ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ: ಕನಕಶ್ರೀ

ಬೆಳ್ಳೂಡಿ ಮಠದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷಾ ತರಬೇತಿ ಕೇಂದ್ರದ ಲೋಕಾರ್ಪಣೆ ಜುಲೈ 3ಕ್ಕೆ
Last Updated 26 ಜೂನ್ 2022, 4:30 IST
ಅಕ್ಷರ ಗಾತ್ರ

ಹರಿಹರ: ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಜುಲೈ 3ರಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಆಯೋಜಿಸಲಾಗಿದೆ ಎಂದು ಗುರುಪೀಠದ ಪೀಠಾಧಿಪತಿ ನಿರಂಜನಾ ನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬೆಳ್ಳೂಡಿ ಸಮೀಪದ ಶಾಖಾ ಮಠದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಅಕಾಡೆಮಿಯ ಸಹಯೋಗದಲ್ಲಿ ಪೀಠದ ಚಂದ್ರಗುಪ್ತ ಮೌರ್ಯ ಸಂಸ್ಥೆಯಿಂದ ಕೇಂದ್ರ ನಡೆಸಲಾಗುವುದು. ಸುಸಜ್ಜಿತ ಕಟ್ಟಡ, ಅಧ್ಯಯನ ತರಗತಿ, ಇ–ಗ್ರಂಥಾಲಯ, ವಸತಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಶ್ರೀಮಂತರ ಮಕ್ಕಳು ಬೆಂಗಳೂರು, ದೆಹಲಿ, ಹೈದರಾಬಾದ್‌ನಂತಹ ಮಹಾನಗರಗಳಿಗೆ ತೆರಳಿ ತರಬೇತಿ ಪಡೆಯುತ್ತಾರೆ. ಆದರೆ, ರಾಜ್ಯದ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಅಕಾಂಕ್ಷಿಗಳಿಗೆ ಇದು ಸಾಧ್ಯವಾಗುತ್ತಿಲ್ಲ. ಕಡಿಮೆ ಶುಲ್ಕದಲ್ಲಿ ತರಬೇತಿ ದೊರಕಿಸುವ ಉದ್ದೇಶದಿಂದ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ’ ಎಂದು ಸ್ವಾಮೀಜಿ ವಿವರಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗುರುಪೀಠದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

‘ಇನ್‌ಸೈಟ್ಸ್ ಐಎಎಸ್‌ ಅಕಾಡೆಮಿಯ ಸಂಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ. ವಿನಯಕುಮಾರ್‌, ‘ನಮ್ಮ ಸಂಸ್ಥೆಯಿಂದ ಬೆಂಗಳೂರು, ಮಂಗಳೂರು, ವಿಜಯನಗರ, ದೆಹಲಿ, ಲಖನೌ ಹಾಗೂ ಇತರ ನಗರಗಳಲ್ಲಿ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಈಗ ಕಾಗಿನೆಲೆ ಕನಕ ಶಾಖಾ ಮಠದ ಆವರಣದಲ್ಲೂ ಕೇಂದ್ರವನ್ನು ಮುನ್ನಡೆಸಲಿದ್ದೇವೆ. ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿಗಳು ಕೇವಲ ಗುಮಾಸ್ತ, ಪೊಲೀಸ್ ಕಾನ್‌ಸ್ಟೆಬಲ್‌ ಆಗುವುದಕ್ಕೆ ಸೀಮಿತವಾಗಬಾರದು. ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಎದುರಿಸಿ ಉನ್ನತ ಹುದ್ದೆಗಳಿಗೆ ನೇಮಕಾತಿ ಹೊಂದಬೇಕು’ ಎಂದು ಆಶಿಸಿದರು.

‘10 ತಿಂಗಳ ಮೊದಲ ಅವಧಿಗೆ ಪ್ರವೇಶಾತಿ ಆರಂಭವಾಗಿದೆ. ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ನುರಿತ ಶಿಕ್ಷಕರಿಂದ ಇಂಗ್ಲಿಷ್‌ ಭಾಷೆಯಲ್ಲಿ ಬೋಧಿಸಲಾಗುತ್ತದೆ. ಜೊತೆಗೆ ಕನ್ನಡದಲ್ಲೂ ಮಾರ್ಗದರ್ಶನ ನೀಡಲಾಗುತ್ತದೆ’ ಎಂದರು.

ಚಂದ್ರಗುಪ್ತ ಮೌರ್ಯ ಸಂಸ್ಥೆಯ ಕಾರ್ಯದರ್ಶಿ ಎನ್.ನಿಂಗಪ್ಪ, ಪ್ರಾಂಶುಪಾಲರಾದ ಶೃತಿ ಇನಾಂದಾರ್, ಟ್ರಸ್ಟಿ ಎಂ.ನಾಗೇಂದ್ರಪ್ಪ, ಇನ್‌ಸೈಟ್ಸ್ ಐಎಎಸ್‌ ಅಕಾಡೆಮಿಯ ಶರತ್, ಮಧು, ಮಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT