ಬಳ್ಳಾರಿಗೆ ಹೊರಟ ಹರಪನಹಳ್ಳಿಗೆ ಅಧಿಕಾರದ ಉಡುಗೊರೆ

7
ಜಿ.ಪಂ ಅಧ್ಯಕ್ಷೆಯಾಗಿ ಜಯಶೀಲಾ, ಉಪಾಧ್ಯಕ್ಷೆಯಾಗಿ ರಶ್ಮಿ ಅವಿರೋಧ ಆಯ್ಕೆ

ಬಳ್ಳಾರಿಗೆ ಹೊರಟ ಹರಪನಹಳ್ಳಿಗೆ ಅಧಿಕಾರದ ಉಡುಗೊರೆ

Published:
Updated:
Deccan Herald

ದಾವಣಗೆರೆ: ಪಕ್ಷದ ಕೆಲ ಸದಸ್ಯರ ಅಸಮಾಧಾನದ ನಡುವೆಯೂ ಬಿಜೆಪಿಯ ತೆಲಗಿ ಕ್ಷೇತ್ರದ ಕೆ.ಆರ್.ಜಯಶೀಲಾ ಹಾಗೂ ಉಚ್ಚಂಗಿದುರ್ಗ ಕ್ಷೇತ್ರದ ಜಿ. ರಶ್ಮಿ ಕ್ರಮವಾಗಿ ಜಿಲ್ಲಾ ಪಂಚಾಯ್ತಿಯ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆಗೊಳ್ಳುತ್ತಿರುವುದರಿಂದ ಆ ಭಾಗದ ಸದಸ್ಯರ ಬೇಡಿಕೆಗೆ ಹಸಿರು ನಿಶಾನೆ ತೋರಿಸಿದ ಬಿಜೆಪಿ ವರಿಷ್ಠರು, ಜಿಲ್ಲಾ ಪಂಚಾಯ್ತಿಯಲ್ಲಿ ಬಹುಮತ ಇರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಸ್ಥಾನಗಳನ್ನೂ ಹರಪನಹಳ್ಳಿ ತಾಲ್ಲೂಕಿನವರಿಗೆ ಕೊಡುಗೆಯಾಗಿ ನೀಡಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

ಈ ಹಿಂದೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಉಮಾ ಎಂ.ಪಿ. ರಮೇಶ್‌ ಹಾಗೂ ಮಂಜುಳಾ ಟಿ.ವಿ. ರಾಜು ಅವರು ಐದು ವರ್ಷ ಅಧಿಕಾರಾವಧಿ ನಿಗದಿಗೊಳಿಸಿದ್ದರೂ ‘ಅಧಿಕಾರ ಹಂಚಿಕೆ’ ಹೊಂದಾಣಿಕೆಯಂತೆ ರಾಜೀನಾಮೆ ನೀಡಿದ್ದರು. ಈ ಹಿಂದೆ ಉಪಾಧ್ಯಕ್ಷರಾಗಿ ಡಿ. ಸಿದ್ದಪ್ಪ ಹಾಗೂ ಗಂಗಾ ನಾಯ್ಕ ಆಯ್ಕೆಗೊಂಡಿದ್ದರು. ಜಿಲ್ಲಾ ಪಂಚಾಯ್ತಿಯ ಈಗಿನ ಮಂಡಳಿಯ ಅವಧಿಯು 2021ರ ಮೇ 2ಕ್ಕೆ ಕೊನೆಗೊಳ್ಳಲಿದೆ.

ಬೆಳಿಗ್ಗೆ 8ಕ್ಕೆ ಚುನಾವಣಾ ಪ್ರತಿಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಕೆ.ಆರ್‌. ಜಯಶೀಲಾ ಹಾಗೂ ಹಲುವಾಗಲು ಕ್ಷೇತ್ರದ ಸುವರ್ಣಾ ನಾಗರಾಜ ಆರುಂಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿ. ರಶ್ಮಿ ಮಾತ್ರ ನಾಮಪತ್ರ ಸಲ್ಲಿಸಿದರು. ಜಯಶೀಲಾ ಪರ ಶಾಂತಕುಮಾರಿ ಮತ್ತು ಸುವರ್ಣಾ ಅವರಿಗೆ ಲೋಕೇಶ್ವರ ಮತ್ತು ರಶ್ಮಿ ಅವರಿಗೆ ಬಿ.ಎಂ. ವಾಗೀಶಸ್ವಾಮಿ ಸೂಚಕರಾಗಿದ್ದರು.

ಬಳಿಕ ಚುನಾವಣಾಧಿಕಾರಿ ಶಿವಯೋಗಿ ಕಳಸದ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ರಶ್ಮಿ ಅವರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. ನಂತರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಪಕ್ಷದ ವರಿಷ್ಠರ ಒತ್ತಾಯಕ್ಕೆ ಮಣಿದು ಸುವರ್ಣಾ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದರಿಂದ ಜಯಶೀಲಾ ಅವರು ಅವಿರೋಧವಾಗಿ ಆಯ್ಕೆಗೊಂಡರು.

ಕಾಂಗ್ರೆಸ್‌ನ ಅರ್ಚನಾ ಬಸವರಾಜ, ಕೆ.ಎಚ್‌. ಓಬಳ್ಳಪ್ಪ, ರೇಣುಕಾ ಕರಿಬಸಪ್ಪ, ಉಮಾ ವೆಂಕಟೇಶ್‌ ಹಾಗೂ ಜೆಡಿಎಸ್‌ನ ಹೇಮಾವತಿ, ಪಕ್ಷೇತ್ರರಾದ ಫಕ್ಕೀರಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು. ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ನ ಸುಶೀಲಮ್ಮ ಬರುವಲ್ಲಿ ಸ್ವಲ್ಪ ವಿಳಂಬವಾಗಿದ್ದು, ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆಯೇ ಮುಗಿದಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಎಸ್‌. ಅಶ್ವತಿ ಹಾಜರಿದ್ದರು.

‘ಅನುದಾನಕ್ಕಾಗಿ ಸಿಎಂ ಬಳಿಗೆ ನಿಯೋಗ’

‘ಜಿಲ್ಲಾ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರ ಬಳಿಗೆ ಸಂಸದರು, ಶಾಸಕರು ಹಾಗೂ ಸದಸ್ಯರ ನಿಯೋಗವನ್ನು ಒಯ್ಯಲಾಗುವುದು’ ಎಂದು ಅಧ್ಯಕ್ಷೆ ಜಯಶೀಲಾ ಸುದ್ದಿಗಾರರಿಗೆ ತಿಳಿಸಿದರು.

‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಪಂಚಾಯ್ತಿಗೆ 18 ಶೀರ್ಷಿಕೆಯಡಿ ಅನುದಾನ ಬರುತ್ತಿತ್ತು. ಈಗ ಒಂದು ಶೀರ್ಷಿಕೆಯಲ್ಲಿ ಮಾತ್ರ ಅನುದಾನ ಬರುತ್ತಿದೆ. ಒಬ್ಬ ಸದಸ್ಯರಿಗೆ ಕೇವಲ ₹ 12 ಲಕ್ಷದಿಂದ ₹ 14 ಲಕ್ಷ ಅನುದಾನ ಲಭಿಸುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಅನುದಾನ ತರುವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದು ಹೇಳಿದರು.

‘ಸರ್ಕಾರದಿಂದ ಬಂದ ಹಣ ಮರಳಿ ಹೋಗದಂತೆ ಸದ್ವಿನಿಯೋಗ ಆಗುವಂತೆ ಅಧಿಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದರು.

‘ಸಾಮಾಜಿಕ ನ್ಯಾಯ ಕೊಟ್ಟರು’

‘ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಇದ್ದರೂ ಹಿಂದುಳಿದ ವರ್ಗದವಳಾದ ನನ್ನನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ವರಿಷ್ಠರು ಸಾಮಾಜಿಕ ನ್ಯಾಯ ನೀಡಿದ್ದಾರೆ. ಜೊತೆಗೆ ಎರಡೂ ಸ್ಥಾನವನ್ನು ಹರಪನಹಳ್ಳಿಗೆ ನೀಡುವ ಮೂಲಕ ಹಿಂದುಳಿದ ತಾಲ್ಲೂಕಿಗೆ ಆದ್ಯತೆ ನೀಡಲಾಗಿದೆ. ನನ್ನ ಆಯ್ಕೆಗೆ ಸಹಕರಿಸಿದ ಪಕ್ಷದ ವರಿಷ್ಠರಿಗೆ, ಸದಸ್ಯರಿಗೆ ವಂದನೆ ಸ್ಲಲಿಸುತ್ತೇನೆ’ 
– ಕೆ.ಆರ್.ಜಯಶೀಲಾ, ಜಿ.ಪಂ ಅಧ್ಯಕ್ಷೆ

‘ಕೊನೆಯ ಅವಕಾಶವೂ ಸಿಗಲಿಲ್ಲ’

‘ಅಧ್ಯಕ್ಷೆ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಇದ್ದುದರಿಂದ ಕಳೆದ ಎರಡು ಬಾರಿಯೂ ನನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಹರಪನಹಳ್ಳಿ ಬಳ್ಳಾರಿಗೆ ಸೇರಿದರೆ ನನಗೆ ಅಧ್ಯಕ್ಷೆಯಾಗುವ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಈಗಲಾದರೂ ಅವಕಾಶ ನೀಡುವಂತೆ ಪಕ್ಷದ ವರಿಷ್ಠರನ್ನು ಕೋರಿದ್ದೆ. ಆದರೆ, ವರಿಷ್ಠರು ಹಿಂದುಳಿದ ವರ್ಗದ ಜಯಶೀಲಾ ಅವರಿಗೆ ಅವಕಾಶ ಮಾಡಿಕೊಟ್ಟರು. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ನಾಮಪತ್ರ ವಾಪಸ್‌ ಪಡೆದುಕೊಂಡೆ’ 
ಸುವರ್ಣಾ ನಾಗರಾಜ ಆರುಂಡಿ, ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ

‘ಹಿಂದುಳಿದ ನಾಯಕಿಗೆ ಮನ್ನಣೆ’

‘ಬಳ್ಳಾರಿಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಹರಪನಹಳ್ಳಿಗೆ ಆದ್ಯತೆ ನೀಡಬೇಕು ಎಂದು ಕೆಲ ಸದಸ್ಯರು ಕೋರಿದ್ದರು. ಪಕ್ಷದ ವರಿಷ್ಠರು ಈಗಿನ ಅವಧಿಗೆ ಹಿಂದುಳಿದ ವರ್ಗದ ನಾಯಕಿಯಾದ ಜಯಶೀಲ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದರು. ಅವರ ತೀರ್ಮಾನಕ್ಕೆ ಬದ್ಧರಾಗಿ ಸುವರ್ಣಾ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಎಷ್ಟು ಕಾಲ ಈಗಿನ ಅಧ್ಯಕ್ಷೆ– ಉಪಾಧ್ಯಕ್ಷೆ ಅಧಿಕಾರದಲ್ಲಿ ಇರಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ 
ಯಶವಂತರಾವ್‌ ಜಾಧವ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಅಂಕಿ– ಅಂಶಗಳು

36 ಜಿ.ಪಂ. ಒಟ್ಟು ಸದಸ್ಯರು
28 ಚುನಾವಣೆ ಸಭೆಯಲ್ಲಿ ಭಾಗಿಯಾದ ಸದಸ್ಯರು

                                                         ಪಕ್ಷದ ಬಲಾಬಲ

ಪಕ್ಷ ಸದಸ್ಯರು
ಬಿಜೆಪಿ 22
ಕಾಂಗ್ರೆಸ್‌ 8
ಜೆಡಿಎಸ್‌ 2
ಪಕ್ಷೇತರರು 4
ಒಟ್ಟು 36

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !