ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣ್ಣೆದೋಸೆ ನಗರಿಯಲ್ಲಿ ‘ಕನ್ನಡ’ ಘಮಲು

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಕುವೆಂಪು ಕನ್ನಡ ಭವನ
Last Updated 29 ಜನವರಿ 2019, 14:31 IST
ಅಕ್ಷರ ಗಾತ್ರ

ದಾವಣಗೆರೆ: ‘ಕನ್ನಡ ನುಡಿ ಜಾತ್ರೆ’ಗೆ ಇಲ್ಲಿನ ಕುವೆಂಪು ಕನ್ನಡ ಭವನ ಸಜ್ಜಾಗಿದ್ದು, ಬೆಣ್ಣೆದೋಸೆ ನಗರಿಯಲ್ಲಿ ಎರಡು ದಿನ ‘ಕನ್ನಡ’ ಘಮಲು ಪಸರಿಸಲಿದೆ.

ಸಾಹಿತಿ ಡಾ. ಲೋಕೇಶ್‌ ಅಗಸನಕಟ್ಟೆ ಸಮ್ಮೇಳನಾಧ್ಯಕ್ಷತೆಯಲ್ಲಿ ಜನವರಿ 30 ಹಾಗೂ 31ರಂದು ಜಿಲ್ಲಾ ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಸ್ಮರಣೀಯವಾಗಿ ನಡೆಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ತಮ್ಮ ಕಚೇರಿ ಆವರಣದಲ್ಲೇ ಸಮ್ಮೇಳನ ನಡೆಯುತ್ತಿರುವುದು ಪರಿಷತ್ತಿನ ಪದಾಧಿಕಾರಿಗಳಲ್ಲಿ ಇನ್ನಷ್ಟು ಹುರುಪು ತಂದಿದೆ.

ಕುವೆಂಪು ಕನ್ನಡ ಭವನವನ್ನು ತಳಿರು–ತೋರಣಗಳಿಂದ ಅಲಂಕಾರ ಮಾಡಲಾಗಿದ್ದು, ಹಬ್ಬದ ವಾತಾವರಣವನ್ನು ನಿರ್ಮಿಸಿದೆ.

‘ವ್ಯಕ್ತಿಪೂಜೆ ಬೇಡ’ ಎಂದು ಪ್ರತಿಪಾದಿಸಿರುವ ಡಾ. ಲೋಕೇಶ್‌ ಅಗಸನಕಟ್ಟೆ ಅವರು ಸಾರೋಟಿನಲ್ಲಿ ತಮ್ಮನ್ನು ಕೂರಿಸಿ ಮೆರವಣಿಗೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಸೂಚನೆಯಂತೆ ಬೆಳಿಗ್ಗೆ 9ಕ್ಕೆ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಕನ್ನಡ ಭುವನೇಶ್ವರಿ ಮೂರ್ತಿಯ ಭಾವಚಿತ್ರದ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭುವನೇಶ್ವರಿ ಮೂರ್ತಿಯ ಎದುರು ಎಲ್ಲರೂ ನಡೆದುಕೊಂಡೇ ಸಾಗಲು ನಿರ್ಧರಿಸಿದ್ದಾರೆ. ಡೊಳ್ಳು ಕುಣಿತ, ಹಗಲು ವೇಷ, ಬೆಂಬೆ ಕುಣಿತದ ಕಲಾವಿದರು, ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ಗಮನ ಸೆಳೆಯಲಿದ್ದಾರೆ.

ಡಾ. ಜಿ.ಎಸ್‌. ಶಿವರುದ್ರಪ್ಪ ವೇದಿಕೆಯಲ್ಲಿ ಬೆಳಿಗ್ಗೆ 11ಕ್ಕೆ ಸಮ್ಮೇಳನದ ಉದ್ಘಾಟನೆಯೊಂದಿಗೆ ಎರಡು ದಿನಗಳ ‘ಕನ್ನಡ ನುಡಿ ಜಾತ್ರೆ’ಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

‘ಸಮ್ಮೇಳನಕ್ಕೆ ಒಂದೂವರೆ ಸಾವಿರದಿಂದ ಎರಡು ಸಾವಿರ ಜನ ಬರುವ ನಿರೀಕ್ಷೆ ಇದೆ. ಸಭಾಂಗಣದ ಒಳಗೆ 700 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೊರಗಡೆಯೂ ಸುಮಾರು 150 ಕುರ್ಚಿಗಳನ್ನು ಹಾಕಲಾಗುವುದು. ಸಮ್ಮೇಳನದ ಉದ್ಘಾಟನೆ ವೇಳೆ ಜನಸಂದಣಿ ಹೆಚ್ಚಿರುವುದರಿಂದ ಸ್ವಲ್ಪ ಇಕ್ಕಟ್ಟಾಗಬಹುದು. ಉಳಿದಂತೆ ಗೋಷ್ಠಿಗಳಿಗೆ ಆಸನದ ಸಮಸ್ಯೆಯಾಗುವುದಿಲ್ಲ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮ್ಮೇಳನಾಧ್ಯಕ್ಷರ ಬದುಕು–ಬರಹದ ಬಗ್ಗೆ ಗೋಷ್ಠಿ ಇಟ್ಟುಕೊಳ್ಳಲು ಮುಂದಾಗಿದ್ದೆವು. ಆದರೆ, ಅಗಸನಕಟ್ಟೆ ಅವರು ವಿನಯದಿಂದಲೇ ಅದನ್ನು ನಿರಾಕರಿಸಿದರು. ತಮ್ಮ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಟ್ಟರೆ ಸಾಕು; ಪ್ರತ್ಯೇಕ ಗೋಷ್ಠಿ ಇಟ್ಟು ಕಾಲಹರಣ ಮಾಡುವುದು ಬೇಡ ಎಂದು ತಿಳಿಸಿದರು. ಸಮ್ಮೇಳನದ ಗೋಷ್ಠಿಗಳಲ್ಲಿ ದಾವಣಗೆರೆ ಜಿಲ್ಲೆಗೆ ಸಾಹಿತ್ಯದ ಕೊಡುಗೆ, ದಾವಣಗೆರೆ ಜಿಲ್ಲೆಯ ಅನನ್ಯತೆ, ಜಿಲ್ಲಾ ಭೌಗೋಳಿಕ ವಿಂಗಡಣೆಯ ಹಿಂದಿನ ಸವಾಲುಗಳು ಕುರಿತು ಚರ್ಚೆ ನಡೆಯಲಿವೆ. ಅದ್ದೂರಿ ಸಮ್ಮೇಳನಕ್ಕಿಂತಲೂ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲು ಒತ್ತು ನೀಡಿದ್ದೇವೆ’ ಎಂದು ಕುರ್ಕಿ ಹೇಳಿದರು.

ಸರಳ ಭೋಜನ, ಸಂಗೀತ ರಸದೌತಣ

‘ಸಮ್ಮೇಳನಕ್ಕೆ ಬರುವವರಿಗಾಗಿ ಬೆಳಗಿನ ಉಪಾಹಾರಕ್ಕೆ ತುಪ್ಪಿಟ್ಟು ಹಾಗೂ ಕೇಸರಿಬಾತ್‌ ಮಾಡಿಸಲಾಗುತ್ತಿದೆ. ಮಧ್ಯಾಹ್ನದ ಊಟಕ್ಕೆ ನಾಲ್ಕು ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಊಟದಲ್ಲಿ ಗೋಧಿ ಹುಗ್ಗಿ, ಅನ್ನ–ಸಾಂಬಾರು, ಪಲ್ಯ, ಉಪ್ಪಿನಕಾಯಿ ಇರಲಿದೆ’ ಎಂದು ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ತಿಳಿಸಿದರು.

‘ಸಮ್ಮೇಳನಕ್ಕೆ ಬಂದವರಿಗಾಗಿ ಸಂಜೆ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ–ನೃತ್ಯದ ರಸದೌತಣ ನೀಡಲಾಗುತ್ತದೆ. ದೊಡ್ಡ ದೊಡ್ಡ ಕಲಾವಿದರನ್ನು ಕರೆಸುವುದಕ್ಕಿಂತ ಶಾಲಾ–ಕಾಲೇಜುಗಳ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಕಲ್ಪಿಸಲು ಉದ್ದೇಶಿಸಿದ್ದೇವೆ. ವಿದ್ಯಾರ್ಥಿಗಳು ವೈವಿಧ್ಯಮ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ’ ಎಂದು ಹೇಳಿದರು.

ಸಮ್ಮೇಳನದಲ್ಲಿ 30ರಂದು

ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣಾ: ರಾಷ್ಟ್ರ ಧ್ವಜಾರೋಹಣ– ಮೇಯರ್‌ ಶೋಭಾ ಪಲ್ಲಾಗಟ್ಟೆ, ಪರಿಷತ್ತಿನ ಧ್ವಜಾರೋಹಣ: ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ;

ಬೆಳಿಗ್ಗೆ 9ಕ್ಕೆ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಉದ್ಘಾಟನೆ– ಎಸ್‌.ಪಿ ಆರ್‌.ಚೇತನ್‌.

ಬೆಳಿಗ್ಗೆ 11ಕ್ಕೆ ಸಮ್ಮೇಳನ ಉದ್ಘಾಟನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಎಸ್‌.ಜಿ. ಸಿದ್ಧರಾಮಯ್ಯ; ಡಾ. ಜಿ.ಎಸ್‌. ಶಿವರುದ್ರಪ್ಪ ವೇದಿಕೆ ಉದ್ಘಾಟನೆ– ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌; ಕೃತಿಗಳ ಬಿಡುಗಡೆ: ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ; ಸಾನ್ನಿಧ್ಯ–ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ; ಸಮ್ಮೇಳನಾಧ್ಯಕ್ಷರು– ಡಾ. ಲೋಕೇಶ್‌ ಅಗಸನಕಟ್ಟೆ;

ಮಧ್ಯಾಹ್ನ 2ಕ್ಕೆ ‘ದಾವಣಗೆರೆ ಜಿಲ್ಲೆಯ ಅನನ್ಯತೆ’ ಕುರಿತ ಗೋಷ್ಠಿ: ಶೈಕ್ಷಣಿಕ ಅನನ್ಯತೆ– ಡಾ.ಎಂ.ಜಿ.ಈಶ್ವರಪ್ಪ; ಸಾಂಸ್ಕೃತಿಕ ಅನನ್ಯತೆ– ಮಲ್ಲಿಕಾರ್ಜುನ ಕಡಕೋಳ; ಅಭಿವೃದ್ಧಿಯ ಅನನ್ಯತೆ– ಡಾ.ಎಚ್‌.ವಿ.ವಾಮದೇವಪ್ಪ;

ಮಧ್ಯಾಹ್ನ 3.30ಕ್ಕೆ ‘ಕನ್ನಡ ಸಾಹಿತ್ಯ: ಸಾಮರಸ್ಯದ ನೆಲೆಗಳು’ ಕುರಿತ ಗೋಷ್ಠಿ: ನವೋದಯ ಸಾಹಿತ್ಯದ ಗ್ರಹಿಕೆಗಳು– ಡಾ.ದಾದಾಪೀರ್‌ ನವಿಲೇಹಾಳ್‌, ಪ್ರಗತಿಶೀಲ, ದಲಿತ ಬಂಡಾಯದ ನಿಲುವುಗಳು– ಡಾ. ಎ.ಬಿ. ರಾಮಚಂದ್ರಪ್ಪ; ಹೊಸ ತಲೆಮಾರಿನ ಸಾಹಿತ್ಯಿಕ ಆಶಯಗಳು– ಡಾ.ನಾರಾಯಣ ಸ್ವಾಮಿ;

ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT