ಗುರುವಾರ , ಫೆಬ್ರವರಿ 27, 2020
19 °C
ಜನಸ್ಪಂದನ ಸಭೆಯಲ್ಲಿ ಸೂಚನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ: ತಾಲ್ಲೂಕು ಮಟ್ಟದಲ್ಲೂ ಜನಸ್ಪಂದನ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ರೀತಿಯಲ್ಲಿಯೇ ತಾಲ್ಲೂಕು ಮಟ್ಟದಲ್ಲಿಯೂ ಜನಸ್ಪಂದನ ಸಭೆ ನಡೆಯಬೇಕು. ಅದಕ್ಕೆ ಸಮಯ ನಿಗದಿಪಡಿಸಿ ಸುತ್ತೋಲೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ಜನಸ್ಪಂದನ ಸಭೆಗೆ ಬೇರೆ ಬೇರೆ ಊರುಗಳಿಂದ ಜನರು ಬಂದು ಮನವಿ ಮತ್ತು ದೂರುಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಭಾಗಿತ್ವದಲ್ಲಿ ಸಭೆ ನಡೆಯಬೇಕು. ವಾರಕ್ಕೊಂದು ತಾಲ್ಲೂಕಿನ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಭಾಗಿಯಾಗಬೇಕು ಎಂದು ತಿಳಿಸಿದರು.

ಜನರು ತಮ್ಮ ಕೆಲಸ ಯಾವ ಇಲಾಖೆಯಿಂದ ಆಗಬೇಕೋ ಅಲ್ಲೇ ಅರ್ಜಿ ಸಲ್ಲಿಸಬೇಕು. ಅಲ್ಲಿ ನಿರ್ಲಕ್ಷ್ಯ ಮಾಡಿದರೆ, ನಿಯಮ ಪ್ರಕಾರ ಆಗಬೇಕಿದ್ದ ಕೆಲಸ ಆಗದಿದ್ದರೆ ಮಾತ್ರ ಜಿಲ್ಲಾಧಿಕಾರಿಗೆ ತಿಳಿಸಬೇಕು. ನೇರ ಜಿಲ್ಲಾಧಿಕಾರಿಗೆ ತಿಳಿಸುವುದು ಸರಿಯಾದ ಕ್ರಮವಲ್ಲ ಎಂದರು.

ನಗರದ ಇಂಡಸ್ಟ್ರಿಯಲ್ ಏರಿಯಾದ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರ ಉದ್ಯಾನಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ನಿರ್ಮಿಸಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ್ ಇಂಗಳೇಶ್ವರ್ ಆರೋಪಿಸಿದರು.

ಜಾಗವನ್ನು ಕ್ರಯಕ್ಕೆ ತೆಗೆದಿಕೊಂಡಿದ್ದು, ಖಾತೆ ವರ್ಗಾವಣೆ ಮಾಡಿಸಿಕೊಂಡಿಲ್ಲ. ತನ್ನ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿಕೊಡಬೇಕು ಎಂದು ಕುಂದವಾಡ ಗ್ರಾಮದ ನಿವಾಸಿ ಹಾಲಮ್ಮ ಮನವಿ ಸಲ್ಲಿಸಿದರು.

ಸರ್ಕಾರಿ ಶಾಲೆಗೆಂದು ದಾನ ನೀಡಿರುವ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ನಿವಾಸಿ ಹನುಮಂತಪ್ಪ ಆರೋಪಿಸಿದರು.

ಸರ್ಕಾರಿ ಶಾಲೆಗಳಿಗೆ ಭೂದಾನ ನೀಡಲಾಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಅದರ ದಾಖಲೆಗಳನ್ನು ಮತ್ತು ಖಾತೆ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಹಿಂದಿನ ಪ್ರಗತಿಪರಿಶೀಲನ ಸಭೆಯಲ್ಲಿ ತಿಳಿಸಲಾಗಿತ್ತು. ಈ ಜಮೀನು ಸೇರಿ ಎಲ್ಲವುಗಳನ್ನು ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಿಡಿಪಿಐಗೆ ಸೂಚಿಸಿದರು.

ಜಿಲ್ಲೆಯಲ್ಲಿ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಇಲ್ಲ. ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಸೂರ್ಯಪ್ರಕಾಶ್ ಮನವಿ ಸಲ್ಲಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಗೀತ ಶಿಕ್ಷಕರ ನೇಮಕ ಮಾಡಿಕೊಳ್ಳುವ ಮೂಲಕ ನಿರುದ್ಯೋಗಿ ಸಂಗೀತ ಶಿಕ್ಷಕರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಸಂಸ್ಥೆಯ ಸದಸ್ಯರು ಮನವಿ ಪತ್ರ ಸಲ್ಲಿಸಿದರು.

ಖಾತೆ ಬದಲಾವಣೆ ಮಾಡಿಕೊಡುವಂತೆ ಹರಿಹರ ತಾಲ್ಲೂಕು ಬನ್ನಿಕೋಡ್ ಗ್ರಾಮದ ದ್ಯಾಮಕ್ಕ ಕೋರಿದರು. ತಂದೆ ಸ್ವಾತಂತ್ರ್ಯ ಹೋರಾಟಗಾರ. ಸ್ವಂತ ಮನೆ ಇಲ್ಲ. ನಿವೇಶನ ಕೊಡಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರರ ಮಗ ವಿನೋಭನಗರದ ಸನ್ಮತಿಕುಮಾರ್‌ ಬೇಡಿಕೆ ಸಲ್ಲಿಸಿದರು.

ಸಕಾಲದಲ್ಲಿ ನಮ್ಮ ಜಿಲ್ಲೆಯು 6ನೇ ಸ್ಥಾನಕ್ಕಿಂತ ಕೆಳಗಿದ್ದು, ಸಕಾಲದಲ್ಲಿ ಹಾಕಿರುವ ಅರ್ಜಿಗಳನ್ನು ಎಲ್ಲಾ ಇಲಾಖೆಯವರು ಆದಷ್ಟು ಬೇಗ ವಿಲೇವಾರಿ ಮಾಡಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜನಸ್ಪಂದನ ಸಭೆಗೆ ಹಲವಾರು ಇಲಾಖೆಗಳಿಗೆ ಸಂಬಂಧಿಸಿದಂತೆ ದೂರುಗಳು ಬರುತ್ತಿದವೆ. ಆದರೆ ಸಾರ್ವಜನಿಕರು ಮೊದಲು ತಮ್ಮ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆಗೆ ದೂರು ಅಥವಾ ಮನವಿ ಸಲ್ಲಿಸಬೇಕು ಎಂದರು.

ಖಾಸಗಿ ನೇತ್ರಾಲಯದ ಮೇಲೆ ಎಂ.ಜಿ. ಶ್ರೀಕಾಂತ್‌ ದೂರು ನೀಡಿದಾಗ, ‘ಕಾನೂನು ಸಲಹೆ ಪಡೆದೇ ಅವರಿಗೆ ಲೈಸನ್ಸ್‌ ನೀಡಲಾಗಿದೆ. ಅದರ ವಿರುದ್ಧ ಎಲ್ಲಿ ದೂರು ಸಲ್ಲಿಸುವುದಿದ್ದರೂ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ನೀವೇ ಹೀಗೆ ಹೇಳಿದರೆ ಇನ್ನು ಮುಂದೆ ಜನಸ್ಪಂದನಕ್ಕೆ ಬರುವುದಿಲ್ಲ’ ಎಂದು ಶ್ರೀಕಾಂತ್‌ ತಿಳಿಸಿ ಹೋದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಅವರೂ ಇದ್ದರು.

ಆತ್ಮಹತ್ಯೆಯ ಬೆದರಿಕೆ: ಎಫ್‌ಐಆರ್‌ ದಾಖಲಿಸಲು ಡಿಸಿ ಸೂಚನೆ

‘ನನ್ನ ಗಂಡ ನನ್ನನ್ನು ಬಿಟ್ಟು ಹೋಗಿದ್ದು, ನಮ್ಮನ್ನು ಮತ್ತೆ ಒಂದು ಮಾಡಲು ಕಾನೂನು ಸಹಾಯ ನೀಡಬೇಕು. ಒಂದು ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದ ಮಹಿಳೆಯ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.

‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ತಹಸೀನಾ ಕೌಸರ್ ಎಂಬ ಮಹಿಳೆ ಹೇಳುತ್ತಿದ್ದಂತೆ ಹರಿಹಾಯ್ದ ಜಿಲ್ಲಾಧಿಕಾರಿ, ‘ಸಾಯುವವರು ನನ್ನ ಹತ್ತಿರ ಯಾಕೆ ಬರುತ್ತೀರಿ? ಯಾರಾದರೂ ಹೇಳಿ ಸಾಯುತ್ತಾರಾ? ಬದುಕುವ ಸ್ಥೈರ್ಯ ಬೆಳೆಸಿಕೊಂಡರೆ ಸಹಾಯ ಮಾಡಬಹುದು. ಸಾಯುವವರಿಗೆ ಅಲ್ಲ. ನನ್ನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಬೇಡಿ’ ಎಂದರು.

‘ಇವರ ಮೇಲೆ ಎಫ್‌ಐಆರ್‌ ಮಾಡಿ ನಾಲ್ಕು ದಿನ ಒಳಗೆ ಕೂರಿಸಿದರೆ ಬುದ್ಧಿ ಬರುತ್ತದೆ’ ಎಂದು ಪೊಲೀಸರಿಗೆ ತಿಳಿಸಿದರು.

30ಕ್ಕೆ ಹೊಸಕೆರೆ ಶಾಲೆಗೆ ಭೇಟಿ

‘ಜಗಳೂರು ತಾಲ್ಲೂಕಿನ ಹೊಸಕೆರೆ ಶಾಲೆಗೆ ಎಲ್ಲ ಅಧಿಕಾರಿಗಳೊಂದಿಗೆ ಜ.30ಕ್ಕೆ ಭೇಟಿ ನೀಡಲಾಗುವುದು. ‘ಕನಸು ಬಿತ್ತುವ-ರಾಷ್ಟ್ರ ಕಟ್ಟುವ’ ಅಧಿಕಾರಿಗಳು ತಮ್ಮ ತಮ್ಮ ವಾಹನಗಳಲ್ಲಿ ಬರುವುದು ಬೇಡ. ಎಲ್ಲ ಒಟ್ಟಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೋಗೋಣ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ನಮ್ಮ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲ ಸೇರಿ ಮಕ್ಕಳಿಗೆ ಸ್ಫೂರ್ತಿ ನೀಡುವ ಮಾತುಗಳನ್ನಾಡಬೇಕು. ಅವರಲ್ಲಿ ಕನಸು ಬಿತ್ತುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳ ಗುರಿಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು’ ಎಂದರು.

ಅಂಕಿ ಅಂಶ

330 - ಜನಸ್ಪಂದನದಲ್ಲಿ ಸ್ವೀಕಾರವಾದ ಅರ್ಜಿಗಳು

204 - ವಿಲೇವಾರಿಗೊಂಡ ಅರ್ಜಿಗಳು

126 - ಬಾಕಿ ಇರುವ ಅರ್ಜಿಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು