ಸೋಮವಾರ, ಡಿಸೆಂಬರ್ 9, 2019
17 °C
ವಿಶ್ವಮಾನವ ದಿನಾಚರಣೆಯಲ್ಲಿ ಪ್ರಾಚಾರ್ಯ ಡಾ. ದಾದಾಪೀರ್‌ ನವಿಲೇಹಾಳ್‌

ದಾವಣಗೆರೆ: ‘ಧರ್ಮದ ಗಡಿ ದಾಟಿ ಮನುಷ್ಯತ್ವ ಗುರುತಿಸಿದ ಕುವೆಂಪು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಷ್ಟ್ರಕವಿ ಕುವೆಂಪು ಅವರು ಧರ್ಮದ ಗಡಿಯನ್ನು ದಾಟಿ ಮನುಷ್ಯತ್ವದ ಗಡಿಯನ್ನು ಗುರುತಿಸಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ದಾದಾಪೀರ್‌ ನವಿಲೇಹಾಳ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಶನಿವಾರ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.

‘ಗುಡಿ ಚರ್ಚ್‌ ಮಸೀದಿಗಳನ್ನು ಬಿಟ್ಟು ಹೊರಬನ್ನಿ, ನೂರು ದೇವರನ್ನು ನೂಕಾಚೆ’ ಎಂದು ಕುವೆಂಪು ತಮ್ಮ ಕವನದ ಮೂಲಕ ಚಿಂತನೆಯ ಕಿಡಿ ಹೊತ್ತಿಸಿದ್ದರು. ಧಾರ್ಮಿಕ ಗುರುಗಳ ಬಗ್ಗೆ ಅವರಿಗೆ ವಿರೋಧವಿತ್ತು. ಆದರೆ, ಇಂದು ಕೆಲವರಿಗೆ ದೇಶಪ್ರೇಮ, ಭಕ್ತಿ ಹೂಡಿಕೆಯ ವಸ್ತುವಾಗಿದೆ. ಕುವೆಂಪು ಅವರಲ್ಲಿ ಅಂಥ ನೈತಿಕತೆ ಇತ್ತು. ಅವರದ್ದು ನೈಜ ಸ್ವರೂಪದ ಭಕ್ತಿಯಾಗಿತ್ತು’ ಎಂದು ಪ್ರತಿಪಾದಿಸಿದರು.

‘ಕುವೆಂಪು ಅವರು ಕನ್ನಡ ಮಾಧ್ಯಮ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು; ಕನ್ನಡ ಭಾಷೆ ಸಾರ್ವಭೌಮ ಆಗಬೇಕು ಎಂದು ಪ್ರತಿಪಾದಿಸಿದ್ದರು. ಅವರಿಗೆ ಕನ್ನಡದ ವಿವೇಕ ಇತ್ತು. ಕನ್ನಡ ಸಾಹಿತ್ಯದಲ್ಲಿ ಪಂಪನಿಂದ ಇಂದಿನ ಹಲವು ಸಾಹಿತಿಗಳಲ್ಲೂ ವಿವೇಕದ ಪರಂಪರೆ ಕಂಡು ಬಂದಿದೆ’ ಎಂದು ಹೇಳಿದರು.

‘ವಿಶ್ವಮಾನವ ಸಂದೇಶದ ಮೂಲಕ ಕುವೆಂಪು ವರ್ಣಾಶ್ರಮ, ಜಾತಿ ಪದ್ಧತಿಯ ವಿರುದ್ಧ ಧ್ವನಿ ಎತ್ತಿದ್ದರು. ಒಂದೇ ಗ್ರಂಥವನ್ನು ಪರಮೋಚ್ಚ ಎಂದು ಭಾವಿಸಬಾರದು. ನಮ್ಮ ಚೇತನವನ್ನು ವಿಸ್ತರಿಸಿಕೊಳ್ಳಬೇಕು. ಅನಿಕೇತನ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಕುವೆಂಪು ಸಂದೇಶ ಸಾರಿದ್ದರು’ ಎಂದು ಸ್ಮರಿಸಿದರು.

ಮೈಸೂರಿನ ಮಹರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಕುವೆಂಪು ಅವರು ಮಹರಾಜರ ಮಗನನ್ನೇ ಅನುತ್ತೀರ್ಣಗೊಳಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಅವರು ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಗೆ ಒಂದು ಪತ್ರ ಬರೆದಾಗ, ಶಿಕ್ಷಣ ಸಚಿವರನ್ನೇ ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಟ್ಟು ಅಗತ್ಯ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಅಂದು ಕುವೆಂಪು ಬಳಿಯೇ ಸರ್ಕಾರ ಬಂದಿತ್ತು. ಆದರೆ, ಇಂದಿನ ಕುಲಪತಿಗಳು ಯಾರ ಯಾರದ್ದೋ ಕಾಲಿಗೆ ಬೀಳುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಅಧ್ಯಕ್ಷೆ ಕೆ.ಆರ್‌. ಜಯಶೀಲಾ, ‘ಆಗ ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದಿದ್ದರೆ; ಕಲಿಯುಗದಲ್ಲಿ ಕುವೆಂಪು ರಾಮಾಯಣದರ್ಶನಂ ಮಹಾಕಾವ್ಯ ರಚಿಸಿದರು. ಪ್ರತಿಯೊಬ್ಬ ಮಗುವೂ ಹುಟ್ಟಿದಾಗ ವಿಶ್ವಮಾನವ ಆಗಿರುತ್ತದೆ. ಆದರೆ, ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಆದರೆ, ಮತ್ತೆ ಅವರನ್ನು ವಿಶ್ವಮಾನವರನ್ನಾಗಿ ಮಾಡಲು ಶಿಕ್ಷಣವೊಂದರಿಂದ ಮಾತ್ರ ಸಾಧ್ಯ ಎಂದು ಕುವೆಂಪು ಪ್ರತಿಪಾದಿಸಿದ್ದರು’ ಎಂದು ಸ್ಮರಿಸಿದರು.

‘ಪಠ್ಯಗಳಲ್ಲಿರುವ ಕವನಗಳು, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವರಾಜ, ಡಿಡಿಪಿಐ ಪರಮೇಶ್ವರಪ್ಪ ಹಾಜರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು.

ಶಾರದಾ, ನಾಗೇಶ್‌ ಪ್ರಥಮ
‘ವಿಶ್ವಮಾನವ ಕುವೆಂಪು’ ಪ್ರಬಂಧ ಸ್ಪರ್ಧೆಯ ಪ್ರೌಢಶಾಲೆ ವಿಭಾಗದಲ್ಲಿ ಹರಿಹರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್‌. ಶಾರದಾ  ಪ್ರಥಮ ಸ್ಥಾನ ಪಡೆದಿದ್ದಾರೆ. ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಕ್ಷಿತಾ ಹಾಗೂ ಹೊನ್ನಾಳಿ ತಾಲ್ಲೂಕಿನ ರಾಂಪುರದ ಸರ್ಕಾರಿ ಪ್ರೌಢಶಾಲೆಯ ವಿ. ಮಧುರಾ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.

ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನ ಎಂ. ನಾಗೇಶ್‌ (ಪ್ರಥಮ), ಅದೇ ಕಾಲೇಜಿನ ಕೆ.ಎಂ. ರೇಖಾ (ದ್ವಿತೀಯ) ಹಾಗೂ ಹರಪನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಶಿಕಲಾ (ತೃತೀಯ) ಬಹುಮಾನ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು