ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾನು ಉರಿದು ಸುತ್ತ ಬೆಳಕು ನೀಡುವ ಪತ್ರಕರ್ತ

ಜಿಲ್ಲಾ ವರದಿಗಾರರ ಕೂಟದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಬಸವಪ್ರಭು ಸ್ವಾಮೀಜಿ
Last Updated 21 ಮಾರ್ಚ್ 2022, 5:35 IST
ಅಕ್ಷರ ಗಾತ್ರ

ದಾವಣಗೆರೆ: ಸರಿಯಾಗಿ ನಿದ್ದೆ ಮಾಡದೇ, ತಮ್ಮ ಆರೋಗ್ಯದ ಕಡೆಗೂ ಗಮನಕೊಡದೇ ಬದ್ಧತೆಯಿಂದ ಪತ್ರಕರ್ತರು ಕೆಲಸ ಮಾಡುತ್ತಿರುತ್ತಾರೆ. ಪತ್ರಕರ್ತರು ಎಂದರೆ ತಾನು ಉರಿದು ಸುತ್ತ ಬೆಳಕು ನೀಡುವ ದೀಪದಂತೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಕ ತತ್ವದಲ್ಲಿ ನಿಷ್ಠೆ ಇಟ್ಟು ಕೆಲಸ ಮಾಡುವ ಪತ್ರಕರ್ತರ ಕಾಯಕ ದೇವರ ಪೂಜೆಗೆ ಸಮವಾದುದು. ಕೊರೊನಾ ಕಾಲದಲ್ಲಿ ಜನರ ಸಂಕಷ್ಟವನ್ನು ತಮ್ಮ ಬರಹ, ದೃಶ್ಯಗಳ ಮೂಲಕ ತೆರೆದಿಟ್ಟು ನೆರವಾದ ಕೊರೊನಾ ವಾರಿಯರ್‌ಗಳು ಎಂದು ಮೆಚ್ಚುಗೆವ್ಯಕ್ತಪಡಿಸಿದರು.

‘ಸ್ಥಳೀಯ ಪತ್ರಿಕೆಗಳು ಮತ್ತು ವೆಬ್‌ ಜರ್ನಲಿಸಂ’ ವಿಷಯದ ಬಗ್ಗೆ ಶಿವಮೊಗ್ಗದ ಹಿರಿಯ ಪತ್ರಕರ್ತ ಎನ್‌. ರವಿಕುಮಾರ್‌ ಟೆಲೆಕ್ಸ್‌ ಉಪನ್ಯಾಸ ನೀಡಿ, ‘ಮಾಧ್ಯಮ ರಂಗಕ್ಕೆ ಹೊಸತಾಗಿ ಬರುವ ಯಾರೇ ಆದರೂ ಈ ದೇಶದ ಇಬ್ಬರು ಮಹಾನ್‌ ಪತ್ರಕರ್ತರಾದ ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧೀಜಿ ಬಗ್ಗೆ ತಿಳಿದುಕೊಂಡು ಬರಬೇಕು. ಅವರು ಪತ್ರಕರ್ತರಾಗಿ ಹೇಗೆ ಕಾರ್ಯನಿರ್ವಹಿಸಿದರು ಎಂಬುದನ್ನು ಅರಿಯಬೇಕು. ದೇಶದ ಬಾಹ್ಯ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಹೋರಾಟ ಮಾಡಿದರೆ, ಆಂತರಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಅಂಬೇಡ್ಕರ್‌’ ಎಂದು ತಿಳಿಸಿದರು.

ಸೇವಾ ಕ್ಷೇತ್ರವಾಗಿದ್ದ ಮಾಧ್ಯಮ ಕ್ಷೇತ್ರ ಈಗ ವ್ಯವಹಾರ ಕ್ಷೇತ್ರವಾಗಿದೆ. ಹಿಂದೆ ಓದುಗರ ಪರವಾಗಿ ರೂಪುಗೊಳ್ಳುತ್ತಿದ್ದ ಮಾಧ್ಯಮ ಇಂದು ಗ್ರಾಹಕ ಪರವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ, ಬದ್ಧತೆಯಿಂದ ಕೆಲಸ ಮಾಡುವ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಆದರ್ಶಗಳು ಇದ್ದ ಮಾಧ್ಯಮ ಇಂದು ಬಂಡವಾಳ ಹೂಡಿಕೆ, ಲಾಭ, ನಷ್ಟ ಈ ಲೆಕ್ಕಾಚಾರಕ್ಕೆ ಸೀಮಿತವಾಗಿದೆ. ನೈತಿಕ ಮೌಲ್ಯ ಕಳೆದುಕೊಳ್ಳಲು, ಸಾಮಾಜಿಕ ಬದ್ಧತೆ, ಜನಪರ ಕಾಳಜಿಯಿಂದ ದೂರವಾಗಲು ಇದು ಕಾರಣವಾಗಿದೆ ಎಂದು ವಿಷಾದಿಸಿದರು.

ದೊಡ್ಡ ಪತ್ರಿಕೆಗಳು ಪೂರ್ತಿ ಉದ್ಯಮಗಳಾಗಿವೆ. ಸಣ್ಣ ಪತ್ರಿಕೆಗಳು ಇನ್ನೂ ಬದ್ಧತೆಗಳನ್ನು ಉಳಿಸಿಕೊಂಡಿವೆ. ಆದರೆ ನಡೆಯಲಾರದೆ ತೆವಳುವ ಹಾದಿಯಲ್ಲಿವೆ. ಸಿಬ್ಬಂದಿಯ ಕೊರತೆ, ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಆರ್ಥಿಕ ಕೊರತೆ, ಪತ್ರಿಕೆ ವಿತರಕರೂ ಸಿಗದಷ್ಟು ಸಮಸ್ಯೆ. ಹೀಗೆ ಅನೇಕ ಬಿಕ್ಕಟ್ಟುಗಳನ್ನು ಅವರು ಎದುರಿಸುತ್ತಿದ್ದಾರೆ ಎಂದುವಿವರಿಸಿದರು.

ಕೊರೊನಾ ಕಾಲದಲ್ಲಿ ರಾಜ್ಯದಲ್ಲಿ 800 ಜನ ಕೆಲಸ ಕಳೆದುಕೊಂಡರು. 30 ಜನ ಪ್ರಾಣ ಕಳೆದುಕೊಂಡರು. ಅದರಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ದೇಶಲ್ಲಿ ಇದೇ ಸಮಯದಲ್ಲಿ 14 ಮಂದಿ ಪತ್ರಕರ್ತರು ಕೊಲೆಗೀಡಾದರು ಎಂದು ಅಂಕಿಅಂಶ ನೀಡಿದರು.

ಇಂದು ವೆಬ್ ಜರ್ನಲಿಸಂನಿಂದಾಗಿ ಟಿ.ವಿ. ಮಾಧ್ಯಮಗಳು ಕೂಡ ಔಟ್‌ ಡೇಟೆಡ್‌ ಆಗುತ್ತಿವೆ. ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಅತಿ ವೇಗದ ತಂತ್ರಜ್ಞಾನದ ಬೆಳವಣಿಗೆ ಇದಕ್ಕೆ ಕಾರಣ. ಸುದ್ದಿಗಾಗಿ ಕಾಯುವುದು ಹೋಗಿದೆ. ಈಗ ಸಂಚಾರಿ ಪತ್ರಿಕೋದ್ಯಮ ಇದೆ. ಅಂದರೆ ಪ್ರತಿಯೊಬ್ಬರೂ ಮೊಬೈಲ್‌ ಮೂಲಕ ಪತ್ರಕರ್ತರೇ ಆಗಿದ್ದಾರೆ. ಮಾಧ್ಯಮ ತಮ್ಮ ಜೇಬಿನಲ್ಲೇ ಇದೆ. ಇದರಿಂದಾಗಿ ಓದುವ ಸಂಸ್ಕೃತಿಯ ಪತ್ರಿಕೋದ್ಯಮ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷ ಕೆ. ಏಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಜಿ.ಎಂ.ಆರ್‌. ಆರಾಧ್ಯ, ಬಿ.ಎನ್‌.ಮಲ್ಲೇಶ್‌, ಬಸವರಾಜ್‌ ದೊಡ್ಮನಿ, ಮಲ್ಲಿಕಾರ್ಜುನ ಕಬ್ಬೂರು ಇದ್ದರು.

ಖಜಾಂಚಿ ಮಧು ನಾಗರಾಜ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಿ. ವರದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ರಂಗನಾಥ ರಾವ್‌ ಗಾಯಕ್ವಾಡ್‌ ವಂದಿಸಿದರು. ದೇವಿಕಾ ಸುನೀಲ್‌ ನಿರೂಪಿಸಿದರು.

ಗರಿಗೆದರಿದ ಪತ್ರಿಕಾ ಭವನದ ಕನಸು

‘ಪತ್ರಿಕಾ ಭವನಕ್ಕೆ ಧೂಡಾ ಅಧ್ಯಕ್ಷರು ನಿವೇಶನ ಒದಗಿಸಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಮಾಡಬೇಕು. ನಿವೇಶನ ದೊರಕಿದ ಮೇಲೆ ನಮ್ಮಿಂದ, ನಿಮ್ಮಿಂದ ಎಲ್ಲರಿಂದ ದುಡ್ಡು ಎತ್ತಿ ಭವನ ನಿರ್ಮಿಸಿ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ನಾವು ಧೂಡಾದಲ್ಲಿ ಈಗ ಆಡಳಿತಕ್ಕೆ ಬಂದಿದ್ದೇವೆ. ಹಿಂದೆ ನೀವಿರುವಾಗಲೇ ಕೊಡಿಸಬಹುದಿತ್ತು. ಏನೇ ಇರಲಿ. ಒಂದು ವಾರದ ಒಳಗೆ ಪತ್ರಿಕಾ ಭವನಕ್ಕೆ ನಿವೇಶನ ಮಂಜೂರು ಮಾಡಲು ಧೂಡಾ ಅಧ್ಯಕ್ಷರಿಗೆ ಸೂಚಿಸುತ್ತೇನೆ. ಸ್ಥಳೀಯ ಶಾಸಕರು, ಸಂಸದರ ಮೂಲಕ ಕೆಲಸ ಮಾಡಿಸಿಕೊಳ್ಳುವ ಬದಲು ನೇರವಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಅರ್ಜಿ ಸಲ್ಲಿಸಿದರೆ ಕೆಲಸ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್‌, ‘ಸಂಸದರ ಸೂಚನೆಯಂತೆ ಒಂದು ವಾರದಲ್ಲಿ ನಿವೇಶನ ನೀಡಲಾಗುವುದು’ ಎಂದು ಭರವಸೆ ನೀಡಿದರು.

* ಪತ್ರಕರ್ತರು ಯಾರನ್ನೂ ಮೇಲೆತ್ತಬಲ್ಲರು. ಪ್ರಪಾತಕ್ಕೆ ತಳ್ಳಬಲ್ಲರು. ಖಾದಿ, ಕಾವಿ, ಖಾಕಿಯನ್ನು ಸದಾ ಎಚ್ಚರದಲ್ಲಿ ಇಡುವ ನೀವು ಕಪ್ಪುಚುಕ್ಕೆ ಇಲ್ಲದಂತೆ ಒಗ್ಗಟ್ಟಿನಿಂದ ಕೆಲಸ ಮಾಡಿ.

ಶಾಮನೂರು ಶಿವಶಂಕರಪ್ಪ, ಶಾಸಕ

* ಪತ್ರಕರ್ತರು ಯಾವುದೇ ಪಕ್ಷದ ಅಡಿಯಾಳಾಗದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಟಿಆರ್‌ಪಿಗಾಗಿ ಕೆದಕಿ ಟೆಂಪ್ಟ್‌ ಮಾಡಿ ಏನೇನೋ ನಮ್ಮ ಬಾಯಿಂದ ಬರಿಸುವುದನ್ನು ಬಿಡಿ.

ಜಿ.ಎಂ. ಸಿದ್ದೇಶ್ವರ, ಸಂಸದ

* ವಾಸ್ತವಾಂಶ ಯಾರಿಗೂ ಬೇಡ. ರೋಚಕತೆಯೇ ಬೇಕು. ಆದರೂ ವಾಸ್ತವ, ಸತ್ಯಾಂಶ ತಿಳಿಸುವ ಕೆಲಸ ಮಾಡಿ. ಕೊರೊನಾ ಕಾಲದಲ್ಲಿ ಮಾಧ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಎಂ.ಪಿ. ರೇಣುಕಾಚಾರ್ಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT