ಶನಿವಾರ, ಜುಲೈ 2, 2022
22 °C
ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಕುಂ.ವಿ.

ಉತ್ಪಾದಕ ಸಮುದಾಯದ ಬ್ರೈನ್‌ವಾಶ್‌: ಸಾಹಿತಿ ಕುಂ.ವೀರಭದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶದಲ್ಲಿ ಎರಡು ಸಮುದಾಯಗಳಿವೆ. ಒಂದು ಉತ್ಪಾದಕ ಸಮುದಾಯ. ಇನ್ನೊಂದು ಅನುತ್ಪಾದಕ ಸಮುದಾಯ. ಅನುತ್ಪಾದಕ ಸಮುದಾಯವು ಉತ್ಪಾದಕ ಸಮುದಾಯದ ಯುವಕರನ್ನು ಬ್ರೈನ್‌ವಾಶ್‌ ಮಾಡುತ್ತಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.

ತಾಜ್‌ ಪ್ಯಾಲೇಸ್‌ನಲ್ಲಿ ಶನಿವಾರ ಮೇ ಸಾಹಿತ್ಯ ಮೇಳದಲ್ಲಿ ಸಮಾರೋಪ ಭಾಷಣ ಮಾಡಿದರು.

ಉತ್ಪಾದಕ ಸಮುದಾಯ ಅಂದರೆ ದುಡಿದು ತಿನ್ನುವ ಸಮುದಾಯ. ಅನುತ್ಪಾದಕರು ಎಂದರೆ ಮಂತ್ರಗಳನ್ನು ಹೇಳಿಕೊಂಡು ದೇವರನ್ನೇ ಬಂಧಿಸಿಟ್ಟವರು ಎಂದು ವಿವರಿಸಿದರು.

‘ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವವರು ಸಂವಿಧಾನದ ಆಧಾರದ ಮೇಲೆ ಆಯ್ಕೆಯಾದವರೇ ಆಗಿದ್ದಾರೆ. ಸಂವಿಧಾನವನ್ನು ಉಳಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಯಾರಾದರೂ ಸಂವಿಧಾನದ ವಿರುದ್ಧ ಮಾತನಾಡಿದರೆ ಕೂಡಲೇ ಬೀದಿಗಿಳಿದು ಹೋರಾಟ ಮಾಡಬೇಕಿದೆ’ ಎಂದರು.

ಸತ್ಯ ಹೇಳಿದರೆ, ಜಾತಿ ವ್ಯವಸ್ಥೆ ಮಾತನಾಡಿದರೆ, ಸಾಮಾಜಿಕ ಅಸಮಾನತೆಯ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಎನ್ನುವ ಕಾಲದಲ್ಲಿ ಇದ್ದೇವೆ. ಮಾತನಾಡುವ ಸ್ವಾತಂತ್ರ್ಯ ಇಲ್ಲ. ನಿರ್ಭೀತವಾಗಿ ಬೀದಿಯಲ್ಲಿ ನಡೆದಾಡುವ ಸ್ವಾತಂತ್ರ್ಯ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದಲ್ಲಿ ಜಾತಿಗಳಿವೆ. ಜಾತಿಗೆ ಸಂಬಂಧಿಸಿದ ಸಂಸ್ಕೃತಿಗಳಿವೆ. ನೀತಿ ಸಂಹಿತೆಗಳಿವೆ. ಹಿಂದೂ ಧರ್ಮ ಎಂಬುದು ಇದೆಯೇ? ಹಿಂದ್‌ ಅನ್ನುವುದು ಒಂದು ಪ್ರದೇಶವೇ ಹೊರತು ಧರ್ಮವಲ್ಲ. ಭಾರತ ಅಂದರೆ ಬಹುತ್ವ ಎಂದರು.

ಮೊದಲು ಭಯದ ವಾತಾವರಣ ಸೃಷ್ಟಿಸಿ ಬಳಿಕ ಯಹೂದಿಗಳ ಹತ್ಯೆಯನ್ನು ಹಿಟ್ಲರ್‌ ಮಾಡಿದ್ದ. ಈಗ ಅದೇ ಭಾರತದಲ್ಲಿ ಆಗುತ್ತಿದೆ. ಧರ್ಮಸಂಸತ್ತಿನಲ್ಲಿ ಬೇರೆ ಸಮುದಾಯದವರನ್ನು ಕೊಲ್ಲುವ ಮಾತುಗಳು ಬರುತ್ತವೆ. ಧರ್ಮಸಂಸತ್ತಿಗೆ ಪ್ರಭುತ್ವ ಬುದ್ಧಿ ಹೇಳುತ್ತಿಲ್ಲ ಎಂದು ಟೀಕಿಸಿದರು.

ಮೇ ಸಾಹಿತ್ಯ ಮೇಳದ ರೂವಾರಿ ಬಸವರಾಜ ಸೂಳಿಬಾವಿ ಮಾತನಾಡಿ, ‘ಈ ಬಾರಿಯ ಮೇ ಸಾಹಿತ್ಯ ಮೇಳ ಸಮಾರೋಪಗೊಂಡಿರಬಹುದು. ಇಲ್ಲಿನ ವಿಚಾರಗಳಿಗೆ ಮುಕ್ತಾಯವಿಲ್ಲ. ವಿಚಾರಗಳನ್ನು ಹಳ್ಳಿಗಳಿಗೆ ಒಯ್ಯಲಿದ್ದೇವೆ’ ಎಂದರು.

ಪ್ರಶಸ್ತಿಗಳ ಬಗ್ಗೆ ಮತ್ತು ಪುರಸ್ಕೃತರ ಬಗ್ಗೆ ಡಾ.ಎಚ್‌.ಎಸ್‌. ಅನು‍ಪಮಾ, ಕಾವ್ಯ ಕಡಮೆ, ಮಾಹಂತೇಶ ನವಲಕಲ್‌ ಮಾತನಾಡಿದರು. ಬಸವರಾಜ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಸ್‌ ಪಾಷ, ಜಬೀನಾಖಾನಂ, ಇ.ಬಸವರಾಜ್‌, ಡಿ.ಬಿ. ಗವಾನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು