ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ನೋಟ: ಅಂದು ದಾವಣಗೆರೆ ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ!

ದಾವಣಗೆರೆ ಉತ್ತರ; ‘ಬಿ’ ಫಾರ್ಮ್‌ ವಿವಾದದಿಂದ ಇಬ್ಬರ ನಾಮಪತ್ರಗಳೂ ತಿರಸ್ಕೃತ
Last Updated 16 ಮಾರ್ಚ್ 2023, 6:24 IST
ಅಕ್ಷರ ಗಾತ್ರ

ದಾವಣಗೆರೆ: ಕ್ಷೇತ್ರ ಪುನರ್‌ವಿಂಗಡಣೆಯಿಂದ ದಾವಣಗೆರೆ ನಗರದಲ್ಲಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳು ಹೊರಹೊಮ್ಮಿದ ನಂತರ 2008ರ ಲ್ಲಿ ಮೊದಲ ಬಾರಿಗೆ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ನಡೆದ ನಾಟಕೀಯ ವಿದ್ಯಮಾನಗಳಿಂದಾಗಿ ಉತ್ತರ ಕ್ಷೇತ್ರದ ಕಣದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಇಲ್ಲದಂತಾಗಿತ್ತು.

ದಾವಣಗೆರೆಯನ್ನು ಸತತ 14 ವರ್ಷ ಶಾಮನೂರು ಶಿವಶಂಕರಪ್ಪ ಅಥವಾ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರತಿನಿಧಿಸುತ್ತಾ ಬಂದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯಾಗಿ ನಗರದಲ್ಲಿ ಎರಡು ಕ್ಷೇತ್ರಗಳು ರೂಪುಗೊಂಡಾಗ ‘ಯಾರಿಗೆ ಟಿಕೆಟ್‌’ ಎಂಬ ಪ್ರಶ್ನೆ ಉದ್ಭವವಾಗಿತ್ತು. ‘ಮುಸ್ಲಿಮರಿಗೆ ಟಿಕೆಟ್‌ ನೀಡಬೇಕು’ ಎಂಬ ಬೇಡಿಕೆಗೆ ಬಲಬಂದಿತ್ತು. ಆದರೆ, ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆಯಾದಾಗ ಮುಸ್ಲಿಮರಲ್ಲಿ ಸ್ಪರ್ಧಿಸುವ ಹುರುಪು ಕಡಿಮೆಯಾಗಿಬಿಟ್ಟಿತು. ಯಾಕೆಂದರೆ ಮುಸ್ಲಿಂ ಸಮುದಾಯ ಹೆಚ್ಚಿರುವ ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ ಅವರ ಹೆಸರು ಪ್ರಕಟವಾಗಿತ್ತು. ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿಯ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ.

ಎರಡು ಬಾರಿ ಶಾಸಕರಾಗಿ, ಸಚಿವರೂ ಆಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರಬಲ ಆಕಾಂಕ್ಷಿಯಾಗಿದ್ದರು. ಉತ್ತರ ಕ್ಷೇತ್ರದಲ್ಲಾದರೂ ಮುಸ್ಲಿಮರಿಗೆ ಟಿಕೆಟ್‌ ನೀಡಬೇಕು ಎಂಬುದು ಹೈಕಮಾಂಡ್‌ ಇರಾದೆಯಾಗಿತ್ತು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರೂ ದಾವಣಗೆರೆ ಜಿಲ್ಲೆಯ ಒಂದು ಕ್ಷೇತ್ರದಲ್ಲಾದರು ಮುಸ್ಲಿಮರಿಗೆ ಟಿಕೆಟ್‌ ನೀಡಬೇಕು ಎಂದು ಹೇಳಿದ್ದರು

ಯಾರಿಗೆ ಪಕ್ಷದಿಂದ ‘ಬಿ’ ಫಾರ್ಮ್‌ ಸಿಗುತ್ತದೆ ಎಂಬುದು ನಾಮಪತ್ರ ಸಲ್ಲಿಸಲು ನಿಗದಿಯಾದ ಕೊನೇ ದಿನದವರೆಗೆ ಗೊತ್ತಾಗಿರಲಿಲ್ಲ. ‘ಬಿ’ ಫಾರ್ಮ್‌ ಇಲ್ಲದೇ ಮಲ್ಲಿಕಾರ್ಜುನ, ಸೈಯದ್‌ ಸೈಫುಲ್ಲಾ ನಾಮಪತ್ರ ಸಲ್ಲಿಸಿದ್ದರು.

ಬೆಂಗಳೂರಿನಿಂದ ವೀಕ್ಷಕರಿಬ್ಬರು ಬಂದಿದ್ದರು. ಅವರು ತಂದಿದ್ದ ‘ಬಿ’ ಫಾರ್ಮ್‌ನಲ್ಲಿ ಸೈಯದ್‌ ಸೈಫುಲ್ಲಾ ಹೆಸರಿತ್ತು. ಸೈಫುಲ್ಲಾ ಮತ್ತು ಮಲ್ಲಿಕಾರ್ಜುನ ಬೆಂಬಲಿಗರ ನಡುವೆ ಗಲಾಟೆಗಳಾದವು. ಇತ್ತ ಸೈಫುಲ್ಲಾ ಅವರ ಮನವೊಲಿಸುವ ಕೆಲಸ ನಡೆಯಿತು. ಸೈಫುಲ್ಲಾ ತನ್ನ ಹೆಸರನ್ನು ಹೊಡೆದು ಹಾಕಿ ಮಲ್ಲಿಕಾರ್ಜುನ ಅವರ ಹೆಸರನ್ನು ಬರೆದರು. ಅಷ್ಟು ಹೊತ್ತಿಗೆ ಸಮಯವೂ ಮೀರಿತ್ತು. ತಿದ್ದಿದ ‘ಬಿ’ಫಾರ್ಮ್‌ ಸ್ವೀಕೃತವಾಗಲಿಲ್ಲ. ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಇಬ್ಬರ ನಾಮಪತ್ರಗಳೂ ತಿರಸ್ಕೃತಗೊಂಡಿತು.

ಮಾಯಕೊಂಡದಿಂದ ಸತತ ಮೂರು ಬಾರಿ ಶಾಸಕರಾಗಿದ್ದ ಎಸ್‌.ಎ. ರವೀಂದ್ರನಾಥ್‌ ಅವರು ಪುನರ್‌ವಿಂಗಡಣೆಯ ಬಳಿಕ ಮಾಯಕೊಂಡ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿದ್ದರಿಂದ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬರಬೇಕಾಯಿತು.

ಕಣದಲ್ಲಿ 11 ಮಂದಿ ಇದ್ದರು. ಅಭ್ಯರ್ಥಿ ಇಲ್ಲದ ಕಾಂಗ್ರೆಸ್‌ ಪಕ್ಷವು ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಲೋಕ್‌ ಜನಶಕ್ತಿ ಪಾರ್ಟಿಯಿಂದ ಕಣಕ್ಕಿಳಿದಿದ್ದ ಮಟನ್‌ ಮಹಮ್ಮದ್‌ ಅಲಿ ಜೆ. ಅವರಿಗೆ ಬೆಂಬಲ ಸೂಚಿಸಿತ್ತು.

ಪ್ರಬಲ ಸ್ಪರ್ಧೆ ಒಡ್ಡಲು ಕಾಂಗ್ರೆಸ್‌ನಿಂದ ಅಭ್ಯರ್ಥಿಯೇ ಇಲ್ಲದ್ದರಿಂದ ಎಸ್‌.ಎ. ರವೀಂದ್ರನಾಥ್‌ 53,910 ಮತಗಳ ಭಾರಿ ಅಂತರದಿಂದ ಜಯಗಳಿಸಿ 4ನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿ ಸಚಿವರಾದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ.ಎಂ. ಸತೀಶ್‌ 21,888 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು. ಕಾಂಗ್ರೆಸ್‌ ಬೆಂಬಲಿತ ಮಟನ್‌ ಮಹಮ್ಮದ್‌ ಅಲಿ ಜೆ. ಅವರಿಗೆ 2,151 ಮತಗಳಷ್ಟೇ ಬಿದ್ದಿದ್ದವು.

‘ನನಗೂ ಮನಸ್ಸಿರಲಿಲ್ಲ’

‘ನನಗೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಟಿಕೆಟ್‌ ನೀಡಿದ್ದರೆ ಗೆಲ್ಲುತ್ತಿದ್ದೆ. ಉತ್ತರದಿಂದ ಟಿಕೆಟ್‌ ನೀಡಿದರೆ ಗೆಲ್ಲುವುದು ಕಷ್ಟ ಇತ್ತು. ನಾಮಪತ್ರ ಸಲ್ಲಿಸಿದ್ದರೂ ಬಹಳ ಉತ್ಸಾಹ ಏನು ಇರಲಿಲ್ಲ’ ಎಂದು ಸೈಯದ್‌ ಸೈಫುಲ್ಲಾ ಆ ದಿನಗಳನ್ನು ನೆನಪಿಸಿಕೊಂಡರು.

‘ಯಾರಿಗೆ ‘ಬಿ’ಫಾರ್ಮ್‌ ಎಂಬುದು ಗೊತ್ತಿರಲಿಲ್ಲ. ‘ಬಿ’ಫಾರ್ಮ್‌ ಸಿಗುವ ವಿಶ್ವಾಸದಲ್ಲಿದ್ದ ಮಲ್ಲಿಕಾರ್ಜುನ ಅವರೇ ವೀಕ್ಷಕರನ್ನು ಬರಮಾಡಿಕೊಂಡಿದ್ದರು. ನನ್ನ ಹೆಸರು ಇದೆ ಎಂದು ಗೊತ್ತಾದಾಗ ಮಲ್ಲಿಕಾರ್ಜುನ ಅವರ ಅಭಿಮಾನಿಗಳು ವೀಕ್ಷಕರನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ವೀಕ್ಷಕರಿಬ್ಬರು ಪಾಲಿಕೆ ಬಳಿ ಆವರಣ ಗೋಡೆ ಹಾರಿ ಓಡಿ ಹೋಗಿದ್ದರು’ ಎಂದು ಸ್ಮರಿಸಿದರು.

‘ಎಸ್‌ಎಸ್‌ಎಂ ಕುಟುಂಬದವರೆಲ್ಲ ಒತ್ತಾಯಿಸಿದರು. ನನಗೂ ಮನಸ್ಸಿರದ ಕಾರಣ ನನ್ನ ಹೆಸರನ್ನು ಹೊಡೆದು ಅವರ ಹೆಸರನ್ನು ಬರೆದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT