ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೆಜಿಎಫ್‌ ಕಣ್ತುಂಬಿಕೊಂಡ ಅಭಿಮಾನಿಗಳು

Last Updated 21 ಡಿಸೆಂಬರ್ 2018, 11:25 IST
ಅಕ್ಷರ ಗಾತ್ರ

ದಾವಣಗೆರೆ: ನಟ ಯಶ್‌ ಅಭಿನಯದ, ಐದು ಭಾಷೆಗಳಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಚಿತ್ರ ‘ಕೆಜಿಎಫ್‌’ ಅನ್ನು ಶುಕ್ರವಾರ ಅಭಿಮಾನಿಗಳು ಕಣ್ತುಂಬಿಕೊಂಡರು.

ಮುಂಜಾನೆಯಿಂದಲೇ ಅಭಿಮಾನಿಗಳು ಚಿತ್ರಮಂದಿರಗಳತ್ತ ಬಂದಿದ್ದರು. ಥಿಯೇಟರ್‌ಗಳ ಬಾಗಿಲು ತೆಗೆಯುವುವರೆಗೂ ಮೊಬೈಲ್‌ಗಳಲ್ಲಿ ಕೆಜಿಎಫ್‌ ಚಿತ್ರದ ಹಾಡುಗಳನ್ನು ಹಾಕಿಕೊಂಡ ಯುವಕರು ಗುಂಪು–ಗುಂಪಾಗಿ ನೃತ್ಯ ಮಾಡಿ ಸಂಭ್ರಮಿಸಿದರು. ಸಿನಿಮಾದ ಡೈಲಾಗ್‌ಗಳನ್ನು ಹೇಳಿ ರಂಜಿಸಿದರು.

ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಯಶ್‌ ಅವರ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಹಾಕಿ, ಅಭಿಮಾನ ಮೆರೆದರು. ಸಿನಿಮಾ ಪ್ರದರ್ಶನದ ವೇಳೆ, ಅಭಿಮಾನಿಗಳ ಸೀಟಿ, ಕೇಕೆ ಮೇರೆ ಮೀರಿತ್ತು. ಬಾರಿ ಸಂಖ್ಯೆಯಲ್ಲಿ ಸೇರಿದ್ದ ಚಿತ್ರಪ್ರಿಯರನ್ನು ನಿಯಂತ್ರಿಸಿ, ಭದ್ರತೆ ಒದಗಿಸಲು ಪೊಲೀಸರು ಪ್ರಯಾಸಪಟ್ಟರು.

ಈ ಮೊದಲು ನಗರದ ಗೀತಾಂಜಲಿ ಮತ್ತು ವಸಂತ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಕ್ಕೆ ವ‌್ಯವಸ್ಥೆ ಮಾಡಲಾಗಿತ್ತು. ಆದರೆ, ಮುಂಗಡ ಬುಕ್ಕಿಂಗ್‌ ವೇಳೆಯೇ ನಿರೀಕ್ಷೆಗೂ ಮೀರಿ ಟಿಕೆಟ್‌ಗಳು ಮಾರಾಟವಾದ ಕಾರಣ ಎಸ್‌.ಎಸ್‌. ಮಾಲ್‌ನಲ್ಲಿರುವ ಮೂವಿಟೈಮ್‌ ಮಲ್ಟಿಫ್ಲೆಕ್ಸ್‌ನ ಒಂದು ಪರದೆಯಲ್ಲೂ ಕೆಜಿಎಫ್‌ ಪ್ರದರ್ಶಿಸಲಾಯಿತು.

ಆವರಿಸಿದ್ದ ಬೇಸರ:

ಬೆಂಗಳೂರಿನ ಸಿಟಿ ಸಿವಲ್‌ ಕೋರ್ಟ್‌ ಕೆಜಿಎಫ್‌ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಅಭಿಮಾನಿಗಳಲ್ಲಿ ಬೇಸರ ಉಂಟಾಗಿತ್ತು. ನಿರ್ಮಾಪಕ ಚಿತ್ರ ‍‍ಪ್ರದರ್ಶಿಸುವುದಾಗಿ ಹೇಳಿದ್ದರಿಂದ ಆ ಬೇಸರ ಕರಗಿಹೋಗಿತ್ತು. ಆದರೆ, ಸಿನಿಮಾ ಪ್ರದರ್ಶನ ಆಗುವುದೋ ಇಲ್ಲವೋ ಎಂಬ ಗೊಂದಲ ಮುಂದುವರಿದಿತ್ತು. ಗೊಂದಲದ ನಿವಾರಣೆಯಾಗಿ ಸಿನಿಮಾ ನೋಡಿದ ಖುಷಿ ಅಭಿಮಾನಿಗಳ ಮುಖದಲ್ಲಿ ಉಕ್ಕುತ್ತಿತ್ತು. ಸಿನಿಮಾ ನೋಡಿ ಹೊರಬಂದವರು ‘ಸಲಾಂ ರಾಕಿ ಭಾಯ್‌’ ಹಾಡನ್ನು ಗುನುಗುತ್ತಿದ್ದರು.

ಸೆಲ್ಫಿ ಗುಂಗು:

ಚಿತ್ರಮಂದಿರದ ಆವರಣದಲ್ಲಿ ಹಾಕಿದ್ದ ಪೋಸ್ಟರ್‌ಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಗುಂಗಿನಲ್ಲಿ ಯುವಕರು ಮುಳುಗಿ ಹೋಗಿದ್ದರು. ಥಿಯೇಟರ್‌ನ ಆವರಣದಲ್ಲಿ ಎಲ್ಲಿ ನೋಡಿದರೂ ಬಗೆಬಗೆಯ ಪೋಸ್‌ಗಳನ್ನು ನೀಡುತ್ತಾ ಫೋಟೊ ಕ್ಲಿಕ್ಕಿಸಿಕೊಳ್ಳುವ ಯುವಕರೇ ಕಂಡು ಬರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT