ಬುಧವಾರ, ಅಕ್ಟೋಬರ್ 20, 2021
28 °C

ಕಾಂಗ್ರೆಸ್‌ನಿಂದ ಬಿಜೆಪಿಗೆ ಬರಲು ತುದಿಗಾಲಲ್ಲಿ ಹಲವರು: ಬೈರತಿ ಬಸವರಾಜ ಬೈರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬರಲು ಕೆಲವರು ತುದಿಗಾಲ ಮೇಲೆ ನಿಂತಿದ್ದಾರೆ. ಎಷ್ಟು ಜನ ನಮ್ಮ ಪಕ್ಷಕ್ಕೆ ಬರುತ್ತಾರೆಂಬುದನ್ನು ಮುಂದಿನ ದಿನಗಳಲ್ಲಿ ಪರದೆ ಮೇಲೆ ನೋಡಿ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಬೈರತಿ ಹೇಳಿದರು.

‘ಈ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರಲ್ಲಿ ಚರ್ಚೆ ನಡೆಯುತ್ತಿದೆ. ಬಿಜೆಪಿಗೆ ಸೇರ್ಪಡೆಯಾಗುವವರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನವಾಗಲಿದೆ. ಬಿಜೆಪಿಯಿಂದ ಯಾರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಹೋಗುವವರಿಲ್ಲ, ಹೋಗುವುದೂ ಇಲ್ಲ. ನಾವೆಲ್ಲರೂ ಬಿಜೆಪಿಯಲ್ಲೇ ಭದ್ರವಾಗಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಯನ್ನೂ ಎದುರಿಸುತ್ತೇವೆ’ ಎಂದು ಎಂದು ಸುದ್ದಿಗಾರರಿಗೆ ತಿಳಿಸಿದರು.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರತಿಭಟನೆಯಿಂದ ಏನೂ ಆಗುವುದಿಲ್ಲ. ಜನರ ಬೆಂಬಲ ಬಿಜೆಪಿಗೆ ಇದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲುಬರಗಿ ಮಹಾ ನಗರ ಪಾಲಿಕೆ ಚುನಾವಣೆಗಳ ಫಲಿತಾಂಶವೇ ಇದಕ್ಕೆ ಸಾಕ್ಷಿ. ಸರ್ಕಾರಗಳನ್ನು ವಿರೋಧಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ಬೇರೆ ವಿಚಾರಗಳೇ ಇಲ್ಲ. ಅದಕ್ಕಾಗಿ ಬೆಲೆ ಏರಿಕೆ ಮುಂದಿಟ್ಟುಕೊಂಡು ಪ್ರತಿಭಟಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಪ್ರತಿಯೊಂದು ವಿಚಾರವೂ ಜನರಿಗೆ ಅರ್ಥವಾಗುತ್ತದೆ. ಭಾರತ ಬಂದ್ ಮಾಡುವ ಅಗತ್ಯವಿರಲಿಲ್ಲ. ಆದರೂ, ಬಂದ್‍ಗೆ ಕರೆ ನೀಡಿದ್ದಾರೆ ಎಂದು ಹೇಳಿದರು.

ನಾನು ಚಡ್ಡಿ ಹಾಕುವ ಕಾಲದಲ್ಲಿ ಬೆಲೆ ಇಷ್ಟು ಇರಲಿಲ್ಲ: ಸಿದ್ದೇಶ್ವರ

‘ನಾನು ಚಡ್ಡಿ ಹಾಕಿಕೊಳ್ಳುವ ಕಾಲದಲ್ಲಿ ಪೆಟ್ರೋಲ್‌ಗೆ 50 ಪೈಸೆ ಇತ್ತು. ಪ್ಯಾಂಟ್‌ ಹಾಕುವ ಕಾಲಕ್ಕೆ ಜಾಸ್ತಿ ಆಗಿತ್ತು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಕ್ವಿಂಟಲ್‌ ಗೋಧಿಗೆ ₹ 30, ಜೋಳಕ್ಕೆ ₹ 30 ಇತ್ತು. ಈಗ ₹ 3 ಸಾವಿರ ದಾಟಿದೆ. ಆಗ ಕೂಲಿ ₹ 5 ಇತ್ತು. ಅದನ್ನೆಲ್ಲ ಈಗ ಕೇಳುತ್ತಾ ಕೂರೊಕ್ಕಾಗುತ್ತಾ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ರೈತರಿಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಭಾರತ ಬಂದ್ ಮಾಡುವ ಅವಶ್ಯಕತೆಯೇ ಇರಲಿಲ್ಲ ಎಂದು ತಿಳಿಸಿದರು.

ಕೊರೊನಾ ಕಾಲದಲ್ಲಿ ಬಂದ್‌ ಮಾಡಿದರೆ ರೈತರಿಗೆ, ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಹಾಲು, ಹಣ್ಣು, ತರಕಾರಿ, ಸೊಪ್ಪು ಬೆಳೆಯುವವರು, ಮಾರುವವರಿಗೆ ತೊಂದರೆಯಾಗುತ್ತದೆ ಎಂದರು.‘

‘ರೂಪಾಯಿ ಮೌಲ್ಯ ಕಡಿಮೆಯಾದಂತೆಲ್ಲ ಬೆಲೆ ಏರಿಕೆಯಾಗುತ್ತದೆ. ಇದೆಲ್ಲ ಸಹಜ. ನಾವೂ ಸಹ ಬೆಲೆ ಏರಿಕೆ ನಿಯಂತ್ರಣಕ್ಕೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು