ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುನಿಷ್ಠ ವರದಿ ನೀಡಲು ಸೂಚನೆ

ಅಧಿಕಾರಿಗಳ ಸಭೆ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಚಂಗಪ್ಪ
Last Updated 6 ಜುಲೈ 2018, 11:20 IST
ಅಕ್ಷರ ಗಾತ್ರ

ದಾವಣಗೆರೆ: ಮಾನವ ಹಕ್ಕು ಉಲ್ಲಂಘನೆ ಕುರಿತ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಿ, ವಸ್ತುನಿಷ್ಠ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಕೆ.ಬಿ. ಚಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಅವರು, ‘ಕೆಲ ಬಾರಿ ಅಧಿಕಾರಿಗಳು ನೀಡುವ ವರದಿಗೂ ವಾಸ್ತವದ ನಡುವೆ ಅಂತರ ಕಂಡು ಬರುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಅವಧಿ ಮೀರಿದ ಉಡುಪು ಇನ್ನಿತರ ಪರಿಕರಗಳನ್ನು ರೋಗಿಗಳಿಗೆ ನೀಡುತ್ತಿರುವುದು ಕಂಡು ಬಂದಿದೆ. ವರದಿಯು ವಾಸ್ತವಕ್ಕಿಂತ ವ್ಯತಿರಿಕ್ತವಾಗಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ತೊಂದರೆಗೆ ಸಿಲುಕಿಕೊಳ್ಳುತ್ತಾರೆ’ ಎಂದು ಎಚ್ಚರಿಸಿದರು.

ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದ ಮೂರ್ನಾಲ್ಕು ತಿಂಗಳ ಬಳಿಕ ವರದಿ ಬರುತ್ತಿದೆ. ನ್ಯಾಯಾಲಯದ ಪ್ರಕರಣಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸುವ ರೀತಿಯಲ್ಲಿಯೇ ಆಯೋಗದ ಮೂಲಕ ಬಂದ ಅರ್ಜಿಗಳ ವಿಲೇವಾರಿಗೂ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಕೆಲವು ಬಾರಿ ಆಯೋಗದಿಂದ ಸಮನ್ಸ್‌ ಬಂದ ಬಳಿಕ ಜಿಲ್ಲಾಧಿಕಾರಿ ಗಮನಕ್ಕೆ ಪ್ರಕರಣವನ್ನು ತರಲಾಗುತ್ತಿದೆ. ಮಾನವ ಹಕ್ಕಿನ ಉಲ್ಲಂಘನೆ ವಿಷಯ ಈಗ ಮಹತ್ವ ಪಡೆದುಕೊಂಡಿದ್ದು, ಒಮ್ಮೊಮ್ಮೆ ಜಾಗತಿಕ ಸುದ್ದಿಯಾಗುತ್ತದೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಚಂಗಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ‘ಆಯೋಗದಿಂದ ಅರ್ಜಿಯ ಬಗ್ಗೆ ಮಾಹಿತಿ ಕೇಳಿದ ತಕ್ಷಣ ಅಧಿಕಾರಿಗಳು ಭಯ ಪಡಬೇಕಾಗಿಲ್ಲ. ಮನುಷ್ಯನಾದವನು ತಪ್ಪು ಮಾಡುವುದು ಸಹಜ. ಆದರೆ, ಗೊತ್ತಾದ ಬಳಿಕ ಅದನ್ನು ಸರಿಪಡಿಸಬೇಕು. ಅದನ್ನು ಬಿಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಬಾರದು. ಜಿಲ್ಲಾಧಿಕಾರಿಗೆ ನೋಟಿಸ್‌ ನೀಡಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಸರಿಯಲ್ಲ. ವಾಸ್ತವ ಏನಿದೆ ಎಂಬುದನ್ನು ಪ್ರಾಮಾಣಿಕವಾಗಿ ವರದಿ ನೀಡಬೇಕು. ಆಗ, ತಪ್ಪನ್ನು ಸರಿಪಡಿಸಲು ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಆಯೋಗದಿಂದ 11 ಅರ್ಜಿಗಳನ್ನು ವಿಚಾರಣೆಗಾಗಿ ಕಳುಹಿಸಿಕೊಡಲಾಗಿತ್ತು. ನಾಲ್ಕು ಪ್ರಕರಣಗಳ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳನ್ನು ಡಿಎಸ್‌ಪಿ ದರ್ಜೆಯ ಅಧಿಕಾರಿಯಿಂದ ವಿಚಾರಣೆ ನಡೆಸಿ ವರದಿ ಕಳುಹಿಸಿಕೊಡಲಾಗುವುದು. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣವನ್ನು ನಾವೂ ವಿಚಾರಣೆ ಮಾಡಲು ಬರುವುದಿಲ್ಲ. ಹೀಗಾಗಿ ಅಂಥ ಪ್ರಕರಣಗಳ ಮಾಹಿತಿಯನ್ನು ತಕ್ಷಣವೇ ನೀಡಿದರೆ ಅರ್ಜಿಯನ್ನು ಬೇಗನೆ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ’ ಎಂದು ಚಂಗಪ್ಪ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಅಶ್ವತಿ, ‘ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ 19 ಪ್ರಕರಣಗಳು ಬಂದಿದ್ದವು. ಎರಡು ಪ್ರಕರಣಗಳ ವಿಚಾರಣೆ ಮಾತ್ರ ಬಾಕಿ ಉಳಿದಿವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ‘ಕಂದಾಯ ಇಲಾಖೆಯಲ್ಲಿ 9 ಪ್ರಕರಣಗಳು ಇದ್ದವು. ಏಳು ಪ್ರಕರಣಗಳ ವರದಿಯನ್ನು ಆಯೋಗಕ್ಕೆ ಕಳುಹಿಸಿಕೊಡಲಾಗಿದೆ. ಉಳಿದ ಎರಡನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಅಂಕಿ– ಅಂಶ

1,445 ಆಯೋಗದಲ್ಲಿ ದಾಖಲಾದ ಜಿಲ್ಲೆಯ ಒಟ್ಟು ಪ್ರಕರಣಗಳು

1,365 ಆಯೋಗದಲ್ಲಿ ಇತ್ಯರ್ಥಗೊಂಡ ಜಿಲ್ಲೆಯ ಪ್ರಕರಣಗಳು

80 ಆಯೋಗದಲ್ಲಿ ಬಾಕಿ ಉಳಿದಿರುವ ಜಿಲ್ಲೆಯ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT