ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡರ ಕುಟುಂಬಕ್ಕೆ ಸೋಲು ಗೆಲುವಿನ ಮಿಶ್ರಫಲ

ರಾಮನಗರದಲ್ಲಿ ಗೆದ್ದು ಮುಖ್ಯಮಂತ್ರಿಯಾದರು ಎಚ್‌ಡಿಡಿ, ಎಚ್‌ಡಿಕೆ: ಕನಕಪುರ, ಸಾತನೂರಿನಲ್ಲಿ ಸಿಹಿ–ಕಹಿ
Last Updated 10 ಏಪ್ರಿಲ್ 2018, 10:55 IST
ಅಕ್ಷರ ಗಾತ್ರ

ರಾಮನಗರ: ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬಕ್ಕೆ ರಾಮನಗರ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ಕುಟುಂಬದ ಇಬ್ಬರು ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿಯಾದವರು. ಆದರೆ ಇಲ್ಲಿಯೇ ಸೋಲಿನ ರುಚಿಯನ್ನೂ ಕಂಡಿದ್ದಾರೆ. ಗೌಡರ ಕುಟುಂಬಕ್ಕೆ ಇಲ್ಲಿನ ಮತದಾರರು ಮಿಶ್ರಫಲ ನೀಡಿದ್ದಾರೆ.

ಮೊದಲಿಗೆ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರಿಗೆ ಸಿಹಿ ದಕ್ಕಿತು. 1985ರ ಚುನಾವಣೆಯಲ್ಲಿ ಗೌಡರು ಮೊದಲ ಬಾರಿಗೆ ಇಲ್ಲಿ ಜನತಾ ಪಕ್ಷದಿಂದ ಕಣಕ್ಕೆ ಇಳಿದಿದ್ದರು. ಜೊತೆಗೆ ತಮ್ಮ ತವರೂರು ಹೊಳೆ ನರಸೀಪುರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು. ಎರಡೂ ಕ್ಷೇತ್ರಗಳಲ್ಲಿ ಜಯ ಅವರದ್ದಾಯಿತು.

wಸಾತನೂರಿನ ಚುನಾವಣೆಯಲ್ಲಿ ಗೌಡರು ಬರೋಬ್ಬರಿ 45,612 ಮತ ಪಡೆದರೆw, ಅವರ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ. ಶಿವಕುಮಾರ್ 29,612 ಮತ ಗಳಿಸಲಷ್ಟೇ ಶಕ್ತವಾದರು. ಅಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಗೌಡರು ಹೊಳೆನರಸೀಪುರ ಕ್ಷೇತ್ರ ಉಳಿಸಿಕೊಂಡು ಸಾತನೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಅವರದ್ದೇ ಪಕ್ಷದ ಕೆ.ಎಲ್. ಶಿವಲಿಂಗೇಗೌಡ ಗೆಲುವಿನ ನಗೆ ಬೀರಿದರು.

1989ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ಜನತಾ ಪರಿವಾರ ಇಬ್ಬಾಗವಾಗಿತ್ತು. ಗೌಡರು ಸಮಾಜವಾದಿ ಜನತಾ ಪಕ್ಷದೊಂದಿಗೆ ಗುರುತಿಸಿ
ಕೊಂಡಿದ್ದರು. ಎಂದಿನಂತೆ ಹೊಳೆ ನರಸೀಪುರ ಕ್ಷೇತ್ರದ ಜೊತೆಗೆ ಈ ಬಾರಿ ಸಾತನೂರು ಬದಲಾಗಿ ಕನಕಪುರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದರು. ಆದರೆ ಎರಡೂ ಕಡೆ ಅವರನ್ನು ಮತದಾರರು ತಿರಸ್ಕರಿಸಿದರು. ಕನಕಪುರದಲ್ಲಿ ಜನತಾ ದಳದ ಅಭ್ಯರ್ಥಿಯಾಗಿದ್ದ ಪಿಜಿಆರ್ ಸಿಂಧ್ಯಾ 26,614 ಮತಗಳೊಂದಿಗೆ ವಿಜಯ ಪತಾಕೆ ಹಾರಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮರಿಲಿಂಗೇಗೌಡ 32,245 ಮತಗಳೊಂದಿಗೆ ದ್ವಿತೀಯ ಸ್ಥಾನ ಪಡೆದರು. ದೇವೇಗೌಡರು 20,224 ಮತಗಳೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಅಂದಿನ ಚುನಾವಣೆಯಲ್ಲಿ ಗೌಡರ ನೇತೃತ್ವದ ಜನತಾ ಪಕ್ಷ ರಾಜ್ಯದಾದ್ಯಂತ ಮುಗ್ಗರಿಸಿತ್ತು.

ಮುಖ್ಯಮಂತ್ರಿ ಕನಸು ನನಸು: ದೇವೇಗೌಡರ ರಾಜಕೀಯ ಜೀವನಕ್ಕೆ ತಿರುವು ನೀಡಿದ್ದು 1994ರ ಸಾರ್ವತ್ರಿಕ ಚುನಾವಣೆ. ಜನತಾ ದಳದ ನಾಯಕರಾಗಿ ಬೆಳವಣಿಗೆ ಕಂಡಿದ್ದ ಗೌಡರು ಈ ಬಾರಿ ಸ್ಪರ್ಧೆಗೆ ಇಳಿದಿದ್ದು ರಾಮನಗರ ವಿಧಾನಸಭಾ ಕ್ಷೇತ್ರದಿಂದ.

ಸ್ವಕ್ಷೇತ್ರ ಹೊಳೆ ನರಸೀಪುರದಲ್ಲಿ ಕಳೆದ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಗೌಡರು ಈ ಬಾರಿ ಕ್ಷೇತ್ರ ಬದಲಿಸುವ ಮನಸ್ಸು ಮಾಡಿದ್ದರು. ಕಡೆಗೆ ಪುತ್ರ ಎಚ್.ಡಿ. ಕುಮಾರಸ್ವಾಮಿ ಒತ್ತಾಸೆಯ ಮೇರೆಗೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರು. ನಿರೀಕ್ಷೆ ಹುಸಿಯಾಗಲಿಲ್ಲ. ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಲಿಂಗಪ್ಪರನ್ನು 9,595 ಅಂತರದಿಂದ ಮಣಿಸಿ
ದರು. ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಬಂತು.

ಅಂದಿನ ಚುನಾವಣೆಯಲ್ಲಿ ಚಕ್ರದ ಗುರುತಿನೊಂದಿಗೆ ರಾಜ್ಯದಲ್ಲಿ ಗೌಡರ ನಾಯಕತ್ವದಲ್ಲಿ ಮುನ್ನಡೆದ ಜನತಾದಳ 115 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರಳ ಬಹುಮತ ಪಡೆಯಿತು. ದೇವೇಗೌಡರು ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕಾಂಗ್ರೆಸ್ ಕೇವಲ 34 ಸ್ಥಾನಗಳೊಂದಿಗೆ ನೆಲ ಕಚ್ಚಿತ್ತು.

ಅಂಬರೀಷ್‌ಗೆ ಸೋಲು: ನಂತರದ ಬೆಳವಣಿಗೆಯಲ್ಲಿ ಗೌಡರಿಗೆ ದೇಶದ ಪ್ರಧಾನ ಮಂತ್ರಿ ಹುದ್ದೆಗೇರುವ ಯೋಗ ಕೂಡಿಬಂದಿತು. ಹೀಗಾಗಿ ಅವರು ರಾಮನಗರ ಕ್ಷೇತ್ರದ ಶಾಸಕ ಸ್ಥಾನ ರಾಜೀನಾಮೆ ನೀಡಿದರು. 1997ರಲ್ಲಿ ಉಪ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಚಿತ್ರನಟ ಅಂಬರೀಷ್‌ ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ಜನರು ಸಿ.ಎಂ. ಲಿಂಗಪ್ಪ ಅವರನ್ನು ಎತ್ತಿ ಹಿಡಿದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಲಿಂಗಪ್ಪ 59,924 ಮತಗಳೊಂದಿಗೆ ಗೆಲುವಿನ ನಗೆ ಬೀರಿದರು. ಅಂಬರೀಷ್‌ 50,314 ಮತ ಪಡೆದು ನಿರಾಸೆ ಅನುಭವಿಸಿದರು.

ಕುಮಾರಸ್ವಾಮಿಗೂ ಮಿಶ್ರಫಲ: 1999ರ ಉಪ ಚುನಾವಣೆಯ ಹೊತ್ತಿಗೆ ಜನತಾದಳವು ಇಬ್ಭಾಗವಾಯಿತು. ದೇವೇಗೌಡರ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ಅಸ್ತಿತ್ವಕ್ಕೆ ಬಂದಿತು. ಅದೇ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಸಾತನೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿದರು.

1996ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿ 1998ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಹೀನಾಯ ಸೋಲು ಅನುಭವಿಸಿದ್ದರು. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಬರುವ ಉತ್ಸಾಹ ತೋರಿದರು. ಸಾತನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಎದುರು ನಿಂತ ಅವರಿಗೆ ಗೆಲುವು ದಕ್ಕಲಿಲ್ಲ. ಶಿವಕುಮಾರ್ 56,050 ಮತಗಳೊಂದಿಗೆ ಜಯಶಾಲಿಯಾದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ 41,663 ಮತ ಪಡೆದು ನಿರಾಸೆ ಅನುಭವಿಸಿದರು.

2004ರಲ್ಲಿ ರಾಮನಗರ ಕ್ಷೇತ್ರ ಕುಮಾರಸ್ವಾಮಿ ರಾಜಕೀಯ ಜೀವನಕ್ಕೆ ತಿರುವು ನೀಡಿತು. ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ 24,916 ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪರನ್ನು ಮಣಿಸಿದರು. ಆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ 42 ಸ್ಥಾನ ಗಳಿಸಿತು. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದ ಕಾರಣ ಕಾಂಗ್ರೆಸ್ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿತು. ಧರ್ಮಸಿಂಗ್ ಮುಖ್ಯಮಂತ್ರಿಯಾದರು.

ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್–ಮೈತ್ರಿ ಮುರಿದು ಬಿತ್ತು. ಕುಮಾರಸ್ವಾಮಿ ಬಿಜೆಪಿ ಜೊತೆ ತಲಾ 20 ತಿಂಗಳ ಅಧಿಕಾರ ಸೂತ್ರದ ಹಂಚಿಕೆಯೊಂದಿಗೆ ಹೊಸ ಸರ್ಕಾರ ರಚನೆಗೆ ಮುಂದಾದರು. 2006ರ ಫೆಬ್ರುವರಿ 3ರಂದು ಕುಮಾರಸ್ವಾಮಿ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 2007ರ ಅಕ್ಟೋಬರ್ 9ರವರೆಗೆ ಅಧಿಕಾರ ನಡೆಸಿದರು. ನಂತರದಲ್ಲಿಯೂ ರಾಮನಗರ ಕ್ಷೇತ್ರದಿಂದ ಎರಡು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಬಿಜೆಪಿಯ ಎಂ. ರುದ್ರೇಶ್ ವಿರುದ್ಧ 47,260 ಮತಗಳ ಭಾರಿ ಅಂತರದಿಂದ ಗೆದ್ದು ದಾಖಲೆ ಬರೆದರು.

2009ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 2013ರಲ್ಲಿ ಮತ್ತೆ ರಾಮನಗರದ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಇಳಿದ ಅವರು 25,398 ಮತಗಳ ಅಂತರದಿಂದ ಕಾಂಗ್ರೆಸ್‌ನ ಮರಿದೇವರು ಅವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾದರು.

ಅನಿತಾಗೆ ದಕ್ಕದ ಗೆಲುವು
2013ರ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರೆ, ಅವರ ಪತ್ನಿ ಅನಿತಾ ನೆರೆಯ ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಸಮಾಜವಾದಿ ಪಕ್ಷದಿಂದ ಕಣಕ್ಕೆ ಇಳಿದ ಸಿ.ಪಿ. ಯೋಗೇಶ್ವರ್ ಮತ್ತು ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತು. ಆದರೆ ಯೋಗೇಶ್ವರ್‌ 80,099 ಮತ ಗಳಿಕೆಯ ಮೂಲಕ ವಿಜೇತರಾದರು. ಅನಿತಾ 73,635 ಮತ ಪಡೆದು ನಿರಾಸೆ ಅನುಭವಿಸಿದರು.

ದೇವೇಗೌಡರ ಮುಖ್ಯಮಂತ್ರಿಯ ಹಾದಿ

1994ರ ಚುನಾವಣೆ–ರಾಮನಗರ ಕ್ಷೇತ್ರ
ವಿಜೇತರು–ಎಚ್‌.ಡಿ. ದೇವೇಗೌಡ (ಜನತಾ ದಳ)–ಮತ: 47,986
ಪರಾಜಿತ ಅಭ್ಯರ್ಥಿ–ಸಿ.ಎಂ. ಲಿಂಗಪ್ಪ (ಕಾಂಗ್ರೆಸ್)– ಮತ: 38,392

ಕುಮಾರಸ್ವಾಮಿಯ ಮುಖ್ಯಮಂತ್ರಿ ಹಾದಿ

2004ರ ಚುನಾವಣೆ–ರಾಮನಗರ ಕ್ಷೇತ್ರ
ವಿಜೇತರು: ಎಚ್‌.ಡಿ. ಕುಮಾರಸ್ವಾಮಿ (ಜೆಡಿಎಸ್‌). ಮತ–69,554
ಪರಾಜಿತ ಅಭ್ಯರ್ಥಿ: ಸಿ.ಎಂ. ಲಿಂಗಪ್ಪ (ಕಾಂಗ್ರೆಸ್‌). ಮತ–44,638

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT