ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಅಬ್ಬರಕ್ಕೆ ತಗ್ಗಿದ ಬಸ್‌ ಪ್ರಯಾಣ

ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗಕ್ಕೆ ಪ್ರತಿ ದಿನ ₹ 35 ಲಕ್ಷ ನಷ್ಟ
Last Updated 11 ಜುಲೈ 2020, 8:00 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಕ್ಷೀಣಿಸುತ್ತಿದ್ದು, ಮೊದಲೇ ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆ.ಎಸ್‌.ಆರ್‌.ಟಿ.ಸಿ) ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಕೆಎಸ್ಆರ್‌ಟಿಸಿಯ ದಾವಣಗೆರೆ ವಿಭಾಗ ಇದೀಗ ದಿನಾಲೂ ₹ 35 ಲಕ್ಷ ನಷ್ಟ ಅನುಭವಿಸುತ್ತಿದೆ.

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಮಾರ್ಚ್‌ 23ರಿಂದ ಎರಡು ತಿಂಗಳ ಕಾಲ ಬಸ್‌ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಅಂದಾಜು ₹ 30 ಕೋಟಿ ನಷ್ಟವಾಗಿತ್ತು. ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕ ಅಂತರ ಕಾಯ್ದುಕೊಂಡು ಮೇ 19ರಿಂದ ಬಸ್‌ ಸಂಚಾರ ಆರಂಭಿಸಲಾಗಿತ್ತು.

₹ 10 ಲಕ್ಷಕ್ಕೆ ಕುಸಿದ ಆದಾಯ: ‘ದಾವಣಗೆರೆ ವಿಭಾಗದಿಂದ ಸಾಮಾನ್ಯ ದಿನಗಳಲ್ಲಿ 360 ಬಸ್‌ಗಳನ್ನು ಓಡಿಸುವುದರಿಂದ ಪ್ರತಿ ದಿನ ಸರಾಸರಿ ₹ 45 ಲಕ್ಷ ಆದಾಯ ಬರುತ್ತಿತ್ತು. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಓಡಿಸಲು ಆರಂಭಿಸಿದಾಗ ಹೆಚ್ಚಿನ ಪ್ರಯಾಣಿಕರು ಬರುತ್ತಿರಲಿಲ್ಲ. ಜೂನ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ 200 ಬಸ್‌ಗಳವರೆಗೂ ಓಡಿಸುತ್ತಿದ್ದೆವು. ಇದರಿಂದ ₹ 20 ಲಕ್ಷದವರೆಗೆ ಆದಾಯ ಬರುತ್ತಿತ್ತು. ಆದರೆ, ಜುಲೈನಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳು ಹೆಚ್ಚಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು. ಈಗ 120ರಿಂದ 150 ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದ್ದು, ದಿನಕ್ಕೆ ಸರಾಸರಿ ₹ 10 ಲಕ್ಷ ಆದಾಯ ಮಾತ್ರ ಬರುತ್ತಿದೆ’ ಎಂದು ಕೆ.ಎಸ್‌.ಆರ್‌.ಟಿ.ಸಿ. ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಹೊಸಪೇಟೆ, ರಾಣೆಬೆನ್ನೂರು, ಹುಬ್ಬಳ್ಳಿ, ಹರಪನಹಳ್ಳಿ, ಜಗಳೂರು, ಚನ್ನಗಿರಿ, ಹರಿಹರಕ್ಕೆ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ದಾವಣಗೆರೆ ನಗರದಲ್ಲಿ 50 ಬಸ್‌ಗಳ ಪೈಕಿ 20ರಿಂದ 25 ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ. ಪ್ರತಿ ಬಸ್‌ನಲ್ಲೂ 6ರಿಂದ 10 ಪ್ರಯಾಣಿಕರು ಮಾತ್ರ ಬರುತ್ತಿದ್ದಾರೆ’ ಎಂದು ಹೆಬ್ಬಾಳ್‌ ತಿಳಿಸಿದರು.

ಪ್ರಯಾಣಿಕರ ಸುರಕ್ಷತೆಗೆ ಒತ್ತು: ‘ನಮ್ಮ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಆರೋಗ್ಯದ ಸುರಕ್ಷತೆಗೆ ಎಲ್ಲಾ ಬಗೆಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ನಿಗಮದ 500 ಸಿಬ್ಬಂದಿಯ ಗಂಟಲಿನ ದ್ರಾವಣ ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ 200 ಜನರ ವರದಿ ಬಂದಿದ್ದು, ಒಬ್ಬ ಚಾಲಕ ಕಂ ನಿರ್ವಾಹಕನಿಗೆ ಮಾತ್ರ ಪಾಸಿಟಿವ್‌ ಬಂದಿದೆ. ಅವರು ಕೆಲ ದಿನಗಳಿಂದ ರಜೆಯ ಮೇಲೆಯೇ ಇದ್ದರು. ಉಳಿದವರ ವರದಿ ಇನ್ನೂ ಕೈಸೇರಿಲ್ಲ’ ಎಂದು ಹೆಬ್ಬಾಳ್‌ ಪ್ರತಿಕ್ರಿಯಿಸಿದರು.

ಸಂಬಳ ಕಡಿತಕ್ಕೆ ಚಿಂತನೆ: ‘ಸಂಸ್ಥೆ ನಷ್ಟದಲ್ಲಿದ್ದರೂ ಮೇ ತಿಂಗಳವರೆಗೂ ಪೂರ್ಣ ಪ್ರಮಾಣದ ಸಂಬಳವನ್ನು ನೀಡಲಾಗಿದೆ. ಜೂನ್‌ ತಿಂಗಳ ಸಂಬಳವನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆಯ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಒಂದು ವರ್ಷ ವೇತನರಹಿತ ರಜೆ ನೀಡುವ ಬಗ್ಗೆಯೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಹಂತದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ನಮ್ಮ ಅಭಿಪ್ರಾಯವನ್ನು ಇನ್ನೂ ಕೇಳಿಲ್ಲ’ ಎಂದು ಹೆಬ್ಬಾಳ್‌ ತಿಳಿಸಿದರು.

ತಗ್ಗಿದ ಬೆಂಗಳೂರು ಪ್ರಯಾಣ

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಒಂದು ವಾರದಿಂದ ರಾಜಧಾನಿಗೆ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈ ಮೊದಲು 25 ಬಸ್‌ಗಳನ್ನು ಬೆಂಗಳೂರಿಗೆ ಓಡಿಸುತ್ತಿದ್ದೆವು. ಈಗ ಕೇವಲ 10 ಬಸ್‌ಗಳು ಹೋಗುತ್ತಿವೆ. ಬೆಂಗಳೂರಿನ ಟ್ರಿಪ್‌ನಿಂದ ₹ 4 ಲಕ್ಷ ಬರುತ್ತಿದ್ದ ಆದಾಯ ಈಗ ₹ 2 ಲಕ್ಷಕ್ಕೆ ಕುಸಿದಿದೆ’ ಎಂದು ಸಿದ್ದೇಶ್ವರ ಹೆಬ್ಬಾಳ್‌ ಮಾಹಿತಿ ನೀಡಿದರು.

ಕೊರೊನಾ ಭೀತಿಯಿಂದ ಕಳೆದ ಶುಕ್ರವಾರ ಹಾಗೂ ಶನಿವಾರ ಭಾರಿ ಸಂಖ್ಯೆಯಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಜನ ಬಂದಿದ್ದಾರೆ. ನಮ್ಮ ಎಲ್ಲಾ ಬಸ್‌ಗಳೂ ಭರ್ತಿಯಾಗಿದ್ದವು. ಈಗ ಬೆಂಗಳೂರಿಗೆ ಹೋಗಿ ಬರುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ನಮ್ಮ ಆದಾಯದ ದೊಡ್ಡ ಮೂಲವೇ ಕಡಿತಗೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯಾಗಿದೆ. ಕೊರೊನಾ ಪ್ರಕರಣ ಕಡಿಮೆಯಾಗುವವರೆಗೂ ನಿಗಮ ನಷ್ಟದಲ್ಲೇ ಬಸ್‌ ಓಡಿಸುವುದು ಅನಿವಾರ್ಯವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಸಿದ್ದೇಶ್ವರ ಹೆಬ್ಬಾಳ್‌ ಮಾಹಿತಿ ನೀಡಿದರು.

ಅಂಕಿ–ಅಂಶಗಳು

₹ 45 ಲಕ್ಷ ಸಾಮಾನ್ಯ ದಿನಗಳಲ್ಲಿ ನಿತ್ಯ ಬರುತ್ತಿದ್ದ ಆದಾಯ

₹ 10 ಲಕ್ಷ ಈಗ ದಿನಕ್ಕೆ ಬರುತ್ತಿರುವ ಆದಾಯ

360 ಸಾಮಾನ್ಯ ದಿನಗಳಲ್ಲಿ ಓಡುತ್ತಿದ್ದ ಬಸ್‌ಗಳು

120 ಈಗ ಓಡುತ್ತಿರುವ ಬಸ್‌ಗಳು

1,200 ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಲ್ಲಿರುವ ಒಟ್ಟು ಸಿಬ್ಬಂದಿ

600 ರೊಟೇಶನ್‌ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT