆ ಬೆಳೆಯನ್ನು ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚಿನಪ್ರದೇಶದಲ್ಲಿ ಬೆಳೆದಿದ್ದಾರೆ. ಕಸಬಾ ಮತ್ತು ಹೋಬಳಿಯ ಸಾವಿರಾರು ಎಕರೆಪ್ರದೇಶದ ಕಪ್ಪುಭೂಮಿಯಲ್ಲಿ ಹಚ್ಚಹಸಿರಿನ ಹೊದಿಕೆ ಹಾಸಿದಂತಿದೆ. ಸದಾ ನಷ್ಟ ಅನುಭವಿಸುವ ತಾಲ್ಲೂಕಿನ ರೈತರಿಗೆ ಈ ಸಲ ಹೆಚ್ಚಿನ ಲಾಭ ತರುವ ನಿರೀಕ್ಷೆ ಇದೆ.

‘45 ವರ್ಷದಿಂದ ಕೃಷಿ ಮಾಡುತ್ತಾ ಬಂದಿದ್ದೇನೆ. ಪ್ರತಿವರ್ಷ ಒಣಭೂಮಿಯಲ್ಲೂ ಎರಡು ಬೆಳೆ ಬೆಳೆಯುತ್ತಿದ್ದೆವು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಪ್ರಮಾಣದ ಮಳೆಯಿಂದಾಗಿ ಹಿಂಗಾರು ಬೆಳೆ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಈ ವರ್ಷ ಮಳೆಯಿಂದ ಕಡಲೆ ಗಿಡಗಳು ಪೊದೆಯ ರೂಪದಲ್ಲಿ ಬೆಳೆದಿವೆ. 20 ಎಕರೆಯಲ್ಲಿ ಕಡಲೆ ಹಾಕಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇನೆ’ ಎಂದು ಗೊಲ್ಲರಹಟ್ಟಿ ಗ್ರಾಮದ ರೈತ ಮಾರುತೇಶ ರೆಡ್ಡಿ ಸಂತಸ ಹಂಚಿಕೊಂಡರು.

‘ತಾಲ್ಲೂಕಿನ ಕಸಬಾ ಮತ್ತು ಸೊಕ್ಕೆ ಹೋಬಳಿಯ ಕಪ್ಪು ಖುಷ್ಕಿ ಭೂಮಿಯಲ್ಲಿ ವ್ಯಾಪಕವಾಗಿ ಈ ಬಾರಿ ಕಡಲೆ ಬೆಳೆಯಲಾಗಿದೆ. ಹಿಂಗಾರು ಆರಂಭದಲ್ಲಿ ಕೃಷಿ ಇಲಾಖೆಯಿಂಧ ರಿಯಾಯಿತಿ ದರದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಕಡಲೆ ಬೀಜ ವಿತರಿಸಿದ್ದು, ಎಲ್ಲೆಡೆ ಹಚ್ಚಹಸಿರಾಗಿ ಕಡಲೆ ಬೆಳೆ ನಳನಳಿಸುತ್ತಿದೆ. 9 ಸಾವಿರ ಎಕರೆ ಪ್ರದೇಶದಲ್ಲಿ ಕಡಲೆ ಬೆಳೆ ಇದ್ದು, ಪ್ರತಿ ಎಕೆರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸುಲು ಮಾಹಿತಿ ನೀಡಿದರು.

‘ಸಮೃದ್ಧವಾಗಿ ಬೆಳೆದಿರುವ ಬೆಳೆ ಹೂ ಮತ್ತು ಕಾಯಿಕಟ್ಟುವ ಹಂತದಲ್ಲಿದೆ. ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳು ಜಮೀನುಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದು, ಹಸಿರು ಕೀಟಬಾಧೆ ಹೆಚ್ಚಾಗದಂತೆ ರೈತರಿಗೆ ಸ್ಧಳದಲ್ಲೇ ಪರಿಹಾರ ಸೂಚಿಸಲಾಗುತ್ತಿದೆ. ಕೀಟಬಾಧೆ ನಿಯಂತ್ರಣದಲ್ಲಿದ್ದು, ಈ ಬಾರಿ ಹೆಚ್ಚಿನ ಇಳುವರಿ ಬರುವ ಸಾಧ್ಯತೆ ಇದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT