ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ದಡ್ಡ-ವಡ್ಡ ಪದ ಬಳಕೆಗೆ ಭೋವಿ ಸಮಾಜ ಖಂಡನೆ

Last Updated 22 ಸೆಪ್ಟೆಂಬರ್ 2019, 13:34 IST
ಅಕ್ಷರ ಗಾತ್ರ

ದಾವಣಗೆರೆ: ಸಿದ್ದರಾಮಯ್ಯ ‘ದಡ್ಡ- ವಡ್ಡ’ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿರುವುದನ್ನು ಭೋವಿ ಸಮಾಜದ ಮುಖಂಡರು ಖಂಡಿಸಿದ್ದಾರೆ.

‘ವಡ್ಡ’ ಭೋವಿ ಸಮಾಜದ ಪರ್ಯಾಯ ಪದ, ಸ್ವಾಭಿಮಾನದ ಸಂಕೇತ. ಕೆರೆ, ಕಟ್ಟೆಗಳನ್ನು ಅಣೆಕಟ್ಟುಗಳನ್ನು, ಭವ್ಯ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಭೋವಿ ಸಮಾಜದವರು ರಾಷ್ಟ್ರದ ಅಭಿವೃದ್ಧಿಯ ಶಿಲ್ಪಿಗಳಾಗಿದ್ದಾರೆ. ಈಶ್ವರಪ್ಪ ಅವರು ಬಳಸುವ ಪದಗಳು ಕೆಳಮಟ್ಟದಿಂದ ಕೂಡಿವೆ ಎಂದು ಭೋವಿ ಸಮಾಜದ ಮುಖಂಡ ಡಿ. ಬಸವರಾಜ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಭೋವಿ ಸಮಾಜದವರು ಬಡವರಿರಬಹುದು, ಆದರೆ ಶ್ರಮಜೀವಿಗಳು. ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಬಂಡೆ ಒಡೆದು ಬದುಕುತ್ತಿದ್ದೇವೆಯೇ ಹೊರತು ತಲೆಯನ್ನು ಒಡೆದಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರನ್ನು ಟೀಕಿಸಲು ಭೋವಿ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ಈ ಪದವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ಬರಲಿದ್ದು, ಸಮಾಜ ಕಲ್ಯಾಣ ಇಲಾಖೆ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಈಶ್ವರಪ್ಪ ಅವರು ಶೀಘ್ರ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಸಭೆ, ಸಮಾರಂಭಗಳಲ್ಲಿ ಪ್ರತಿಭಟನೆ ಮಾಡಲಾಗವುದು. ಸಮಾಜ ಕಲ್ಯಾಣ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸದೇ ಇದ್ದರೆ ನಾವೇ ದೂರು ನೀಡುತ್ತೇವೆ’ ಎಂದು ಎಚ್ಚರಿಸಿದರು.

‘ಹೌಡಿ ಮೋದಿ’ ಸಮಾವೇಶದಲ್ಲಿ ಟ್ರಂಪ್ ಜೊತೆ ನರೇಂದ್ರ ಮೋದಿ ಭಾಗವಹಿಸಲಿದ್ದು, ರಾಜ್ಯದಲ್ಲಿ ಪ್ರವಾಹ ಬಂದು ಜನರು ಸಂತ್ರಸ್ತರಾಗಿದ್ದಾರೆ. ಅವರಿಗೆ ಪರಿಹಾರ ನೀಡುವಲ್ಲಿ ನರೇಂದ್ರಮೋದಿಗೆ ಬದ್ಧತೆ ಇಲ್ಲ. ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಿ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

‘17 ಜನ ಅನರ್ಹ ಶಾಸಕರ ರಾಜಕೀಯ ಭವಿಷ್ಯವನ್ನು ಸಮಾಧಿ ಮಾಡಿ ಯಡಿಯೂರಪ್ಪ ಅಧಿಕಾರ ನಡೆಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಬದಲಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪಕ್ಷವನ್ನು ಬಲಪಡಿಸುವುದು ಉದ್ದೇಶ’ ಎಂದು ಆರೋಪಿಸಿದರು.

ಸಮಾಜದ ಮುಖಂಡರಾದ ಆಟೊ ತಿಮ್ಮಣ್ಣ, ಹನುಮಂತಪ್ಪ, ಹದಡಿ ವೆಂಕಟೇಶ್, ಪಾಮೇನಹಳ್ಳಿ ತಿರುಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT