ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಕಿರುಕುಳ ಬೇಡ: ರತ್ನಪ್ರಭಾ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ ಅಧಿಕಾರಿಗಳಲ್ಲಿ ನಿರ್ಧಾರ ಕೈಗೊಳ್ಳುವ ಶಕ್ತಿ ಕಡಿಮೆಯಾಗಿರುವುದರಿಂದ ಜನರಿಗೆ ಅನಗತ್ಯ ಕಿರುಕುಳವಾಗುತ್ತಿದೆ’ ಎಂದು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಶನಿವಾರ ವಿಷಾದ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಚಿವಾಲಯದ ಪತ್ರಾಂಕಿತ ಅಧಿಕಾರಿಗಳ ಸಂಘದ ವಜ್ರ ಮಹೋತ್ಸವ ಉದ್ಘಾಟಿಸಿದ ಅವರು, ‘ವಿಧಾನ ಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳೇ ಸರ್ಕಾರ. ಇದನ್ನು ಅರಿತು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಜನ ನಮ್ಮ ಬಳಿ ಬರುತ್ತಾರೆ. ನಾವು ಇಲ್ಲಸಲ್ಲದ ನಿಯಮಗಳನ್ನು ಹೇಳಿ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತೇವೆ. ದೂರದ ಊರುಗಳಿಂದ ಕಷ್ಟಪಟ್ಟು ವಿಧಾನಸೌಧಕ್ಕೆ ಬರುವ ಜನ ಹಿಡಿಶಾಪ ಹಾಕುತ್ತಾ ವಾಪಸ್‌ ಹೋಗುತ್ತಾರೆ. ಇದರಿಂದ ನಮಗೆ ಒಳ್ಳೆಯದಾಗುವುದಿಲ್ಲ’ ಎಂದರು.

‘ಜನರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶದಿಂದ ನಿಯಮಗಳನ್ನು ರೂಪಿಸಲಾಗಿದೆಯೇ ವಿನಾ ಕೆಟ್ಟದು ಮಾಡಬೇಕೆಂದಲ್ಲ. ಅಧಿಕಾರಿ ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ಮಾಡುವುದಕ್ಕೆ ಈ ನಿಯಮಗಳಿವೆ’ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು.

‘ರಾಜ್ಯದ ಒಟ್ಟು ಜನಸಂಖ್ಯೆ 6.25 ಕೋಟಿ. ಇದರಲ್ಲಿ ಸುಮಾರು ಆರು ಲಕ್ಷ ಮಂದಿ ಸರ್ಕಾರಿ ನೌಕರರು. ನಮಗೆ ಸರ್ಕಾರಿ ನೌಕರಿ ಸಿಕ್ಕಿರುವುದು ನಿಜಕ್ಕೂ ಅದೃಷ್ಟ. ಶುಕ್ರವಾರ ಪತ್ರಿಕೆಯೊಂದರಲ್ಲಿ ಸಣ್ಣ ಸುದ್ದಿ ಬಂದಿತ್ತು. ಉತ್ತರ ಪ್ರದೇಶದಲ್ಲಿ ಕಾನ್‌ಸ್ಟೆಬಲ್‌ ಹುದ್ದೆಗೆ ಎಂಎಸ್‌ಸಿ, ಎಂಫಿಎಲ್‌, ಪಿಎಚ್‌ಡಿ ಪಡೆದ ಅಭ್ಯರ್ಥಿಗಳೂ ಅರ್ಜಿ ಹಾಕಿದ್ದಾರೆ. ಸರ್ಕಾರಿ ಉದ್ಯೋಗ ಸಿಗುವುದು ಎಷ್ಟು ಕಷ್ಟ ಎಂಬುದಕ್ಕೆ ಇದು ನಿದರ್ಶನ’ ಎಂದು ಅವರು ನುಡಿದರು.

‘ಅಧಿಕಾರಿಗಳು, ನೌಕರರು ಸಮಯ ಪರಿಪಾಲನೆ ಮಾಡುತ್ತಿಲ್ಲ. ಇದರ ಪರಿಣಾಮ ಆಡಳಿತದ ಮೇಲಾಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಹಳೇ ಪಿಂಚಣಿ ಸಮಸ್ಯೆ ಇತ್ಯರ್ಥ
35 ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ನಿವೃತ್ತ ನೌಕರರೊಬ್ಬರ ಪಿಂಚಣಿ ಸಮಸ್ಯೆಯನ್ನು ಕಳೆದ ವಾರ ತಾವು ಇತ್ಯರ್ಥ ಮಾಡಿದ್ದಾಗಿ ರತ್ನಪ್ರಭಾ ತಿಳಿಸಿದರು.

ಈ ‍ಪಿಂಚಣಿ ಸಮಸ್ಯೆಯನ್ನು ಟ್ವಿಟರ್‌ನಲ್ಲಿ ನನ್ನ ಗಮನಕ್ಕೆ ತರಲಾಗಿತ್ತು. ಕೂಡಲೇ ಗಮನಹರಿಸಿದೆ. ಸರ್ಕಾರಿ ಅಧಿಕಾರಿಗಳು ಜನರಿಗಷ್ಟೇ ಅಲ್ಲ, ತಮ್ಮ ಜೊತೆ ಕೆಲಸ ಮಾಡುವ ಸಹೊದ್ಯೋಗಿಗಳಿಗೂ ತೊಂದರೆ ಕೊಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT