ಬುಧವಾರ, ಜೂನ್ 29, 2022
25 °C
ಮಳೆಯಿಂದಾಗಿ ಮಲೆನಾಡು ನೆನಪಿಸಿದ ಬಯಲುಸೀಮೆ ಅರಣ್ಯ

ಕೊಂಡುಕುರಿ ಅರಣ್ಯಕ್ಕೆ ಜೀವಕಳೆ

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಮುಂಗಾರಿಗೂ ಮುನ್ನವೇ ಸುರಿದ ಸಮೃದ್ಧ ಮಳೆಗೆ ಹನಿ ನೀರಿಲ್ಲದೆ ಬತ್ತಿಹೋಗಿದ್ದ ತಾಲ್ಲೂಕಿನ ಬಹುತೇಕ ಕಟ್ಟೆಗಳು ಮೈದುಂಬಿವೆ. ಎಲ್ಲೆಡೆ ಹಳ್ಳಗಳು, ಝರಿಗಳು ಹರಿಯುತ್ತಿದ್ದು, ನೀರಿನ ನಿನಾದ ಮನಸಿಗೆ ಹಿತಾನುಭವ ನೀಡುತ್ತಿದೆ.

ಅಪಾರ ವನ್ಯಜೀವಿಗಳಿಗೆ ನೆಲೆನೀಡಿರುವ ಹಾಗೂ ಅಪಾರ ಜೀವ ವೈವಿಧ್ಯದ ತಾಣವಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಬೇಸಿಗೆಯಲ್ಲಿ ಒಣಗಿದಂತಿದ್ದ ಕುರುಚಲು ಅರಣ್ಯದಲ್ಲಿ ಮಳೆ ಬೀಳುತ್ತಿದ್ದಂತೆ ಇಡೀ ಕಾಡಿಗೆ ಜೀವಕಳೆ ಬಂದಿದೆ. ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಐದಾರು ದಿನಗಳಿಂದ ಮೋಡಮುಸುಕಿದ ವಾತಾವರಣದಲ್ಲಿ ಆಕಾಶದೆತ್ತರದ ಗುಡ್ಡಗಳನ್ನು ಆವರಿಸಿರುವ ಮಂಜು, ಧೋ ಎಂದು ಸುರಿಯುತ್ತಿರುವ ಬಿರುಮಳೆ, ಅಸಂಖ್ಯ ತೊರೆಗಳ ಜುಳುಜುಳು ನಿನಾದ ಅಪ್ಪಟ ಮಲೆನಾಡನ್ನು ನೆಪಿಸುತ್ತಿದೆ.

80 ಚದರ ಕಿಲೋಮೀಟರ್ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ಕೊಂಡುಕುರಿ ವನ್ಯಧಾಮದಲ್ಲಿನ ಅಪಾರ ಪ್ರಾಣಿಪಕ್ಷಿಗಳಿಗೆ ಜೀವಸೆಲೆಯಾಗಿರುವ ಹಳ್ಳಗಳು, ಕಟ್ಟೆಗಳು ತುಂಬಿಕೊಂಡು ಹರಿಯುತ್ತಿವೆ. ಗೊರೆಗುದ್ನಳ್ಳ, ಹೊನ್ನಜ್ಜಿಕೊಂಟೆ, ಕಟ್ಗಾಲುವೆ, ಪುಟ್ಟಪ್ಪಳ್ಳ, ಸಾಗಲಿಕಟ್ಟೆ, ಹಾಲೋಬಯ್ಯನಕಟ್ಟೆ, ಗಿರಿಕಟ್ಟೆ, ಕೆಂಪಯ್ಯನಕಟ್ಟೆ ಸೇರಿ ಎಲ್ಲಾ ಕಟ್ಟೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಅರಣ್ಯದ ಮಗ್ಗುಲಲ್ಲಿರುವ ಕೆಳಗೋಟೆಯ ಎರಡು ಕೆರೆಗಳು ಕೋಡಿಬಿದ್ದಿವೆ. ಮಡ್ರಳ್ಳಿಯ ಚಿಕ್ಕ ಮತ್ತು ದೊಡ್ಡಕೆರೆ, ಮಲೆಮಾಚಿಕೆರೆ ಸೇರಿ ಹಲವು ಕೆರೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿವೆ.

ಕೊಂಡುಕುರಿ, ಚಿಂಕಾರ, ಕೃಷ್ಣಮೃಗ, ಚಿರತೆ, ಕತ್ತೆಕಿರುಬ, ಕರಡಿ, ತೋಳ, ಗುಳ್ಳೆನರಿ, ಚಿಪ್ಪುಹಂದಿ, ಪುನುಗುಬೆಕ್ಕು ಮುಂತಾದ ವನ್ಯಪ್ರಾಣಿಗಳು ಹಾಗೂ ಶ್ರೀಗಂಧ, ಮರಾಲೆ, ಉದೇದ್ದು, ಮತ್ತಿ, ಕಮರ ಒಳಗೊಂಡಂತೆ ಅಮೂಲ್ಯ ಔಷಧೀಯ ಸಸ್ಯಗಳ ಆಗರವಾಗಿರುವ ಕಾಡಿನಲ್ಲಿ ಮಂಗಾರುಪೂರ್ವ ಮಳೆ ವನ್ಯಜೀವಿ ಮತ್ತು ಸಸ್ಯಸಂಕುಲಕ್ಕೆ ಜೀವಚೈತನ್ಯ ತಂದಿದೆ. ಬಿರುಬಿಸಿಲಿನ ಬೇಸಿಗೆಯಲ್ಲಿ ಪದೇಪದೇ ಬೆಂಕಿಯ ಕೆನ್ನಾಲಿಗೆಗೆ ಅರೆಬರೆ ಸುಟ್ಟುಹೋದ ಮರಗಳು ಮಳೆಯ ಸ್ಪರ್ಶದಿಂದ ಮರುಜೀವ ಪಡೆದುಕೊಳ್ಳುತ್ತಿವೆ. ಅಲ್ಲದೆ ಬೇಟೆಗಾರರು ಹಾಗೂ ಕಿಡಿಗೇಡಿಗಳು ಹಚ್ಚುವ ಬೆಂಕಿಯ ಅಪಾಯದಿಂದಲೂ ಅರಣ್ಯಕ್ಕೆ ರಕ್ಷಣೆ ಸಿಕ್ಕಂತಾಗಿದೆ.

‘ಬೇಸಿಗೆಯಲ್ಲಿ ನೀರಿನ ಸೆಲೆಗಳಾದ ಕಟ್ಟೆಗಳು, ಹಳ್ಳಗಳು ಬತ್ತಿ ಪ್ರಾಣಿಗಳಿಗೆ ಅಭಾವ ಎದುರಾಗುವುದು ಸಾಮಾನ್ಯ. ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಇಲಾಖೆಯಿಂದ ಅರಣ್ಯದೊಳಗೆ ಅಲ್ಲಲ್ಲಿ ಕೃತಕ ತೊಟ್ಟಿಗಳನ್ನು ನಿರ್ಮಿಸಿ ನೀರು ಪೂರೈಸಲಾಗುತ್ತಿತ್ತು. ಸೌರಶಕ್ತಿಯ ಪಂಪ್ ಸೆಟ್‌ಗಳಿಂದ ಕಟ್ಟೆಗಳಿಗೆ ನೀರು ಹರಿಸಲಾಗುತ್ತಿತ್ತು. ಈಗ ಉತ್ತಮವಾಗಿ ಮಳೆ ಬರುತ್ತಿದ್ದು, ಎಲ್ಲಾ ಕಟ್ಟೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಎಲ್ಲೆಡೆ ಹಸಿರು ಉಕ್ಕುತ್ತಿದೆ. 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಪೂರ್ವ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಅಂತರ್ಜಲ ಸುಧಾರಣೆಯಾಗಿ ಕಾಡಿನ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದು ಕೊಂಡುಕುರಿ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ನಾಯ್ಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು