ಹಲವು ‌ವಿಶೇಷಗಳ ಕುಂದೂರು ಆಂಜನೇಯ ಸ್ವಾಮಿ ದೇಗುಲ

ಬುಧವಾರ, ಏಪ್ರಿಲ್ 24, 2019
27 °C

ಹಲವು ‌ವಿಶೇಷಗಳ ಕುಂದೂರು ಆಂಜನೇಯ ಸ್ವಾಮಿ ದೇಗುಲ

Published:
Updated:
Prajavani

ಹೊನ್ನಾಳಿ (ಶಿವಮೊಗ್ಗ): ತಾಲ್ಲೂಕಿನ ಹತ್ತು ಹಲವು ದೇವಸ್ಥಾನಗಳ ಪೈಕಿ ಕುಂದೂರು ಆಂಜನೇಯ ಸ್ವಾಮಿ ದೇವಸ್ಥಾನ ಪ್ರಮುಖವಾಗಿ ಗಮನ ಸೆಳೆಯುತ್ತದೆ.

16ನೇ ಶತಮಾನದಲ್ಲಿ ಕೆಳದಿ ನಾಯಕರ ಕಾಲದಲ್ಲಿ ಗ್ರಾಮದ ಅಗಸೆ ಬಾಗಿಲಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ವಿಸ್ತಾರವಾದ ಪ್ರಾಕಾರದ ಜಗಲಿಯ ಮೇಲೆ ದೇಗುಲವನ್ನು ಕಟ್ಟಲಾಗಿದ್ದು, ಸುತ್ತಲೂ ಪೌಳಿ ನಿರ್ಮಿಸಲಾಗಿದೆ. ತಳಪಾಯದ ಗೋಡೆ ಸುತ್ತಲೂ ಬುಗುಟಿಯಾಕಾರದ ಕೆತ್ತನೆ ಇದ್ದು, ಚೌಕಾಕಾರದಲ್ಲಿ ನಿರ್ಮಿಸಲಾಗಿದೆ. ಪ್ರವೇಶ ದ್ವಾರ ದಾಟುತ್ತಿದ್ದಂತೆಯೇ ನಾಲ್ಕು ಕಲ್ಲು ಕಂಬಗಳಿಂದ ಕೂಡಿದ ನವರಂಗ ಮಹಲು, ಅಂತರಾಳ ಹಾಗೂ ಗರ್ಭಗುಡಿಗಳಿವೆ.

ವ್ಯಾಸ ತೀರ್ಥರಿಂದ ಪ್ರತಿಷ್ಠಾಪನೆ

ನವರಂಗದ ಕಂಬಗಳಲ್ಲಿ ಸುಂದರವಾದ ಕೆತ್ತನೆಗಳಿದ್ದು, ಎಡಕಂಬದಲ್ಲಿ ರಾಜಕಾರಣಿಗಳು, ಬಲಕಂಬದಲ್ಲಿ ದಂಡನಾಯಕರ ಕೆತ್ತನೆಗಳಿವೆ. ಗರ್ಭಗುಡಿಯಲ್ಲಿನ ಆಂಜನೇಯ ಸ್ವಾಮಿಯ ವಿಗ್ರಹವನ್ನು ವ್ಯಾಸತೀರ್ಥರಿಂದ ಪ್ರತಿಷ್ಠಾಪಿಸಿದ್ದೆಂಬ ಪ್ರತೀತಿಯಿದೆ. ಪ್ರವೇಶ ದ್ವಾರದಿಂದ ಗರ್ಭಗುಡಿಯವರೆಗೆ ಹಂತ ಹಂತವಾಗಿ ಕಿರಿದಾಗುತ್ತ ಹೋಗುತ್ತದೆ. ಗುಡಿಯ ಚಂದ್ರಶಾಲೆ ಪ್ರವೇಶಿಸುತ್ತಿದ್ದಂತೆಯೇ ಎಡಭಾಗದಲ್ಲಿ ವಿನಾಯಕನ ಕೆತ್ತನೆಯಿರುವ ಶಿಲಾಸ್ತಂಭವಿದೆ.

ದೇಗುಲವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಮುಂಭಾಗದಲ್ಲಿ ಭವ್ಯವಾದ ಎತ್ತರವಾದ ಸುಂದರ ಆಂಜನೇಯ ಸ್ವಾಮಿಯ ಮೂರ್ತಿ ಇರುವ ಗಗನಚುಂಬಿ ಗೋಪುರದ ಮಹಾದ್ವಾರವು, ಮಹಾಭಾರತದ ವಿವಿಧ ದೃಶ್ಯಾವಳಿಗಳ ಕುಸುರಿ ಕೆಲಸದಿಂದಾಗಿ ಕಂಗೊಳಿಸುತ್ತದೆ.

ಈ ದೇಗುಲದ ಪ್ರವೇಶ ದ್ವಾರದಲ್ಲಿ ಎರಡು ಹಂತದ ಜಗುಲಿಯ ಮೇಲೆ ಸುಮಾರು 30 ಅಡಿ ಎತ್ತರದ ಏಕಶಿಲೆಯ ದೀಪಸ್ತಂಭವಿದೆ. ಕಾರ್ತಿಕೋತ್ಸವದಲ್ಲಿ ಇದರ ತುದಿಯಲ್ಲಿ ದೀಪ ಹಚ್ಚುವುದಲ್ಲದೆ, ಇಡೀ ಕಟ್ಟೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಪ್ರತಿ ಶನಿವಾರ, ರಾಮನವಮಿ ಹಾಗೂ ವಿಶೇಷ ದಿನಗಳಂದು ವಿಶೇಷ ಪೂಜೆ ನಡೆಯುತ್ತವೆ.

ಪ್ರತಿ ಶನಿವಾರ ಸ್ವಾಮಿ ಉತ್ಸವಮೂರ್ತಿಯ ಪಲ್ಲಕ್ಕಿ ಉತ್ಸವವು ಚಕ್ರವಾದ್ಯ, ತಮಟೆ ಇತ್ಯಾದಿ ವಾದ್ಯಗಳೊಂದಿಗೆ ಸಾಗಿ, ಊರ ಮಧ್ಯದಲ್ಲಿರುವ ನಂದಿ ಕೆತ್ತನೆ ಇರುವ ಕಟ್ಟೆಯಲ್ಲಿ ವಿಶ್ರಮಿಸಿ ಹಿಂತಿರುಗುವುದು ರೂಢಿ. ದೇಗುಲದ ಆವರಣದಲ್ಲಿ ಪ್ರಾಚೀನ ಕಾಲದ ಬನ್ನಿ ವೃಕ್ಷವಿದ್ದು, ಅದರ ಜಗುಲಿಯ ಮೇಲೆ ಕಾಳಿಕಾಮಾತೆಯ ವಿಗ್ರಹವಿರುವುದಾಗಿ ಇಲ್ಲಿನ ಅರ್ಚಕರು ಹೇಳುತ್ತಾರೆ.

ಪ್ರತಿ ಮಂಗಳವಾರ, ಶುಕ್ರವಾರಗಳಂದು ಗ್ರಾಮದ ಸುಮಂಗಲಿಯರು ವ್ರತ ಆಚರಿಸುವವರು. ನಾಗರಪಂಚಮಿಯಂದು ಆಂಜನೇಯ ಸ್ವಾಮಿ ಉತ್ಸವದೊಂದಿಗೆ ಕಮ್ಮಾರಗಟ್ಟೆ ಗ್ರಾಮಕ್ಕೆ ಕರೆದೊಯ್ದು ಹೊಳೆಪೂಜೆ ಸಲ್ಲಿಸಿ, ಹೆಳವನಕಟ್ಟೆ ಗಿರಿಯಮ್ಮನ ತಾಣದಲ್ಲಿ ಜರುಗುವ ಕಾರ್ಣಿಕದಲ್ಲಿ ಪಾಲ್ಗೊಳ್ಳುವ ಪದ್ಧತಿಯಿದೆ.

ಪಾದುಕೆಗಳು

ಪ್ರಾಚೀನ ಕಾಲದ ಬೃಹತ್ ಗಾತ್ರದ ಚರ್ಮದಿಂದ ತಯಾರಿಸಲಾದ ಪಾದುಕೆಗಳು ಇಲ್ಲಿನ ವಿಶೇಷ. ಇಲ್ಲಿನ ಒಂದು ಜೊತೆ ಪಾದುಕೆಗಳನ್ನು ಲಂಡನ್‌ ಮ್ಯೂಸಿಯಂನಲ್ಲಿ ಇಡಲಾಗಿತ್ತು. ಮೈಸೂರಿನ ಜನಪದ ತಜ್ಞರು ಕುಂದೂರಿಗೆ ಬಂದಾಗ ಇನ್ನೊಂದು ಜೊತೆ ಪಾದುಕೆಗಳನ್ನು ತೆಗೆದುಕೊಂಡು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇಂತಹುದೇ ಪಾದುಕೆಗಳನ್ನು ದೇಗುಲದಲ್ಲಿ ಈಗಲೂ ನೋಡಬಹುದಾಗಿದೆ.

ಸವೆಯುವ ಪಾದುಕೆಗಳು

ಈ ಸ್ವಾಮಿಗೆ ಪ್ರತಿ 23 ವರ್ಷಗಳಿಗೊಮ್ಮೆ ಪಾದುಕೆಗಳನ್ನು ಹೊಸದಾಗಿ ಮಾಡಿಸಿ ಅವುಗಳನ್ನು ಗುಡಿಯ ಒಂದು ಭಾಗದಲ್ಲಿ ಇರಿಸಲಾಗುತ್ತದೆ. ವಿಶೇಷವೇನೆಂದರೆ ಈ ಪಾದುಕೆಗಳನ್ನು ಉಪಯೋಗಿಸದಿದ್ದರೂ ಅವುಗಳು ದಿನೇ ದಿನೇ ಸವೆಯುತ್ತವೆ ಎನ್ನುವ ಪ್ರತೀತಿ ಇದೆ.

ಗ್ರಾಮದ ಯಾವುದೇ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಈ ಸ್ವಾಮಿಯನ್ನು ಕುದುರೆ ಉತ್ಸವದಲ್ಲಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಕಾರ್ಯಗಳನ್ನು ನಡೆಸುವ ರೂಢಿ ಇದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !