ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಮಲ್ಲಪ್ಪ ಸಮಾಜದ ದೊಡ್ಡ ಶಕ್ತಿ : ನಿರಂಜನಾನಂದಪುರಿ ಸ್ವಾಮೀಜಿ ಶ್ಲಾಘನೆ

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಶ್ಲಾಘನೆ
Last Updated 30 ಅಕ್ಟೋಬರ್ 2020, 15:56 IST
ಅಕ್ಷರ ಗಾತ್ರ

ದಾವಣಗೆರೆ: ಕೆ.ಮಲ್ಲಪ್ಪ ಅವರು ಶೋಷಿತರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು. ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ಅವರ ಆದರ್ಶ, ತತ್ವಗಳು ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ನಗರದ ಬೀರೇಶ್ವರ ಭವನದಲ್ಲಿ ಶುಕ್ರವಾರ ನಡೆದ ಮಾಜಿ ಶಾಸಕ ಕೆ.ಮಲ್ಲಪ್ಪ ಅವರ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ರಾಜ್ಯ, ಜಿಲ್ಲೆ ಹಾಗೂ ಸಮಾಜಕ್ಕೆ ಮಲ್ಲಪ್ಪನವರು ಒಂದು ಶಕ್ತಿಯಾಗಿದ್ದರು. ಅವರ ಹಾದಿಯಲ್ಲಿ ಸಮಾಜ ನಡೆದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ’ ಎಂದರು.

‘ನಾವು ಇಂದು ಸಮಾಜಕ್ಕೆ ಸ್ವಾಮೀಜಿಯಾಗಲು ಮಲ್ಲಪ್ಪನವರೆ ಕಾರಣ. 1991ರಲ್ಲಿ ನಮ್ಮ ತಂದೆಯವರಿಗೆ ಹೇಳಿ ದತ್ತು ಪಡೆದರು. ಅಂದಿನ ದಿನ ಮಲ್ಲಪ್ಪನವರು ನಮ್ಮ ತಂದೆಗೆ ಬರೆದ ಪತ್ರ ನಾವು ಜಗದ್ಗುರುಗಳಾಗಲು ಕಾರಣ’ ಎಂದು ಸ್ಮರಿಸಿದರು.

‘ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕಾಗಿನೆಲೆ ಕನಕ ಗುರುಪೀಠದ ಸ್ಥಾಪನೆಗೆ ಮಲ್ಲಪ್ಪನವರ ಶ್ರಮ ಕೂಡ ಮರೆಯುವಂತಹದ್ದಲ್ಲ. ಬಡ ಮಕ್ಕಳಿಗೆ ಮೃಷ್ಟಾನ್ನ ಭೋಜನ ಮಾಡಿಸಲು ಅವರ ಮನಸ್ಸು ಸದಾ ಮಿಡಿಯುತ್ತಿತ್ತು’ ಎಂದು ಪ್ರಸ್ತಾಪಿಸಿದರು.

ಹರಿಹರ ತಾಲ್ಲೂಕಿನ ಡಾ.ಕೆ.ಪಿ.ಸಿದ್ದಬಸಪ್ಪ ಡಾ.ವೈ.ನಾಗಪ್ಪ ಅವರ ಅಗಲಿಕೆಯಿಂದ ಸಮಾಜಕ್ಕೆ ಅನಾಥಪ್ರಜ್ಞೆ ಕಾಡುವಂತಾಗಿದೆ ಎಂದರು.

ಚಂದ್ರಗಿರಿ ಅಥಣಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ, ‘ಕೆ. ಮಲ್ಲಪ್ಪ ಜನ ಸೇವಕರಾಗಿ ಮುಕ್ತಿ ಹೊಂದಿದ್ದಾರೆ. ಜನಸೇವೆ ಸಮಾಜ ಸೇವೆಯೇ ದೇವರ ಸೇವೆ ಎಂದು ತಿಳಿದು ಕಾಯಕಯೋಗಿ ಆಗಿದ್ದರು. ನೊಂದವರ ಬದುಕಿನ ಚೇತನರಾಗಿದ್ದರು. ಅವರ ಆದರ್ಶ ಸಮಾಜಕ್ಕೆ ಬೇಕಾಗಿದೆ’ ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿ ಸ್ವಾಮಿ ಮಾತನಾಡಿ, ‘ಮಲ್ಲಪ್ಪನವರ ದೇಶಭಕ್ತಿಯನ್ನು ನಾವು ಕಲಿಯಬೇಕಾಗಿದೆ’ ಎಂದು ಹೇಳಿದ ಅವರು, ಮಲ್ಲಪ್ಪ ಅವರ ಜೊತೆಯಲ್ಲಿ ಕಳೆದ ಅಂಡಮಾನ್-ನಿಕೋಬಾರ್ ಪ್ರವಾಸದ ಸನ್ನಿವೇಶದ ಬಗ್ಗೆ ಮೆಲುಕು ಹಾಕಿದರು

ನಗರ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪನವರ ಆಪ್ತ ಒಡನಾಡಿ ಬಳ್ಳಾರಿ ಷಣ್ಮುಖಪ್ಪ ಮಾತನಾಡಿ, ‘1957ರಿಂದ ಮಲ್ಲಪ್ಪನವರ ರಾಜಕೀಯ ಒಡನಾಡಿ ಆಗಿದ್ದೇನೆ. ಸರಳ ಸಜ್ಜನಿಕೆಯ ಗಾಂಧಿವಾದಿಯಾಗಿದ್ದರು. ಅವರ ಮಾರ್ಗದರ್ಶನದಂತೆ ನಾವು ನಡೆಯುತ್ತೇವೆ’ ಎಂದರು.

ಧೂಡಾ ಮಾಜಿ ಅಧ್ಯಕ್ಷ ದಾಸ ಕರಿಯಪ್ಪ, ನಗರ ಕುರುಬ ಸಂಘದ ಉಪಾಧ್ಯಕ್ಷ ಗೌಡ್ರು ಚನ್ನಬಸಪ್ಪ, ನಿವೃತ್ತ ವಾರ್ತಾಧಿಕಾರಿ ಎಂ. ಕರಿಯಪ್ಪ ಮಾತನಾಡಿದರು. ಸಭೆಯಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಮಾಜಿ ಮೇಯರ್ ಎಚ್‍.ಪಿ.ಗೋಣಪ್ಪ, ಜೆ.ಕೆ. ಕೊಟ್ರಬಸಪ್ಪ ಕೆ. ಮಲ್ಲಪ್ಪ ಅವರ ಪುತ್ರ ಕೆ. ವಿವೇಕ್, ಅಳಿಯ ಕೆ. ಓಂಕಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದ್ಯಾಮಣ್ಣ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರು ವಿರೂಪಾಕ್ಷಪ್ಪ, ಕಾರ್ಯದರ್ಶಿ ಮಳಲ್ಕೆರೆ ಎಸ್.ಎಚ್. ಪ್ರಕಾಶ್, ಉಪಾಧ್ಯಕ್ಷ ಹಾಲೇಕಲ್ ಮಹಾನಗರ ಪಾಲಿಕೆ ಸದಸ್ಯರಾದ ಜೆ.ಎನ್. ಶ್ರೀನಿವಾಸ್, ಎ.ನಾಗರಾಜ್, ದೇವರಮನೆ ಶಿವಕುಮಾರ್, ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT