ಗುರುವಾರ , ನವೆಂಬರ್ 14, 2019
18 °C
ಬೃಹತ್‌ ಉದ್ಯೋಗ ಮೇಳ ಉದ್ಘಾಟನೆ

ಓದಿದ ಎಲ್ಲರಿಗೂ ಉದ್ಯೋಗ ಅಗತ್ಯ: ಶಾಸಕ ಶಾಮನೂರು ಶಿವಶಂಕರಪ್ಪ

Published:
Updated:
Prajavani

ದಾವಣಗೆರೆ: ಬಡವರು, ಶ್ರೀಮಂತರು ಎನ್ನದೇ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಕಲಿತ ವಿದ್ಯೆಗೆ ಸರಿಯಾಗಿ ಉದ್ಯೋಗ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಉದ್ಯೋಗ ಮೇಳ ಆಯೋಜಿಸುವುದು ಉತ್ತಮ ಕಾರ್ಯ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಎಸ್‌.ಎಸ್‌. ಮಲ್ಲಿಕಾರ್ಜನ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಎ.ವಿ.ಕೆ. ಕಾಲೇಜು ಆವರಣದಲ್ಲಿ ಗ್ಲೋಬಲ್‌ ಎಜುಕೇಶನ್ ಅಕಾಡೆಮಿ (ಗ್ಲೋಬಲ್‌ ರಿಕ್ರೂಟ್‌ಮೆಂಟ್‌ ಸರ್ವಿಸಸ್‌) ಭಾನುವಾರ ಹಮ್ಮಿಕೊಂಡಿದ್ದ ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಯಾವುದೇ ತಾರತಮ್ಯ ಮಾಡದೆ ಅರ್ಹತೆ ಇರುವ ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು. ಈ ರೀತಿಯ ಮೇಳ ಆಯೋಜಿಸಿ ಉದ್ಯೋಗ ನೀಡುವ ಪ್ರಕ್ರಿಯೆ ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.

ಕಾಂಗ್ರೆಸ್‌ ನಾಯಕ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ‘ಉದ್ಯೋಗ ಹುಡುಕಿಕೊಂಡು ಇಲ್ಲಿನ ಯುವಜನರು ಎಲ್ಲೆಲ್ಲೋ ಹೋಗುತ್ತಾರೆ. ಈ ಮೇಳದ ಮೂಲಕ ಉದ್ಯೋಗಾಕಾಂಕ್ಷಿಗಳು ಇರುವಲ್ಲಿಗೇ ಉದ್ಯೋಗ ನೀಡುವವರು ಬರುತ್ತಿದ್ದಾರೆ’ ಎಂದರು.

ಎ.ವಿ.ಕೆ. ಕಾಲೇಜು ಪ್ರಾಂಶುಪಾಲ ಡಾ. ಶಿವಪ್ರಕಾಶ್‌, ‘ಇದು ಪ್ರಾರಂಭವಷ್ಟೇ. ಮುಂದೆ ಇನ್ನಷ್ಟು ಉದ್ಯೋಗ ಮೇಳಗಳು ಕಾಲೇಜು ಆವರಣದಲ್ಲಿ ನಡೆಯಲಿವೆ’ ಎಂದು ಹೇಳಿದರು.

ಕುಮಾರ್‌, ಶಿವಪ್ಪ, ಎನ್‌.ಎಂ. ಅಂಜಿನಪ್ಪ, ಬುತ್ತಿ ಹುಸೇನರ್‌, ಲತಿಕಾ ದಿನೇಶ್ ಕೆ. ಶೆಟ್ಟಿ, ಗೀತಾ ಪ್ರಶಾಂತ್‌, ಗ್ಲೋಬಲ್‌ ಎಜುಕೇಶನ್ ಅಕಾಡೆಮಿಯ ಅಹಮ್ಮದ್‌, ಆಯೀಷಾ ಅಹಮ್ಮದ್‌ ಅವರೂ ಇದ್ದರು. ಎ.ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಜನ್ಮ ದಿನದ ಪ್ರಯುಕ್ತ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು–ಹಂಪಲು ವಿತರಣೆ, ಎವಿಕೆ ಕಾಲೇಜು ರಸ್ತೆಯಲ್ಲಿ ಫುಡ್ ಫೆಸ್ಟ್, ಮ್ಯೂಸಿಕಲ್ ನೈಟ್, ಸ್ಟ್ರೀಟ್ ಚೆಸ್ ಪಂದ್ಯಾವಳಿ ಆಯೋಜಿಸಲಾಯಿತು.

234 ಮಂದಿ ಆಯ್ಕೆ

ಈ ಉದ್ಯೋಗ ಮೇಳದಲ್ಲಿ 18 ಕಂಪನಿಗಳು 234 ಮಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ.  ಬಿ.ಎ, ಬಿ.ಕಾಂ, ಬಿ.ಎಸ್‌ಸಿ, ಎಂಜಿನಿಯರಿಂಗ್‌ ಸೇರಿ ವಿವಿಧ ಪದವಿ ಪಡೆದಿರುವ 619 ಅಭ್ಯರ್ಥಿಗಳು ಭಾಗವಹಿಸಿದ್ದರು ಎಂದು ಗ್ಲೋಬಲ್‌ ಎಜುಕೇಶನ್ ಅಕಾಡೆಮಿಯ ಅಹಮ್ಮದ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)