ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವ್ಯಾಪಾರ ಆರಂಭಿಸಬೇಕಿದೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಪ್ರಾಯ
Last Updated 14 ಮೇ 2022, 3:02 IST
ಅಕ್ಷರ ಗಾತ್ರ

ದಾವಣಗೆರೆ: ‘ಇಂದು ಎಲ್ಲೆಲ್ಲೂ ಗ್ರಾಹಕ ಸಂಸ್ಕೃತಿ ಬೆಳೆಯುತ್ತಿದ್ದು, ಶಿಕ್ಷಣವೂ ಇದಕ್ಕೆ ಹೊರತಾಗಿಲ್ಲ. ಹಾಗಾಗಿ ನಾವು ಕನ್ನಡದ ವ್ಯಾಪಾರ ಆರಂಭಿಸಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ, ಕನ್ನಡ ಕಾಯಕ ವರ್ಷದ ಸಮಾರೋಪ ‘ಕನ್ನಡ ನುಡಿ ನಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವ್ಯಾಪಾರಕ್ಕೆ ಲಗ್ಗೆ ಹಾಕಿದ ಮೇಲೆ ಮಾರುಕಟ್ಟೆ ಅಭಿವೃದ್ಧಿಪಡಿಸುವವರು ಗ್ರಾಹಕರು ಕೇಳಿದ್ದನ್ನು ಕೊಡಬೇಕು. ಈ ಗ್ರಾಹಕ ಸಂಸ್ಕೃತಿಯಲ್ಲಿ ಮೂಲ ಸಂಸ್ಕೃತಿ ಮರೆಯಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತೇನೆ ಎಂದರೂ ಪೋಷಕರೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವಂತೆ ಒತ್ತಡ ಹೇರುತ್ತಿದ್ದಾರೆ. ಇಂಗ್ಲಿಷ್ ಬಗೆಗಿನ ವ್ಯಾಮೋಹ ಬಿಡಬೇಕು. ಇಂದು ಬಹುತೇಕ ಶಾಲೆಗಳು ಇಂಗ್ಲಿಷ್‌ ಹೆಸರಿನಲ್ಲಿವೆ. ಆದರೆ ಶಿಕ್ಷಣ ಸಂಸ್ಥೆ ನಡೆಸುವವರು ನಮ್ಮವರೇ. ಶೈಕ್ಷಣಿಕವಾಗಿ ಕನ್ನಡ ವೃತ್ತಿಯನ್ನು ಕಟ್ಟಿಕೊಟ್ಟು. ಅದರ ಜೊತೆ ಬದುಕನ್ನು ಸಮೀಕರಿಸಿಕೊಂಡಾಗ ಮಾತ್ರ ಕನ್ನಡ ಉಳಿಯುತ್ತದೆ’
ಎಂದರು.

‘ಆಡಳಿತ ಭಾಷೆಯಲ್ಲೇ ಶಿಕ್ಷಣ ನೀಡಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು. ಬ್ಯಾಂಕುಗಳಲ್ಲಿ ಕನ್ನಡದಲ್ಲೇ ಸೇವೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಮೂಲದಲ್ಲಿ ಕೆಲವು ಬದಲಾವಣೆ ಮಾಡುವ ಅಗತ್ಯವಿದೆ. ಕನ್ನಡ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಬೇಕಾದರೆ ಈ ರೀತಿ ಜಾಗೃತಿಗಳು ಪ್ರತಿ ಜಿಲ್ಲೆಯಲ್ಲೂ ಆಗಬೇಕು. ದಾವಣಗೆರೆಯಿಂದ ಆರಂಭವಾಗಿದೆ’ ಎಂದರು.

‘ಕನ್ನಡ ಕಾಯಕ ವರ್ಷದ ಅಂಗವಾಗಿ ರಾಜ್ಯದಾದ್ಯಂತ 12 ಅಭಿಯಾನಗಳನ್ನು ಮಾಡಿ ಜಾಗೃತಿ ಮೂಡಿಸಲಾಗಿದೆ. ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕೇಳಿ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ’ ಎಂದು ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಮಾತನಾಡಿ, ‘ಪ್ರಾಧಿಕಾರ ರಚನೆಯಾಗಿ 30 ವರ್ಷಗಳು ಕಳೆದಿದ್ದು, ಈ ನಿಮಿತ್ತ ಜೂನ್ 8ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಪತ್ರಕರ್ತ, ಲೇಖಕ ಬಾ.ಮ. ಬಸವರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕನ್ನಡ ಕಾಯಕ ವರ್ಷದ ಅಂಗವಾಗಿ ಜಿಲ್ಲೆಯ ಬ್ಯಾಂಕ್‌ಗಳು, ರೈಲು ನಿಲ್ದಾಣ, ನ್ಯಾಯಾಲಯ, ಆಸ್ಪತ್ರೆ ಇನ್ನಿತರ ಕಡೆಗಳಲ್ಲಿ ಕನ್ನಡ ಜಾಗೃತಿ ಅಭಿಯಾನ ಮಾಡಿ, ಅನ್ಯ ರಾಜ್ಯಗಳಿಂದ ಬಂದ ಸಿಬ್ಬಂದಿ ಕನ್ನಡ ಕಲಿಯುವಂತೆ ಮನವೊಲಿಸುತ್ತಿದ್ದೇವೆ’ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಪ್ರಾಧಿಕಾರದ ಮಹೇಶ್ ಇದ್ದರು. ಬಿ. ದಿಳ್ಯಪ್ಪ ಸ್ವಾಗತಿಸಿದರು, ಎ. ಮಹಾಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಕಾರ್ಯದರ್ಶಿ ವಿ.ಎಂ. ಪ್ರಭುಸ್ವಾಮಿ
ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT