ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಸಾಮ್ರಾಜ್ಯ ದೊಡ್ಡದು

‘ಕಾಡುತಿವೆ ನೆನಪು’ ಕೃತಿ ಬಿಡುಗಡೆ ಮಾಡಿದ ಜನಪದ ತಜ್ಞ ಡಾ.ಸೋಮಶೇಖರ ಇಮ್ರಾಪುರ
Last Updated 26 ಮೇ 2019, 12:39 IST
ಅಕ್ಷರ ಗಾತ್ರ

ದಾವಣಗೆರೆ: ನೆನಪುಗಳ ಸಾಮ್ರಾಜ್ಯ ಬಹಳ ದೊಡ್ಡದು. ಅವು ಎಲ್ಲವೂ ಬರವಣಿಗೆಯಾಗಲ್ಲ. ಕೆಲವು ಹಾರಿ ಹೋಗುತ್ತವೆ ಎಂದು ಜನಪದ ತಜ್ಞ ಡಾ.ಸೋಮಶೇಖರ ಇಮ್ರಾಪುರ ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಜಿ. ಗುರುಮೂರ್ತಿ ಅವರ ‘ಕಾಡುತಿವೆ ನೆನಪು’ ಕೃತಿಯನ್ನು ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಎಲ್ಲ ನೆನಪುಗಳು ಒಮ್ಮೆಲೇ ಆಗುವುದಿಲ್ಲ. ಅವು ಸಂದರ್ಭಕ್ಕೆ ಅನುಗುಣವಾಗಿ ಬರುತ್ತವೆ. ಹಾಗೆ ಬರಹಗಾರ ಬರವಣಿಗೆಗೆ ಕುಳಿತಾಗ ಬಂದಿರುವುದನ್ನು ದಾಖಲಿಸುತ್ತಾನೆ. ಪುಸ್ತಕ ಹೊರ ಬಂದ ಬಳಿಕವೂ ಇನ್ನಷ್ಟು ನೆನಪುಗಳು ಕಾಡುತ್ತವೆ ಎಂದು ವಿಶ್ಲೇಷಿಸಿದರು.

ದೇವದಾಸಿಯರ ಬಗ್ಗೆ ನಿಖರ ದಾಖಲೆಗಳು, ಲಿಂಗಾಯತ ಧರ್ಮದ ಬಗ್ಗೆ ವೈಚಾರಿಕಾ ತಿಳಿವಳಿಕೆಯ ಕೃತಿ ಹೀಗೆ ಎಲ್ಲ ರಂಗಗಳಲ್ಲಿ ಕೆಲಸ ಮಾಡಿದ ಗುರುಮೂರ್ತಿ ಅವರು ವಿದೇಶ ಯಾತ್ರೆಯನ್ನು ಕೂಡ ಪ್ರವಾಸಿಗರಾಗಿ ಅವರು ನೋಡಿಲ್ಲ. ಮಾನವಿಕ ವಿಜ್ಞಾನಿಯಾಗಿ ವಿಶ್ಲೇಸುತ್ತಾ ಹೋಗುತ್ತಾರೆ ಎಂದು ವಿವರಿಸಿದರು.

ಉಪನ್ಯಾಸಕಿ ಡಾ. ಶಾಂತಾ ಇಮ್ರಾಪುರ, ‘ಜ್ಞಾನವು ಅಂತರ್‌ಶಿಸ್ತೀಯ, ಬಹುಶಿಸ್ತೀಯವಾಗಿರಬೇಕು ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ, ಮಾನಸಿಕವಾಗಿ ಯಾರೂ ಹಾಗೆ ನಡೆದುಕೊಳ್ಳುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಒಂದೊಂದು ವಿಭಾಗಗಳೂ ಒಂದೊಂದು ಗೂಡುಗಳಾಗಿವೆ’ ಎಂದು ಟೀಕಿಸಿದರು.

ಮಾನವಶಾಸ್ತ್ರೀಯ ವಿಭಾಗ ಮತ್ತು ಜನಪದ ಅಧ್ಯಯನ ವಿಭಾಗ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಮಗೆ ಇನ್ನೂ ಅನ್ನಿಸಿಲ್ಲ. ಆದರೆ ಡಾ. ಗುರುಮೂರ್ತಿ ಅವರು ಆಗಲೇ ಜನಪದದ ಬಗ್ಗೆ ಬರೆದಿದ್ದರು. ಸವದತ್ತಿ ಯಲ್ಲಮ್ಮನ ಬಗ್ಗೆ ವಿವರ ನೀಡಿದ್ದರು. ಕಳೆದ ವರ್ಷ ಲಿಂಗಾಯತ ಧರ್ಮದ ಬಗ್ಗೆ ಯಾರ್ಯಾರೋ ಮಾತನಾಡಿದರು. ಅದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದ್ದ ಗುರುಮೂರ್ತಿ ಜತೆ ಯಾರೂ ಚರ್ಚೆ ನಡೆಸಲಿಲ್ಲ ಎಂದು ಹೇಳಿದರು.

ಮೈಸೂರಿನ ಡಾ. ಕೊಂಡಜ್ಜಿ ಬ. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಡಾ. ಕೆ.ಜಿ.ಗುರುಮೂರ್ತಿ ಹಾಗೂ ಯಶೋಧರೆ ಅವರ ದಾಂಪತ್ಯಕ್ಕೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಎ. ಸೋಮಶೇಖರ್‌ ಸ್ವಾಗತಿಸಿದರು. ಕೆ.ಜಿ. ರಾಜೇಶ್‌ ಕಂದಗಲ್ಲು ವಂದಿಸಿದರು. ಸಾಹಿತಿ ಶಾಂತ ಗಂಗಾಧರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT