ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ನಾನೇ ರೈತ ಸಂಘದ ಅಧ್ಯಕ್ಷ: ಕೋಡಿಹಳ್ಳಿ ಚಂದ್ರಶೇಖರ

Last Updated 20 ಜುಲೈ 2022, 13:02 IST
ಅಕ್ಷರ ಗಾತ್ರ

ದಾವಣಗೆರೆ: ‘ರೈತ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಅಧ್ಯಕ್ಷರು, ಕಾರ್ಯಕಾರಿ ಸಮಿತಿಗಳು ಯಾರ ಜೊತೆ ಇವೆಯೋ ಅವರೇ ಅಧ್ಯಕ್ಷರು. ಈಗ ಇವುಗಳು ನನ್ನ ಜೊತೆ ಇರುವುದರಿಂದ ನಾನೇ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸ್ಪಷ್ಟಪಡಿಸಿದರು.

‘ವಿದ್ಯಾರ್ಥಿ ದಿಸೆಯಲ್ಲಿರುವಾಗಲೇ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. 42 ವರ್ಷಗಳ ಕಾಲ ಸಕ್ರಿಯ, ಕ್ರಿಯಾಶೀಲವಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಯಾರೋ ನಾಲ್ಕು ಮಂದಿ ಹೇಳಿದ ಮಾತ್ರಕ್ಕೆ ಅದು ಆಗುವುದಿಲ್ಲ. ಮಗನ, ಮಗಳ ಮದುವೆಗೆಂದು ರಜೆ ಹಾಕಿ ಹೋಗಿ ಮತ್ತೆ ಬಂದು ತೊಡಗಿಸಿಕೊಂಡಿಲ್ಲ. ವಿದ್ಯಾರ್ಥಿ ದಿಸೆಯಲ್ಲಿ ಎಷ್ಟು ಕ್ರಿಯಾಶೀಲನಾಗಿದ್ದೇನೋ ಈಗಲೂ ಅಷ್ಟೇ ಸಕ್ರಿಯವಾಗಿದ್ದೇನೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರೈತ ಸಂಘ ಆರಂಭವಾದಾಗಿನಿಂದ ಹಲವು ತಂಡಗಳು ಹೊರಹೋಗಿವೆ. ನಾನು ಅಧ್ಯಕ್ಷನಾದ ಮೇಲೆ ಹಲವರು ಆಚೆ ಹೋಗಿದ್ದಾರೆ. ಕೆಲವರನ್ನು ನಾನೇ ಕಳುಹಿಸಿದ್ದೇನೆ. ಅಧಿಕಾರಿಗಳನ್ನು ಮಾತನಾಡಿಸಲು, ರಾಜಕೀಯ ಪಕ್ಷಗಳ ಏಜೆಂಟರಂತೆ ಕೆಲಸ ಮಾಡುವ ರೈತ ಸಂಘಗಳು ನಮ್ಮಲ್ಲಿ ಇವೆ’ಎಂದರು.

‘ರಾಜ್ಯದ ರಾಜಕಾರಣವನ್ನೇ ಬದಲಾಯಿಸುವ ಪ್ರಬಲ ಶಕ್ತಿ ರೈತ ಸಂಘಕ್ಕೆ ಇದ್ದು, ರಾಜಕೀಯ ವಲಯದಲ್ಲಿ ತಲ್ಲಣ ಶುರುವಾಗಿದೆ. ಆದ್ದರಿಂದ ಯಾವುದೋ ರಾಜಕೀಯ ‍‍ಪಕ್ಷಗಳು ರೈತ ಸಂಘವನ್ನು ಒಡೆಯಲು ಪ್ರಯತ್ನಿಸುತ್ತಿವೆ. ಆದರೆ ಇದನ್ನು ತಡೆಯಲು ಸಾಧ್ಯವಿಲ್ಲ’ ಎಂದರು.

‘ಜಿಎಸ್‌ಟಿಯಿಂದಾಗಿ ಸಾಮಾನ್ಯ ಜನರು ದುಡಿದ ಹಣವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ತೆರಬೇಕಾಗಿರುವುದು ಖಂಡನೀಯ. ಖರೀದಿ ಹಾಗೂ ಮಾರಾಟ ಮಾಡುವಾಗಲೂ ತೆರಿಗೆ ನೀಡಬೇಕಾಗಿದೆ. ವಿರೋಧ ಪಕ್ಷಗಳು ಜನರ ಪರ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎನ್ನುವಂತಾಗಿದೆ. ಇದರಿಂದಾಗಿ ಜನರು ಬೀದಿಗೆ ಬಂದು ಹೋರಾಟ ಮಾಡಬೇಕು’ ಎಂದು ಕರೆ ನೀಡಿದರು.

‘ರಾಜ್ಯದಲ್ಲಿ ರಸಗೊಬ್ಬರ ಅಭಾವ ಸೃಷ್ಟಿಯಾಗಿದ್ದು, ಸರ್ಕಾರ ಇದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ಸೋಲುತ್ತಿದೆ ರೈತರಿಗೆ ಸಿಟ್ಟುಬರುವ ಮುನ್ನ ಅಭಾವವನ್ನು ಸರಿದೂಗಿಸಬೇಕು’ ಎಂದು ಆಗ್ರಹಿಸಿದರು.

ಭೈರೇಗೌಡ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಶತಕೋಟಿ ಬಸಣ್ಣ ಗಣೇಶ್, ಗೀತಾ, ಚೇತನ್, ಚಿನ್ನಸಮುದ್ರ ಶೇಖರ ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT