ಸೋಮವಾರ, ನವೆಂಬರ್ 18, 2019
22 °C
20ರವರೆಗೆ ನಿರಂತರ ಕಾರ್ಯಾಗಾರ, ತಜ್ಞ ವೈದ್ಯರು ಭಾಗಿ

ಕರ್ನಾಟಕ ಮಕ್ಕಳ ಸಂಸ್ಥೆಯ ಸಮ್ಮೇಳನ ಇಂದಿನಿಂದ

Published:
Updated:

ದಾವಣಗೆರೆ: ಇಲ್ಲಿನ ಜೆಜೆಎಂ ಮೆಡಿಕಲ್ ಕಾಲೇಜು ಹಾಗೂ ಎಸ್‌.ಎಸ್‌. ಮೆಡಿಕಲ್ ಕಾಲೇಜು ಹಾಗೂ ದಾವಣಗೆರೆ ಮಕ್ಕಳ ಜಿಲ್ಲಾ ಘಟಕಗಳ ವತಿಯಿಂದ ದಕ್ಷಿಣ ಭಾರತ ವಲಯ ಹಾಗೂ ಕರ್ನಾಟಕ ಮಕ್ಕಳ ಸಂಸ್ಥೆಯ ವಾರ್ಷಿಕ ಸಮ್ಮೇಳನ ಎಸ್‌.ಎಸ್‌. ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ.

‘1200 ಮಕ್ಕಳ ವೈದ್ಯರು, ದೇಶ ವಿದೇಶಗಳಿಂದ 250 ತಜ್ಞ ವೈದ್ಯರು ಪಾಲ್ಗೊಂಡು ತರಬೇತಿ ನೀಡುವರು. ಅ.17ರಂದು ಬಾಪೂಜಿ ಮಕ್ಕಳ ಸಂಸ್ಥೆಯಲ್ಲಿ 10 ವಿವಿಧ ಕಾರ್ಯಾಗಾರಗಳು ನಡೆಯಲಿದ್ದು, ಅ.18ರಿಂದ 20ರವರೆಗೆ ನಿರಂತರ ಚರ್ಚೆಗಳು, ಹೊಸ ಚಿಕಿತ್ಸೆಯ ಮಂಡನೆಗಳು ಹಾಗೂ ಮಕ್ಕಳ ಕಾಯಿಲೆಯ ಚಿಕಿತ್ಸಾ ವಿಧಾನಗಳನ್ನು ಸಂಪನ್ಮೂಲ ವ್ಯಕ್ತಿಗಳು ಹಂಚಿಕೊಳ್ಳಲಿದ್ದಾರೆ’ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಎನ್‌.ಕೆ. ಕಾಳಪ್ಪನವರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಕ್ಕಳ ಆರೋಗ್ಯ ದೇಶದ ಆರೋಗ್ಯ’ ಸಮ್ಮೇಳನದ ಧ್ಯೇಯವಾಕ್ಯವಾಗಿದ್ದು, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಎಚ್‌1ಎನ್‌1, ಡೆಂಗೆ, ಹೃದಯಸಂಬಂಧಿ ಕಾಯಿಲೆ, ಮೂರ್ಚೆ ರೋಗ, ರಕ್ತಹೀನತೆ, ಶ್ವಾಸಕೋಶ ಸಂಬಂಧಿ, ಮೂತ್ರಪಿಂಡ ಕಾಯಿಲೆಗಳಿಗಾಗಿ ಕ್ಲಿಷ್ಟಕರ ಚಿಕಿತ್ಸೆಯ ವಿಧಾನಗಳನ್ನು ಚರ್ಚೆ ಹಾಗೂ ಉಪನ್ಯಾಸದ ಮೂಲಕ ಮಂಡಿಸಲಾಗುವುದು’ ಎಂದು ಹೇಳಿದರು.

‘ಇಂಗ್ಲೆಂಡ್, ಅಮೆರಿಕ, ಮಸ್ಕತ್, ಅಸ್ಟ್ರೇಲಿಯ, ಜರ್ಮನಿಯ ತಜ್ಞ ವೈದ್ಯರಲ್ಲದೇ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಿಂದ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧ ಮಂಡಿಸುವರು’ ಎಂದು ಹೇಳಿದರು.

‘ಅ.17ರಂದು ಬೆಳಿಗ್ಗೆ 9ಕ್ಕೆ ದಕ್ಷಿಣ ಭಾರತದ ಐಎಪಿ ಉಪಾಧ್ಯಕ್ಷ ಡಾ. ಶ್ರೀನಾಥ್ ಮುಗಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯದ ಐಎಪಿ ಘಟಕದ ಅಧ್ಯಕ್ಷ ಡಾ.ಎನ್‌.ಕೆ. ಕಾಳಪ್ಪ, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ಎಸ್‌. ಪ್ರಸಾದ್, ಡಾ. ಮುರುಗೇಶ್‌ ಪಾಲ್ಗೊಳ್ಳುವರು’ ಎಂದು ಹೇಳಿದರು.

‘ಅ.18ರಂದು ಬೆಳಿಗ್ಗೆ 9.30ಕ್ಕೆ ಐಎಪಿ ಚುನಾಯಿತ ಅಧ್ಯಕ್ಷ ರಾಷ್ಟ್ರಾಧ್ಯಕ್ಷ ಡಾ.ಭಕುಲ್ ಪರೇಖ ಅವರು ಕಾರ್ಯಗಾರವನ್ನು ಉದ್ಘಾಟಿಸಲಿದ್ದು, ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಜೋಷಿ ಹಾಗೂ ಡಾ. ವಿನಯ ಕುಲಕರ್ಣಿ ಭಾಗವಹಿಸುವರು’ ಎಂದು ಹೇಳಿದರು.

‘ಅ.19ರಂದು ಸಂಜೆ 7ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಗೌರವಾನ್ವಿತ ಅತಿಥಿಗಳಾಗಿ ಮಾಜಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಭಾಗವಹಿಸುವರು. ಅತಿಥಿಗಳಾಗಿ ಐಎಪಿ ರಾಷ್ಟ್ರೀಯ ಅಧ್ಯಕ್ಷ ಡಾ. ದಿಗಂತ್ ಶಾಸ್ತ್ರಿ ಭಾಗವಹಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ವೈದ್ಯರನ್ನು ಸನ್ಮಾನಿಸಲಾಗುವುದು. ಅಲ್ಲದೇ ಕನ್ನಡ ಕೋಗಿಲೆ ಖಾಸಿಂ ಅಲಿಯವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

ರಾಜ್ಯ ಮಕ್ಕಳ ಸಂಸ್ಥೆಯ ಕಾರ್ಯದರ್ಶಿ ಡಾ. ಮಧುಪೂಜಾರ್ ಮಾತನಾಡಿ, ‘ಎಸ್‌.ಎಸ್. ಮೆಡಿಕಲ್ ಕಾಲೇಜಿನ ಮೈದಾನದಲ್ಲಿ ಪೆಡಿಕಾನ್ ವಿಲೇಜ್ ನಿರ್ಮಾಣ ಮಾಡಲಿದ್ದು, ಅಲ್ಲಿ ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಯನ್ನು ನುರಿತ ವೈದ್ಯರು ನೀಡಲಿದ್ದಾರೆ’ ಎಂದು ಹೇಳಿದರು.

ಐಎಪಿ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸಂತ್‌ ಕುಮಾರ್, ಕಾರ್ಯದರ್ಶಿ ಡಾ.ವರುಣ್ ಕುಸಗುರ್, ಎಸ್‌.ಎಸ್‌. ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್‌.ಬಿ. ಮುರುಗೇಶ್, ಡಾ.ಬಿ.ಎಸ್. ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)