ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ವಾಸ್ತವ್ಯ ದೃಢಪಡಿಸಲಾಗದು: ಅಮೆರಿಕ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿದ ಆರೋಪ ಹೊತ್ತಿರುವ ಆಭರಣ ವ್ಯಾಪಾರಿ ನೀರವ್ ಮೋದಿ ಅಮೆರಿಕದಲ್ಲಿದ್ದಾರೆ ಎಂಬ ಮಾಧ್ಯಮ ವರದಿಗಳು ಗಮನಕ್ಕೆ ಬಂದಿವೆ. ಆದರೆ ಅವರು ಅಮೆರಿಕದಲ್ಲಿ ಇದ್ದಾರೆಯೇ ಎಂಬುದನ್ನು ದೃಢಪಡಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಹೇಳಿದೆ.

ನೀರವ್‌ ಅವರನ್ನು ಕಂಡು ಹಿಡಿಯಲು ವಿದೇಶಾಂಗ ಇಲಾಖೆಯು ಭಾರತ ಸರ್ಕಾರಕ್ಕೆ ನೆರವಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ತನಿಖೆಗೆ ಸಂಬಂಧಿಸಿದ ನೆರವಿನ ಬಗ್ಗೆ ಕಾನೂನು ಇಲಾಖೆಯನ್ನು ಸಂಪರ್ಕಿಸಿ’ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ. ಆದರೆ, ಕಾನೂನು ಇಲಾಖೆ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದೆ.

ಪಿಎನ್‌ಬಿಗೆ ₹12 ಸಾವಿರ ಕೋಟಿ ವಂಚನೆ ಮಾಡಿದ ಆರೋಪದ ಬಗ್ಗೆ ಸಿಬಿಐ ಮತ್ತು ಇ.ಡಿ. ತನಿಖೆ ನಡೆಸುತ್ತಿವೆ.

ನೀರವ್‌, ಅವರ ಕುಟುಂಬ, ಗೀತಾಂಜಲಿ ಜೆಮ್ಸ್‌ ಕಂಪನಿಯ ಪ್ರವರ್ತಕ ಮೆಹುಲ್‌ ಚೋಕ್ಸಿ ಅವರು ಜನವರಿಯಲ್ಲಿಯೇ ಭಾರತ ಬಿಟ್ಟು ಹೋಗಿದ್ದಾರೆ. ಅದಾದ ಬಹಳ ದಿನಗಳ ಬಳಿಕ ಸಿಬಿಐ ತನಿಖೆ ಆರಂಭವಾಗಿದೆ.

ನೀರವ್‌ ಮತ್ತು ಚೋಕ್ಸಿ ವಿರುದ್ಧ ಲುಕ್‌ ಔಟ್‌ ಸುತ್ತೋಲೆ ಹೊರಡಿಸಲಾಗಿದೆ. ಇದನ್ನು ಬ್ಲೂ ಕಾರ್ನರ್‌ ನೋಟಿಸ್‌ ಎಂದೂ ಕರೆಯುತ್ತಾರೆ. ಇವರು ರಸ್ತೆ, ಜಲ ಮತ್ತು ವಾಯು ಮಾರ್ಗದ ಮೂಲಕ ಭಾರತದ ಯಾವುದೇ ಪ್ರದೇಶಕ್ಕೆ ಬಂದರೂ ತಕ್ಷಣ ಅವರನ್ನು ಬಂಧಿಸುವುದು ಇದರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT