ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ಕೆರೆಯಂತಾಗುವ ತಾವರೆಕೆರೆ ಠಾಣೆ: ಪೊಲೀಸರಿಗೆ ಇಲ್ಲದಾಗಿದೆ ಸುರಕ್ಷತೆ

Last Updated 9 ಜುಲೈ 2022, 5:20 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಉಪ ಪೊಲೀಸ್ ಠಾಣೆಯ ಕಟ್ಟಡ ಮಳೆ ಬಂದರೆ ಸಂಪೂರ್ಣ ಸೋರುತ್ತಿದ್ದು, ಮಳೆಗಾಲದಲ್ಲಿ ಕಟ್ಟಡದ ತುಂಬ ನೀರು ನಿಂತು ಸಣ್ಣ ಕೆರೆಯಂತಾಗುತ್ತದೆ.

ಈ ಠಾಣೆಯು ಜಿಲ್ಲೆಯ ಗಡಿ ಭಾಗದಲ್ಲಿದ್ದು, 1 ಕಿ.ಮೀ. ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆ ಆರಂಭವಾಗುತ್ತದೆ. ತಾವರೆಕೆರೆಯಲ್ಲಿ 25ರಿಂದ 30 ವರ್ಷಗಳ ಹಿಂದೆಯೇ ಪೊಲೀಸ್ ಇಲಾಖೆ ಉಪ ಪೊಲೀಸ್ ಠಾಣೆಯನ್ನು ತೆರೆದಿದ್ದು, ಸ್ವಂತ ಕಟ್ಟಡ ಇಲ್ಲದ್ದರಿಂದ ಗ್ರಾಮ ಪಂಚಾಯತಿಯಿಂದ ಕಟ್ಟಡವೊಂದನ್ನು ಬಿಟ್ಟು ಕೊಡಲಾಗಿತ್ತು. ಆದರೆ, ಠಾಣೆಗೆ ಸ್ವಂತ ಕಟ್ಟಡ ಹೊಂದುವತ್ತ ಇಲಾಖೆ ಈವರೆಗೂ ಆಲೋಚಿಸಿಲ್ಲ.

ಅಲ್ಲದೆ, ಪೊಲೀಸ್ ಸಿಬ್ಬಂದಿಗಾಗಿ ಪಂಚಾಯಿತಿಯಿಂದಲೇ ವಸತಿಗೃಹಕ್ಕೂ ಕಟ್ಟಡ ಬಿಟ್ಟು ಕೊಡಲಾಗಿದ್ದು, ಅದೂ ಶಿಥಿಲಾವಸ್ಥೆಯಲ್ಲಿದೆ. ಅಂತೆಯೇ ಅಲ್ಲಿ ಸಿಬ್ಬಂದಿ ವಾಸಿಸುತ್ತಿಲ್ಲ. ಅತ್ತ ಠಾಣೆಯ ಕಟ್ಟಡವೂ ಸಂಪೂರ್ಣ ಸೋರುತ್ತಿದ್ದು, ನೀರು ಒಳಗೆ ನುಸುಳದಂತೆ ತಡೆಯಲು ಛಾವಣಿಯ ಮೇಲೆ ಪ್ಲಾಸ್ಟಿಕ್ ತಾಡಪಾಲುಗಳನ್ನು ಹಾಕಲಾಗಿದೆ.

‘ಐದಾರು ವರ್ಷಗಳಿಂದ ಈ ಕಟ್ಟಡ ಸೋರುತ್ತಿದೆ. ಆದರೆ ಕಟ್ಟಡದ ದುರಸ್ತಿಯ ಬಗ್ಗೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಗಮನ ಹರಿಸಿಲ್ಲ. ನಮ್ಮ ಗ್ರಾಮಕ್ಕೆ ಉಪ ಪೊಲೀಸ್ ಠಾಣೆಯ ಸುಸಜ್ಜಿತ ಕಟ್ಟಡ ಅವಶ್ಯವಾಗಿದೆ. ಸೋರುತ್ತಿರುವ ಕಟ್ಟಡವನ್ನು ದುರಸ್ತಿಗೊಳಿಸಲು ಇಲಾಖೆಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ನಿವಾಸಿ ದೇವರಾಜ್ ಒತ್ತಾಯಿಸಿದರು.

‘ಠಾಣೆಯ ಕಟ್ಟಡ ಸೋರುತ್ತಿರುವುದು ಗಮನಕ್ಕೆ ಬಂದಿದೆ. ದುರಸ್ತಿಗೆ ಅನುದಾನ ಬಿಡುಗಡೆ ಕೋರಿ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ದುರಸ್ತಿ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕಿನ ನಲ್ಲೂರು ಹಾಗೂ ತ್ಯಾವಣಿಗಿ ಗ್ರಾಮಗಳಲ್ಲೂ ಉಪ ಪೊಲೀಸ್ ಠಾಣೆಗಳಿದ್ದು, ಸುಸಜ್ಜಿತವಾಗಿವೆ’ ಎಂದು ಸಿಇಐ ಪಿ.ಬಿ. ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT