ಕಡರನಾಯ್ಕನಹಳ್ಳಿ: ‘ಜಗತ್ತಿನ ಸೃಷ್ಟಿಯಲ್ಲಿ ಸ್ತ್ರೀ ಶಕ್ತಿಯೇ ಪ್ರಧಾನವಾಗಿದೆ. ಎಲ್ಲಿ ಮಹಿಳೆ ಗೌರವಿಸಲ್ಪಡುವಳೋ ಅಲ್ಲಿ ಸಮೃದ್ಧಿ ಇರುತ್ತದೆ. ಭಾರತದಲ್ಲಿರುವ ಶಕ್ತಿ ಪೀಠಗಳಲ್ಲಿ ಬಾದಾಮಿ ಬನಶಂಕರಿ ದೇವಸ್ಥಾನವೂ ಒಂದು. ಅಂತಹ ದೇವಿಯನ್ನು ಹೊಳೆ ಸಿರಿಗೆರೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದೀರಿ. ಶ್ರದ್ಧಾ ಭಕ್ತಿಯಿಂದ ನೆಡೆದುಕೊಳ್ಳಿ ನಿಮಗೆ ಸಿರಿ ಲಭಿಸುತ್ತದೆ’ ಎಂದು ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮೀಪದ ಹೊಳೆ ಸಿರಿಗೆರೆ ಗ್ರಾಮದಲ್ಲಿ ಬನಶಂಕರಿ ದೇವಿ ದೇವಸ್ಥಾನದ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
‘ಮಾಡುವ ದಾನವು ಪರೋಪಕಾರದಿಂದ ಕೂಡಿರುತ್ತದೆ. ಸಂಸ್ಕಾರದಿಂದ ಮಾಡುವ ದಾನ ಲೋಕಕಲ್ಯಾಣಕ್ಕಾಗಿ ಉಪಯೋಗವಾಗುತ್ತದೆ’ ಎಂದು ಯಲವಟ್ಟಿ ಗುರು ಸಿದ್ದಾಶ್ರಮದ ಯೋಗಾನಂದ ಶ್ರೀ ಹೇಳಿದರು.
‘ಇಂದಿನ ಯುವಕರಿಗೆ ಸಂಸ್ಕಾರದ ಅವಶ್ಯಕತೆ ಇದೆ. ಮೊಬೈಲ್ ಗೀಳು ಹೆಚ್ಚಾಗಿರುವುದರಿಂದ ಅಧ್ಯಾತ್ಮ ಚಿಂತನೆ ಕಡಿಮೆಯಾಗಿದೆ. ಅಧ್ಯಾತ್ಮ ಆತ್ಮ ಶುದ್ಧಿಗೆ ದಾರಿದೀಪ’ ಎಂದು ಕೋಡಿಯಾಲ ಹೊಸಪೇಟೆಯ ಪುಣ್ಯ ಕೋಟಿ ಮಠದ ಬಾಲ ಯೋಗಿ ಜಗದೀಶ್ವರ ಸ್ವಾಮೀಜಿ ತಿಳಿಸಿದರು.
‘ಬನಶಂಕರಿ ದೇವಿ ಮೂರ್ತಿಯನ್ನು ಸುಂದರವಾಗಿ ಕೆತ್ತನೆ ಮಾಡಿದ ಶಿಲ್ಪಿಯ ಕಲಾ ನೈಪುಣ್ಯತೆ ಅಜರಾಮರ’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಶ್ಲಾಘಿಸಿದರು.
ಲಿಂಗದಳ್ಳಿ ಮಠದ ವೀರಭದ್ರ ಸ್ವಾಮೀಜಿ, ತುಮ್ಮಿನಕಟ್ಟಿ ಪದ್ಮಶಾಲಿ ಪೀಠದ ಪ್ರಭುಲಿಂಗ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖಂಡ ಎಂ.ಜಿ.ಪರಮೇಶ್ವರ ಗೌಡ, ದೇವಸ್ಥಾನದ ಕಮಿಟಿ ಅಧ್ಯಕ್ಷ ಕೆ.ಜಿ.ಕೊಟ್ರೇಶ್ ಗೌಡ ಮಾತನಾಡಿದರು.
ಬನಶಂಕರಿ ದೇವಿ ಮೂರ್ತಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಭಿಷೇಕ, ಹೋಮ, ಹವನ ನಡೆಯಿತು.
ಮುಖಂಡರಾದ ಎನ್.ಜಿ.ನಾಗನಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಹಾಲೇಶಪ್ಪ, ದೇವಸ್ಥಾನದ ಶಿಲ್ಪಿ ತಮಿಳುನಾಡಿನ ಎಂ.ಎಂ.ಮಣಿ ತಪದಿ, ಮೂರ್ತಿ ಶಿಲ್ಪಿ ನಾಗೇಂದ್ರಚಾರಿ, ಅರ್ಕಾಚಾರಿ ರಾಣೇಬೆನ್ನೂರು ಮತ್ತು ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.