ಸೋಮವಾರ, ಡಿಸೆಂಬರ್ 9, 2019
20 °C
ಹೊನ್ನಾಳಿ ತಾಲ್ಲೂಕು ದೊಡ್ಡೆರೆಹಳ್ಳಿ ಗ್ರಾಮದ ರೈತ ರುದ್ರುಗೌಡ್ರು

ನಿವೃತ್ತ ನೌಕರನ ಕೃಷಿ ಪ್ರೀತಿ 

ಎನ್.ಕೆ.ಆಂಜನೇಯ ಹೊನ್ನಾಳಿ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಉದ್ಯೋಗ ಹಿಡಿದು ನಿವೃತ್ತರಾದ ಬಳಿಕ ಕೃಷಿಕ ಜೀವನಕ್ಕೆ ಮರಳುವವರ ಪೈಕಿ ದೊಡ್ಡೆರೆಹಳ್ಳಿ ರುದ್ರುಗೌಡ್ರು ಒಬ್ಬರು.

ಬಿಎಸ್‌ಸಿ ಪದವಿ ಮುಗಿಸಿದ ರುದ್ರುಗೌಡ್ರು 1977ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಚಕ್ರನಗರದಲ್ಲಿ ನೌಕರಿ ಗಿಟ್ಟಿಸಿಕೊಂಡವರು. ತಂದೆಯ ಇಚ್ಛೆಯಂತೆ ಕೃಷಿ ಜೀವನ ಕೈಗೊಳ್ಳುವ ಮನಸಿದ್ದರೂ ಉದ್ಯೋಗ ಅವರನ್ನು ಕಟ್ಟಿ ಹಾಕಿತು. ಈ ನಡುವೆಯೂ ತೋಟ ಕಟ್ಟುವ ಮನಸ್ಸು ಅವರದ್ದು. ‌

ತಮ್ಮ 7.28 ಎಕರೆ ಜಮೀನಿನಲ್ಲಿ ಸುಮಾರು 380 ತೆಂಗಿನ ಸಸಿಗಳನ್ನು ಹಾಕಿದ್ದಾರೆ. 2012ರಲ್ಲಿ ಸುಮಾರು 320 ಸಾಗುವಾನಿ ಗಿಡಗಳನ್ನು ನೆಟ್ಟಿದ್ದಾರೆ.

ನಿವೃತ್ತಿಯಾದ ಮೇಲೆ ಹೊನ್ನಾಳಿಯಲ್ಲಿ ಮನೆ ಕಟ್ಟಿಕೊಂಡಿರುವ ಅವರು ಪಿಂಚಣಿ ಪಡೆದು ಅರಾಮಾಗಿ ಕೂತು ಕಾಲ ಕಳೆಯಬಹುದಾಗಿತ್ತು. ಆದರೆ, ಮನೆಯಲ್ಲಿ ಕೂರದೇ ಆಳು ಕಾಳುಗಳನ್ನು ಇಟ್ಟುಕೊಂಡು ಕೃಷಿ ಜೀವನ ನಡೆಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಮಗ ಸೊಸೆ ಎಂಜಿನಿಯರ್ ಆಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಚಿಕ್ಕಮಗನೂ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಮಕ್ಕಳು ತೋಟ ನೋಡಿಕೊಂಡು ಹೋಗಬೇಕು ಎನ್ನುವುದು ಅವರ ಆಶಯ.

‘ತೋಟದಲ್ಲಿ 100 ಸಪೋಟ ಸಸಿಗಳು ಇವೆ. ಸದ್ಯಕ್ಕೆ ಇವುಗಳಿಂದ ಆದಾಯ ಇಲ್ಲ. ತೆಂಗಿನಿಂದ ವಾರ್ಷಿಕ ₹ 2.50 ಲಕ್ಷ ಆದಾಯವಿದೆ. ತೆಂಗಿಗೆ ಬೆಲೆ ಕಡಿಮೆ. ಆಗಾಗ್ಗೆ ಎಳೆನೀರು ಮಾರಾಟಗಾರರಿಗೆ ತೆಂಗು ಕೊಡುವ ಮೂಲಕ ಆದಾಯ ಕಂಡುಕೊಂಡಿರುವೆ. ತೋಟದ ಮಧ್ಯೆ 50 ಕ್ವಿಂಟಲ್‌ನಷ್ಟು ಮೆಕ್ಕೆಜೋಳ ಬೆಳೆಯಲಾಗಿದೆ. ತೋಟದ ಸುತ್ತಲೂ 3 ಚೆಕ್ ಡ್ಯಾಂಗಳಿದ್ದರೂ ಕಳೆದ ನಾಲ್ಕೈದು ವರ್ಷಗಳ ಬರಗಾಲದಿಂದ ಆದಾಯ ಹಿನ್ನಡೆ ಕಂಡಿತ್ತು. ತೋಟಗಾರಿಕೆ ಇಲಾಖೆಯ ಸಬ್ಸಿಡಿ ಬಳಸಿಕೊಂಡು ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದೇನೆ. ತೋಟದಲ್ಲಿ 3 ಕೊಳವೆಬಾವಿಗಳಿವೆ. ಈ ವರ್ಷ ಮಳೆ ಉತ್ತಮವಾಗಿದ್ದು, ಮುಂದಿನ ವರ್ಷ ಉತ್ತಮ ಲಾಭ ಸಿಗುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

ತೆಂಗಿನ ಒಣಗಿದ ಗರಿ, ಹಸಿರು ಸೊಪ್ಪು, ದನದ ಕೊಟ್ಟಿಗೆ ಗೊಬ್ಬರ ಬಳಸುವ ಮೂಲಕ ತೋಟದ ಫಲವತ್ತತೆಯನ್ನು ಹೆಚ್ಚಿಸಿದ್ದಾರೆ.

‘ಇನ್ನೆರಡು ವರ್ಷಗಳಲ್ಲಿ ಸಾವಿರಾರು ಅಡಕೆ ಗಿಡಗಳು ಫಸಲಿಗೆ ಬರುಲಿವೆ. ಸಾಗುವಾನಿ ಮರದಿಂದ ಸಾಕಷ್ಟು ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು