ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದವರ ಸಂಭ್ರಮ; ಸೋತವರಿಗೆ ನಿರಾಶೆ

ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್ ಬಿಗಿ ಭದ್ರತೆ
Last Updated 14 ನವೆಂಬರ್ 2019, 14:17 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶಕ್ಕಾಗಿ ಸೇರಿದ ಕಾರ್ಯಕರ್ತರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ. ಯಾವ ಅಭ್ಯರ್ಥಿಗಳು ಗೆಲ್ಲುತ್ತಾರೋ ಎಂಬ ಕಾತರ. ಗೆದ್ದವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರೆ. ಸೋತ ಅಭ್ಯರ್ಥಿಗಳು ಪೇಲವ ಮುಖ ಹಾಕಿಕೊಂಡು ಹೋಗುತ್ತಿದ್ದರು.

ನಗರದ ಡಿಆರ್‌ಆರ್ ಪ್ರೌಢಶಾಲೆಯಲ್ಲಿ ಮಹಾನಗರ ಫಲಿತಾಂಶದ ವೇಳೆ ಕಂಡುಬಂದ ದೃಶ್ಯಗಳು ಇವು. ಹೂವಿನ ಹಾರಗಳು, ಪಕ್ಷದ ಬಾವುಟಗಳನ್ನು ಹಿಡಿದು ತಮ್ಮ ಅಭ್ಯರ್ಥಿಗಳು ಯಾವಾಗ ಗೆದ್ದು ಬರುತ್ತಾರೋ ಎಂದು ಬೆಳಿಗ್ಗೆಯಿಂದ ತುದಿಗಾಲಿನಲ್ಲಿ ಕಾಯುತ್ತಾ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಭ್ಯರ್ಥಿ ಗೆಲುವಿನ ಖುಷಿಯಲ್ಲಿ ಹೊರ ಬರುತ್ತಿದ್ದಂತೆ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗಿದರು. ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿಯುತ್ತಿದ್ದರು. ನಿಷೇಧಾಜ್ಞೆ ಇದ್ದುದರಿಂದ ಪಟಾಕಿ ಸಿಡಿಸುವುದು, ಅಕ್ರಮ ಗುಂಪು ಸೇರುವುದಕ್ಕೆ ಹಾಗೂ ವಿಜಯೋತ್ಸವಕ್ಕೆ ಅವಕಾಶವಿರಲಿಲ್ಲ. ಶಾಲೆಯಿಂದ 100 ಮೀಟರ್ ದೂರದಲ್ಲಿ ಕಾರ್ಯಕರ್ತರು ನಿಂತಿದ್ದರು.

ಅಗ್ನಿಶಾಮಕ ಠಾಣೆ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಕ್ಕದ ವಸತಿ ಗೃಹದ ಎದುರಿನಲ್ಲಿ ಜನ ಜಮಾಯಿಸಿದ್ದರು. ಪಿ.ಬಿ. ರಸ್ತೆಯ ಒಂದು ಬದಿಯಲ್ಲಿ ಕಾರ್ಯಕರ್ತರಿಗೆ ನಿಲ್ಲುವುದಕ್ಕೂ ಮತ್ತೊಂದು ಬದಿಯಲ್ಲಿ ಪೊಲೀಸರು, ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಮತ ಎಣಿಕೆಯ ಕೇಂದ್ರದೊಳಗೆ ಹೋಗಲು ಅವಕಾಶ ಮಾಡಿಕೊಡಲಾಗಿತ್ತು.

ಗೆದ್ದ ಅಭ್ಯರ್ಥಿಗಳು ಬ್ಯಾರಿಕೇಡ್‌ ಬಳಿ ಬಂದು ಕಾರ್ಯಕರ್ತರಿಗೆ ಹಸ್ತಲಾಘವ ಮಾಡುತ್ತಿದ್ದರು. ತಮ್ಮ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರನ್ನು ಅಪ್ಪಿಕೊಂಡು ಖುಷಿಪಟ್ಟರು. ಕಾರ್ಯಕರ್ತರು ಮತ್ತು ಬೆಂಬಲಿಗರು ಅಭ್ಯರ್ಥಿಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವಕ್ಕೆ ಅವಕಾಶ ಕಲ್ಪಿಸದ ಕಾರಣ, ತಮ್ಮ ವಾರ್ಡ್‌ಗಳಲ್ಲಿ ಬಂದು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂತು.

ಪೊಲೀಸ್ ಬಿಗಿ ಭದ್ರತೆ:ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎ.ಎಸ್‌ಪಿ ರಾಜೀವ್‌, ಡಿಎಸ್‌ಪಿ ಮಂಜುನಾಥ್ ಕೆ.ಗಂಗಲ್ ಇತರರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆ ಪರಿಶೀಲಿಸಿದರು. ‘ನಿಷೇಧಾಜ್ಞೆ ಇರುವುದರಿಂದ ಗುಂಪುಗೂಡಬೇಡಿ, ಮುಂದೆ ಹೋಗಿ’ ಎಂದು ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದರು. ಪಿ.ಬಿ.ರಸ್ತೆಯ ಬದಿ ಬ್ಯಾರಿಕೇಡ್ ಅಳವಡಿಸಿ ಮತ ಎಣಿಕೆ ಕೇಂದ್ರದತ್ತ ಯಾರೂ ಸುಳಿಯದಂತೆ ನೋಡಿಕೊಂಡರು. ಬಿಜೆಪಿ ಅಭ್ಯರ್ಥಿಯೊಬ್ಬರ ವಿಜಯೋತ್ಸವ ಆಚರಿಸಲು ಕಾರ್ಯಕರ್ತರು ಒಮ್ಮೆಲೆ ನುಗ್ಗಿದಾಗ ಪೊಲೀಸರು ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಿದರು. ಕೆಲವರಿಗೆ ಲಾಠಿ ಏಟಿನ ರುಚಿ ತೋರಿಸಿದರು.

ಐಸ್‌ ಕ್ರೀಂ, ಕಡಲೆಕಾಯಿ ವ್ಯಾಪಾರ:ಮತ ಎಣಿಕೆ ಕೇಂದ್ರದಿಂದ ಹೊರಗೆ ಕಾಯುತ್ತಾ ನಿಂತಿದ್ದ ಕಾರ್ಯಕರ್ತರು ಬಿಸಿಲಿನ ತಾಪ ತಾಳಲಾರದೆ ಐಸ್‌ಕ್ರೀಂ, ನೀರಿನ ಮೊರೆ ಹೋದರು. ಅಲ್ಲದೇ ಕಡಲೆಕಾಯಿ, ಸೌತೆಕಾಯಿ ವ್ಯಾಪಾರವೂ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT