ಮಂಗಳವಾರ, ಜನವರಿ 31, 2023
19 °C
‘ಧ್ರುವ’ ತಳಿಯ ಬದನೆ ಬೆಳೆದು ಯಶಸ್ಸುಗಳಿಸಿದ ಅಶ್ರಫುಲ್ಲಾ

ಬದನೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದ ರೈತ

ಎನ್‌.ವಿ.ರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಇಲ್ಲಿನ ರೈತ ಅಶ್ರಫುಲ್ಲಾ ಎರಡು ಎಕರೆಯಲ್ಲಿ ಬದನೆ ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾರೆ.

‘ಬದನೆಯನ್ನು ಜನ ನಿತ್ಯ ಒಂದಲ್ಲ ಒಂದು ಅಡುಗೆಗೆ ಬಳಸುವುದರಿಂದ ಯಾವಾಗಲೂ ಬೇಡಿಕೆ ಇರುತ್ತದೆ. ನೇರಳೆ ಬಣ್ಣದ ದುಂಡು ಬದನೆ, ರಾಯದುರ್ಗದ ಹಸಿರು ಬದನೆ, ಮೈಸೂರು ಸೀಮೆಯ ಈರನಗೆರೆಯ ಉದ್ದನೆ ಬದನೆ, ಕರಾವಳಿಯ ಉಡುಪಿಗುಳ್ಳ ಮುಂತಾದ ತಳಿಗಳಿವೆ. ನಾನು ನೇರಳೆ ಬಣ್ಣದ ದುಂಡನೆಯ ‘ಧ್ರುವ’ ಎಂಬ ತಳಿಯ ಬದನೆ ಬೆಳೆದಿದ್ದೇನೆ’ ಎಂದು ಮಾತಿಗಿಳಿದರು ಅಶ್ರಫುಲ್ಲಾ.

‘ನರ್ಸರಿಗಳಿಂದ ಒಂದು ತಿಂಗಳ ಸಸಿಗಳನ್ನು ತಂದಿದ್ದು, ಎಕರೆಗೆ 4,000ದಿಂದ 4,500 ಸಸಿಗಳು ಬೇಕಾಗುತ್ತವೆ. ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರ, ಸಸಿಯಿಂದ ಸಸಿಗೆ ಎರಡು ಅಡಿ ಅಂತರದಲ್ಲಿ ಗಿಡಗಳನ್ನು ನೆಟ್ಟಿದ್ದು, ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಸಿದ್ದೇನೆ. ಅಲ್ಲದೇ ಡಿಎಪಿ ರಾಸಾಯನಿಕ ಗೊಬ್ಬರವನ್ನೂ ಅಲ್ಪ ಪ್ರಮಾಣದಲ್ಲಿ ಕೊಟ್ಟಿದ್ದೇನೆ. ಬದನೆಗೆ ರೋಗಕ್ಕಿಂತ ಕಾಯಿಕೊರಕ ಹುಳಗಳ ಬಾಧೆ ಹೆಚ್ಚಾಗಿರುತ್ತದೆ. ಆದ್ದರಿಂದ ಆ ಹುಳ ಬಾರದಂತೆ ಮುಂಜಾಗ್ರತೆ ವಹಿಸಿ ತಜ್ಞರ ಸಲಹೆಯಂತೆ ಕೀಟನಾಶಕಗಳನ್ನು ಆಗಾಗ ಸಿಂಪರಣೆ ಮಾಡಬೇಕು’ ಎಂಬುದು ಅವರ ಅನುಭವದ ಮಾತು.

‘ಎರಡು ದಿನಗಳಿಗೊಮ್ಮೆ ನೀರು ಹರಿಸಬೇಕು. ನೀರು ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ಹನಿ ನೀರಾವರಿ ವ್ಯವಸ್ಥೆ ಮಾಡಿದರೆ ಉತ್ತಮ. ಸಸಿಗಳ ಅಂತರ ಹೆಚ್ಚಾಗಿದ್ದರೆ ರೋಗ ಬಾಧೆ ಕಡಿಮೆ ಇರುತ್ತದೆ. ಸಸಿ ನೆಟ್ಟ ಎರಡು ತಿಂಗಳಿಗೆ ಫಸಲು ಕಟಾವಿಗೆ ಬರುತ್ತದೆ. ಬದನೆಯನ್ನು ಸರಿಯಾಗಿ ಕೃಷಿ ಮಾಡುತ್ತಾ ಹೋದರೆ ಒಂದು ವರ್ಷದವರೆಗೂ ಬೆಳೆಯಬಹುದು. ಬಹುಪಾಲು ರೈತರು ಆರು ತಿಂಗಳಿಗೆ ತೆಗೆದು ಹಾಕುತ್ತಾರೆ. ಆರು ತಿಂಗಳ ವೇಳೆಗೆ ಬದನೆ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮೇಲ್ಭಾಗವನ್ನು ಕತ್ತರಿಸಿ ನೀರು ಹರಿಸಿ ಗೊಬ್ಬರ ಕೊಟ್ಟರೆ ಮತ್ತೆ ಆರು ತಿಂಗಳು ಸತತವಾಗಿ ಬೆಳೆಯಬಹುದು’ ಎಂದು ವಿವರಿಸುತ್ತಾರೆ ಅಶ್ರಫುಲ್ಲಾ.

‘ಎಕರೆಗೆ 15 ಟನ್‌ವರೆಗೆ ಇಳುವರಿ ಬಂದಿದೆ. ಆದರೆ, ದರ ಮಾತ್ರ ನಾನು ನಿರೀಕ್ಷಿಸಿದಷ್ಟು ದೊರೆತಿಲ್ಲ. ಆರಂಭದಲ್ಲಿ ಉತ್ತಮ ದರವಿತ್ತು. ಆದರೆ, ಈಗ ಹಸಿ ಅವರೆಕಾಯಿ ಮಾರುಕಟ್ಟೆಗೆ ಬಂದಿರುವುದರಿಂದ ಬದನೆಗೆ ಬೇಡಿಕೆ ಕಡಿಮೆಯಾಗಿದ್ದು, ದರ ಕುಸಿತವಾಗಿದೆ. ಆರಂಭದಲ್ಲಿ 20 ಕೆ.ಜಿ ತೂಗುವ ಕ್ರೇಟ್‌ ಒಂದಕ್ಕೆ ₹400ವರೆಗೆ ಇತ್ತು. ಈಗ ಕೇವಲ ₹100 ಆಗಿದೆ. ದರ ಒಂದೇ ರೀತಿ ಇರುವುದಿಲ್ಲ. ಏರುಪೇರು ಇದ್ದೇ ಇರುತ್ತದೆ. ಬದನೆ ಉತ್ತಮ ಲಾಭದಾಯಕ ಬೆಳೆ. ಎಲ್ಲ ರೈತರೂ ಬೆಳೆಯಬಹುದು’ ಎನ್ನುತ್ತಾರೆ ರೈತ ಅಶ್ರಫುಲ್ಲಾ.

***

‘ಬದನೆ ಸಸಿಗಳ ಮಧ್ಯೆ ಸೊಪ್ಪು ಬೆಳೆಯಿರಿ’

‘ಬದನೆ ದೇಶದ ಎಲ್ಲ ಕಡೆ ಬೆಳೆಯುವ ಬೆಳೆ. ಆರೋಗ್ಯ ಪೂರ್ಣವಾದ ಈ ತರಕಾರಿಯನ್ನು ನಿತ್ಯದ ಅಡುಗೆಯಲ್ಲಿ, ಸಭೆ ಸಮಾರಂಭಗಳಲ್ಲಿ ಅತಿ ಹೆಚ್ಚಾಗಿ ಬಳಸುವುದರಿಂದ ಇದಕ್ಕೆ ಸದಾ ಬೇಡಿಕೆ ಇರುತ್ತದೆ. ರೈತರು ಖರ್ಚು ಕಡಿಮೆ ಮಾಡಲು ಬದನೆ ಸಸಿಗಳನ್ನು ನಾಟಿ ಮಾಡಿದ ನಂತರ ಗಿಡಗಳು ಎತ್ತರಕ್ಕೆ ಬೆಳೆಯುವ ಮುನ್ನ ಬದನೆ ಸಸಿಗಳ ಮಧ್ಯದಲ್ಲಿ ಮೂಲಂಗಿ ಅಥವಾ ವಿವಿಧ ರೀತಿಯ ಸೊಪ್ಪುಗಳನ್ನು ಬೆಳೆಯಬಹುದು. ರೈತರು ಯಾವ ಹಂಗಾಮಿನಲ್ಲಿ ಯಾವ ತರಕಾರಿ ಬೆಳೆಯಬೇಕು ಎಂಬುದರ ಬಗ್ಗೆ ಮೊದಲು ಚಿಂತನೆ ನಡೆಸಬೇಕು. ಈ ಬಗ್ಗೆ ತಜ್ಞರಿಂದ ಸಲಹೆ ಪಡೆಯಬೇಕು.

– ನಾಗರಾಜ ಕುಸಗೂರ್‌, ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು