ಬುಧವಾರ, ನವೆಂಬರ್ 20, 2019
27 °C
ದೇಸಿ ಬೆಲ್ಲ ತಂದು ಮಾರುತ್ತಿರುವ ತಮಿಳುನಾಡಿನ ವ್ಯಾಪಾರಿಗಳು

ಕನ್ಯಾಕುಮಾರಿ ತಾಳೆ ಬೆಲ್ಲದ ಘಮಲು

Published:
Updated:
Prajavani

ದಾವಣಗೆರೆ: ನಗರದ ಕೆಲ ರಸ್ತೆಗಳ ಪಕ್ಕದಲ್ಲೀಗ ಕನ್ಯಾಕುಮಾರಿಯ ‘ತಾಳೆ ಬೆಲ್ಲ’ದ ಘಮಲು ಸೂಸುತ್ತಿದೆ. ತೆಂಗಿನ ಚಿಪ್ಪಿನ ಗಾತ್ರದಲ್ಲಿರುವ ತಾಳೆ ಬೆಲ್ಲದ ಅಚ್ಚುಗಳು ದಾರಿಹೋಕರ ಗಮನ ಸೆಳೆಯುತ್ತಿವೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ತಯಾರಿಸಿದ ತಾಳೆ ಬೆಲ್ಲವನ್ನು (ಕರುಪತ್ತಿ) ತಂದಿರುವ ಅಲ್ಲಿನ ವ್ಯಾಪಾರಿಗಳು, ನಗರದ ಡಾಂಗೆ ಪಾರ್ಕ್‌, ನಿಟುವಳ್ಳಿ ಮುಖ್ಯ ರಸ್ತೆ ಸೇರಿ ಕೆಲ ಪ್ರಮುಖ ರಸ್ತೆಗಳ ಪಕ್ಕದಲ್ಲಿಟ್ಟುಕೊಂಡು ಮಾರುತ್ತಿದ್ದಾರೆ. ಇದನ್ನು ಬೆರಗುಗಣ್ಣಿನಿಂದ ನೋಡುತ್ತಿರುವ ಜನ, ಬಂದು ರುಚಿ ನೋಡುತ್ತಿದ್ದಾರೆ. ತಾಳೆ ಬೆಲ್ಲದ ಮಹತ್ವ ಕೇಳಿದ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಖರೀದಿಯನ್ನೂ ಮಾಡುತ್ತಿದ್ದಾರೆ.

‘ತಾಳೆಯ ಎಳೆ ಕಾಯಿಯ ನೀರನ್ನು ಇಳಿಸಿ ಅದನ್ನು ಬೆಲ್ಲ ಮಾಡಲಾಗುತ್ತದೆ. ಒಂದು ಕೆ.ಜಿ. ‘ಕರುಪತ್ತಿ’ಯನ್ನು (ತಾಳೆಯ ಸಿಹಿ ಬೆಲ್ಲ) ₹ 120ಕ್ಕೆ ಮಾರುತ್ತಿದ್ದೇವೆ. ಇದನ್ನು ಅಡುಗೆ, ಪದಾರ್ಥಗಳಿಗೆ ಬಳಸುತ್ತಾರೆ. ಶುಂಠಿ, ಲವಂಗ, ಕಾಳಮೆಣಸು ಸೇರಿಸಿದ ‘ಪನಾಂಗ್‌ ಕರುಪತ್ತಿ’ (ಖಾರ–ಸಿಹಿ ಅನುಭವ ನೀಡುವ ಬೆಲ್ಲ) ಪುಟ್ಟ ಪುಟ್ಟ ಅಚ್ಚುಗಳನ್ನು ಒಂದು ಕೆ.ಜಿ.ಗೆ ₹ 220ಕ್ಕೆ ಕೊಡುತ್ತಿದ್ದೇವೆ. ಚಹಾ, ಕಷಾಯಕ್ಕೆ ಇದನ್ನು ಬಳಸಬಹುದಾಗಿದೆ. ಕೆಮ್ಮು, ನೆಗಡಿಯನ್ನು ಇದು ಕಡಿಮೆ ಮಾಡುತ್ತದೆ. ಬಿ.ಪಿ., ಶುಗರ್‌ ಇರುವವರು ತಾಳೆ ಬೆಲ್ಲ ಬಳಸಿದರೆ ಆರೋಗ್ಯ ಸುಧಾರಿಸುತ್ತದೆ’ ಎಂದ ಕನ್ಯಾಕುಮಾರಿಯ ವ್ಯಾಪಾರಿ ಪುಣಿಯಸಾಮಿ, ಬೆಲ್ಲದ ಅಚ್ಚಗಳನ್ನು ತೋರಿಸಿದರು.

‘ಕನ್ಯಾಕುಮಾರಿಯಿಂದ 1.5 ಟನ್‌ ಬೆಲ್ಲವನ್ನು ತಂದಿದ್ದೇವೆ. ನಾವು ಆರು ಜನ ಬಂದಿದ್ದು, ನಗರದ ಬೇರೆ ಬೇರೆ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದೇವೆ. 10 ಕೆ.ಜಿ.ಯ ಬಾಕ್ಸ್‌ಗಳನ್ನು ಮಾಡಿಕೊಂಡು ಬಂದಿದ್ದೇವೆ. ದಿನಕ್ಕೆ ಸುಮಾರು ₹ 5000ದಿಂದ ₹ 6,000ವರೆಗೆ ವಹಿವಾಟು ಆಗುತ್ತದೆ. ಒಂದು ಕೆ.ಜಿ. ಬೆಲ್ಲ ಮಾರಿದರೆ ₹ 50ರಿಂದ ₹ 60 ಲಾಭ ಸಿಗುತ್ತದೆ. ಮೂರ್ನಾಲ್ಕು ದಿನ ಒಂದು ಊರಿನಲ್ಲಿದ್ದು ಮಾರುತ್ತೇವೆ. ಬಳಿಕ ಇನ್ನೊಂದು ಊರಿಗೆ ಹೋಗುತ್ತೇವೆ. ಹತ್ತು–ಹನ್ನೆರಡು ದಿನಗಳಲ್ಲಿ ಖಾಲಿಯಾದ ಬಳಿಕ ಮತ್ತೆ ಹೋಗಿ ಬೆಲ್ಲವನ್ನು ತರುತ್ತೇವೆ’ ಎಂದ ಪುಣಿಯಸಾಮಿ, ರುಚಿ ನೋಡಲು ಬೆಲ್ಲದ ಚೂರನ್ನು ನೀಡಿದರು.

ಆರೋಗ್ಯಕ್ಕೆ ಒಳ್ಳೆಯದಾಗಿರುವ ತಾಳೆ ಬೆಲ್ಲವನ್ನು ತಮಿಳುನಾಡಿನಲ್ಲಿ ಹೆಚ್ಚು ತಯಾರಿಸಲಾಗುತ್ತಿದೆ. ಹಲವು ಆನ್‌ಲೈನ್‌ ಶಾಪಿಂಗ್‌ ಜಾಲತಾಣಗಳಲ್ಲೂ ತಾಳೆ ಬೆಲ್ಲವನ್ನು ಮಾರಲಾಗುತ್ತಿದ್ದು, ಒಂದು ಕೆ.ಜಿ. ಬೆಲ್ಲಕ್ಕೆ ₹ 350ರಿಂದ ₹ 550ರವರೆಗೂ ಬೆಲೆ ಇದೆ.

ಅಂಕಿ–ಅಂಶಗಳು

₹ 120 ಒಂದು ಕೆ.ಜಿ. ತಾಳೆ ಬೆಲ್ಲದ ದರ

₹ 220 ಒಂದು ಕೆ.ಜಿ. ಶುಂಠಿ, ಲವಂಗ ಮಿಶ್ರಿತ ಬೆಲ್ಲದ ಬೆಲೆ

1.50 ಟನ್‌ ಮಾರಾಟಕ್ಕೆ ದಾವಣಗೆರೆಗೆ ತಂದಿರುವ ಬೆಲ್ಲದ ಪ್ರಮಾಣ

ಪ್ರತಿಕ್ರಿಯಿಸಿ (+)