ಎತ್ತುಗಳನ್ನು ಬೆಂಗಳೂರಿನ ಗಡಿ ಗುರುತು ಮಾಡಿದ್ದ ಕೆಂಪೇಗೌಡ

7
ನಾಡದೊರೆ ಕೆಂಪೇಗೌಡ ಕಾರ್ಯಕ್ರಮದಲ್ಲಿ ನಂದಿ ಜೆ. ಹೂವಿನಹೊಳೆ

ಎತ್ತುಗಳನ್ನು ಬೆಂಗಳೂರಿನ ಗಡಿ ಗುರುತು ಮಾಡಿದ್ದ ಕೆಂಪೇಗೌಡ

Published:
Updated:
ದಾವಣಗೆರೆಯಲ್ಲಿ ಬುಧವಾರ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಶಾಸಕ ಎಸ್‌. ರವೀಮದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು

ದಾವಣಗೆರೆ: ಬೆಂಗಳೂರಿನ ಯಲಹಂಕದಲ್ಲಿ ಕೆಂಪನಂಜೇಗೌಡ ಹಾಗೂ ಲಿಂಗಮಾಂಬೆ ದಂಪತಿಯ ಮಗನಾಗಿ 1510ರಲ್ಲಿ ಕೆಂಪೇಗೌಡ ಜನಿಸಿದ್ದರು. ತಂದೆಯ ಜೊತೆ ವಿಜಯನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ವೈಭವಕ್ಕೆ ಬೆರಗಾಗಿ ಇಂತಹ ಒಂದು ಭವ್ಯ ನಗರ ನಿರ್ಮಿಸಬೇಕು ಎಂದು ಕನಸು ಕಂಡಿದ್ದರು  ಎಂದು ನಂದಿ ಜೆ. ಹೂವಿನಹೊಳೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಬುಧವಾರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 509ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1531ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಂದಿನ ವಿಜಯನಗರದ ಅರಸ ಅಚ್ಯುತರಾಯರ ಮುಂದೆ ಬೆಂಗಳೂರು ನಗರ ನಿರ್ಮಾಣದ ಪ್ರಸ್ತಾಪ ಮಾಡಿದ್ದರು. ಐವತ್ತು ಸಾವಿರ ವರಹಗಳನ್ನು ನೀಡುವ ಮೂಲಕ ಅಚ್ಯುತರಾಯ  ಬೆಂಬಲ ನೀಡಿದ್ದರು. ಕೆಂಪೇಗೌಡ ತಜ್ಞರ ಜತೆ ಒಂದು ಸಭೆ ನಡೆಸಿ ನಕ್ಷೆ ತಯಾರಿಸಿದ್ದರು. ಬಳಿಕ ನಾಲ್ಕು ಎತ್ತುಗಳನ್ನು ಬಿಟ್ಟು, ಅವು ನಿಂತ ಕಡೆ ನಾಲ್ಕು ಗಡಿ ಗುರುತಿಸಲಾಗಿತ್ತು. ರಾಜಬೀದಿಗಳು, ಅರಮನೆ, ದ್ವಾರಗಳು, ಸರ್ವ ವರ್ಗಗಳಿಗೆ ಸೇರಿದ ವಿವಿಧ ಪೇಟೆ ಬೀದಿಗಳು ಎಲ್ಲೆಲ್ಲಿ ಎಷ್ಟು ವಿಸ್ತಾರದಲ್ಲಿರಬೇಕು, ರಸ್ತೆಗಳು ಹೇಗೆ ಇವಕ್ಕೆಲ್ಲ ಸಂಪರ್ಕಿಸಬೇಕೆಂಬ ಯೋಜನೆಯಂತೆ 1537ರಲ್ಲಿ ನಗರ ನಿರ್ಮಾಣ ಕಾರ್ಯ ಆರಂಭಿಸಿದ್ದರು. ನಗರದ ನಾಲ್ಕು ದಿಕ್ಕುಗಳಿಗೆ ನಾಲ್ಕು ದ್ವಾರಗಳನ್ನು ನಿರ್ಮಿಸಿ ಅವುಗಳನ್ನು ಹಲಸೂರು ಹೆಬ್ಬಾಗಿಲು, ಕೆಂಗೇರಿ ಹೆಬ್ಬಾಗಿಲು, ಯಶವಂತಪುರ ಹೆಬ್ಬಾಗಿಲು ಮತ್ತು ಯಲಹಂಕ ಹೆಬ್ಬಾಗಿಲೆಂದು ಹೆಸರಿಟ್ಟಿದ್ದರು ಎಂದು ಮಾಹಿತಿ ನೀಡಿದರು.

ಕೃಷಿ ಮತ್ತು ವ್ಯಾಪಾರ ನಾಡಿನ ಪ್ರಮುಖ ಆದಾಯದ ಮೂಲವೆಂದು ಅರಿತಿದ್ದ ಅವರು ಕೃಷಿ ಉತ್ಪನ್ನಗಳಿಗಾಗಿ ವಿಶೇಷ ಮಾರುಕಟ್ಟೆಗಳನ್ನು ಸ್ಥಾಪಿಸಿದ್ದರು. ವಿವಿಧ ವರ್ಗಗಳ ಕುಲ ಕಸುಬಿನ ಹೆಸರಿನಲ್ಲೇ ಅಕ್ಕಿ ಪೇಟೆ, ರಾಗಿಪೇಟೆ, ಬಳೆಪೇಟೆ, ಚಿಕ್ಕಪೇಟೆ, ಕುಂಬಾರ ಪೇಟೆ, ಉಪ್ಪಾರಪೇಟೆ, ಸುಣಕಲ್ ಪೇಟೆ ಹೀಗೆ ಹತ್ತು ಹಲವು ಪೇಟೆ ನಿರ್ಮಿಸಿದ್ದರು. ಕೃಷಿ ಮತ್ತು ನೀರಿಗಾಗಿ ಹಲವಾರು ಕೆರೆಗಳನ್ನು ಕಟ್ಟಿಸಿದರು.  ಎಲ್ಲ ವರ್ಗದವರಿಗೂ ವಿವಿಧ ದೇವಸ್ಥಾನಗಳನ್ನು ಕಟ್ಟಿಸಿದ್ದರು ಎಂದು ಮಾಹಿತಿ ನೀಡಿದರು.

ತಾಳಿಕೋಟೆ ಯುದ್ದ ನಡೆದಾಗ ರಾಮರಾಯರ ನೆರವಿಗೆ ಎರಡು ಸಾವಿರ ಸೈನಿಕರನ್ನು ಕಳುಹಿದ್ದರು.  ಮುಂದೆ ಅವರ ಮಗ ಇಮ್ಮಡಿ ಕೆಂಪೇಗೌಡ ಆಳ್ವಿಕೆ ನಡೆಸಿದ್ದರು. ಇತ್ತೀಚೆಗೆ ಅವರ ಸಮಾಧಿಯು ಮಾಗಡಿ ಬಳಿ ಪತ್ತೆಯಾಗಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ ಎಂದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಎ ರವೀಂದ್ರನಾಥ ಮಾತನಾಡಿ, ‘ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು 480 ವರ್ಷಗಳ ಹಿಂದೆಯೇ ಕಟ್ಟಿದ ಕೆಂಪೇಗೌಡ ಆದರ್ಶದ ಆಡಳಿತಗಾರ’ ಎಂದು ಅಭಿಪ್ರಾಯಪಟ್ಟರು.

ಕೃಷಿ, ಕೆರೆ-ಕಟ್ಟೆಗಳು ಮತ್ತು ವಿವಿಧ ಮಾರುಕಟ್ಟೆಗಳಿಗೆ ಆಗಲೇ ಭೂಮಿಯನ್ನು ಮೀಸಲಿಟ್ಟು ವ್ಯವಸ್ಥಿತವಾಗಿ ನಗರ ನಿರ್ಮಿಸಿದ್ದರು. ಕರ್ನಾಟಕದ ಜನಸಂಖ್ಯೆಯ ಕಾಲು ಭಾಗದಷ್ಟು ಮಂದಿ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದಾರೆ. ಅಷ್ಟೊಂದು ಸುವ್ಯವಸ್ಥಿತವಾಗಿ ನಗರವನ್ನು ಅವರು ನಿರ್ಮಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಸಾರ್ವಜನಿಕರು ಮತ್ತು ಗಣ್ಯರಿಗೆ ವಿವಿಧ ಸಸಿಗಳನ್ನು ವಿತರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಕೆ. ಚಮನ್‌ಸಾಬ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಜೆ. ನಾಗರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ದಾವಣಗೆರೆ ಉಪವಿಭಾಗಾಧಿಕಾರಿ ಸಿದ್ದೇಶ್ ಇದ್ದರು. ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಾಮೇಗೌಡ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !