ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಮೂಲ ಸೌಕರ್ಯವಿಲ್ಲದ ಜೀಜಾಮಾತಾ ಕಾಲೊನಿ

ಕೆಆರ್‌ಐಡಿಎಲ್ ನಿರ್ಲಕ್ಷ; ಜನರಿಗೆ ಸಂಕಟ
Last Updated 3 ನವೆಂಬರ್ 2022, 1:44 IST
ಅಕ್ಷರ ಗಾತ್ರ

ಹರಿಹರ: ನಗರದ 3ನೇ ವಾರ್ಡ್‌ ವ್ಯಾಪ್ತಿಯ ಜೀಜಾಮಾತಾ ಕಾಲೊನಿ ನಿರ್ಮಾಣವಾಗಿ 4 ದಶಕಗಳೇ ಕಳೆದಿದ್ದರೂ ರಸ್ತೆ, ಚರಂಡಿಯಂತಹ ಮೂಲ ಸೌಕರ್ಯ ಕಲ್ಪಿಸದ್ದರಿಂದ ಜನತೆ ಸಮಸ್ಯೆ ಎದುರಿಸುವಂತಾಗಿದೆ.

ಕಾಲೊನಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆಯಾಗಿನಾಲ್ಕು ವರ್ಷ ಕಳೆದರೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಆರ್‌ಐಡಿಎಲ್‌) ಕಾಮಗಾರಿ ಆರಂಭಿಸಿಲ್ಲ.

ಜೀಜಾಮಾತಾ ಕಾಲೊನಿ ಹಾಗೂ ಮಜ್ಜಿಗೆ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 2018-19ನೇ ಸಾಲಿನಲ್ಲಿ ₹ 50 ಲಕ್ಷ ಬಿಡುಗಡೆಯಾಗಿದ್ದು, ಈ ಪೈಕಿ ₹ 24 ಲಕ್ಷ ಅನುದಾನದಲ್ಲಿ ಮಜ್ಜಿಗೆ ಬಡಾವಣೆಯಲ್ಲಿ ಕಾಮಗಾರಿ ನಡೆಸಲಾಗಿದೆ. ಉಳಿದ ₹ 26 ಲಕ್ಷ ಅನುದಾನದಲ್ಲಿ ಜೀಜಾಮಾತಾ ಕಾಲೊನಿಯಲ್ಲಿ ಕಾಮಗಾರಿ ಕೈಗೊಳ್ಳಬೇಕಿತ್ತು. ಆದರೆ, ಇದುವರೆಗೂ ಯಾವುದೇ ಕೆಲಸಗಳು ನಡೆದಿಲ್ಲ. ಕಾಲೊನಿಯ ರಸ್ತೆಗಳನ್ನು ದಶಕಗಳ ಹಿಂದೆ ಗ್ರಾವೆಲ್‌ನಿಂದ ಅಭಿವೃದ್ಧಿಪಡಿಸಿದ್ದು, ಪ್ರಸ್ತುತ ರಸ್ತೆ, ಚರಂಡಿ, ಬೀದಿ ದೀಪ ವ್ಯವಸ್ಥೆ ಇಲ್ಲ.

ಕಪ್ಪು ಮಣ್ಣಾಗಿರುವುದರಿಂದ ಅರ್ಧ ಗಂಟೆ ಮಳೆ ಬಂದರೂ ಇಲ್ಲಿನ ರಸ್ತೆಗಳು ವಾರದವರೆಗೂ ಕೆಸರುಮಯವಾಗಿರುತ್ತವೆ. ವಾಹನಗಳಿಗೆ ಕೆಸರು ಮೆತ್ತಿಕೊಳ್ಳುತ್ತದೆ. ಬೈಕ್, ಸೈಕಲ್ ಸವಾರರು ಎದ್ದು, ಬಿದ್ದು ಸಾಗಬೇಕಾದ ಸ್ಥಿತಿ ಇದೆ. ಆಟೊ ಚಾಲಕರು ಈ ಬಡಾವಣೆಯ ಹೆಸರು ಹೇಳಿದರೆ ಎಷ್ಟು ಬಾಡಿಗೆ ಕೊಟ್ಟರೂ ಬರಲು ನಿರಾಕರಿಸುತ್ತಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುವ ಆಟೊ ಚಾಲಕರು ಬಡಾವಣೆಯ ಹೊರಗಿಂದಲೇ ಕರೆದೊಯ್ಯುತ್ತಾರೆ. ಅಲ್ಲಿಯೇ ಇಳಿಸುತ್ತಾರೆ. ಇನ್ನು ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಸಮರ್ಪಕ ‘ಬೀದಿ ದೀಪ ವ್ಯವಸ್ಥೆ ಇಲ್ಲದ ಕಾರಣ ಸೂರ್ಯ ಮುಳುಗಿದ ನಂತರ ಇಲ್ಲಿನ ನಿವಾಸಿಗಳು ಗೃಹ ಬಂಧನಕ್ಕೆ ಒಳಗಾಗುತ್ತಾರೆ. ಗಿಡ–ಗಂಟಿಗಳು ಹುಲುಸಾಗಿ ಬೆಳೆದಿರುವ ಕಾರಣ ವಿಷ ಜಂತುಗಳ ಕಾಟ. ಸಂಜೆ ವೇಳೆ ವಾಯುವಿಹಾರಕ್ಕೆ ತೆರಳುವವರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ. ಬ್ಯಾಂಕ್‌ನಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ಹಲವರು ಕನಸಿನ ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಬಡಾವಣೆಯ ದುಃಸ್ಥಿತಿ ಕಾರಣ ಕುಟುಂಬ ಸದಸ್ಯರು ಬೇರಡೆ ಬಾಡಿಗೆ ಮನೆಗೆ ಹೋಗೋಣ ಎಂದು ದುಂಬಾಲು ಬೀಳುತ್ತಿದ್ದಾರೆ’ ಎಂದು ಇಲ್ಲಿನ ನಿವಾಸಿ ಬಸವನಗೌಡ ಬೇಸರ ವ್ಯಕ್ತಪಡಿಸಿದರು.

.....

ಅನುದಾನ ವರ್ಗಾಯಿಸಿಕೊಳ್ಳಬೇಕಿದೆ

ಈ ಹಿಂದೆ ಹರಪನಹಳ್ಳಿಯೂ ಕೆಆರ್‌ಐಡಿಎಲ್ ಹರಿಹರ ಕಚೇರಿಗೆ ಒಳಪಟ್ಟಿತ್ತು. ಆದಕಾರಣ ಆಗಿನ ಅಧಿಕಾರಿ ಹರಪನಹಳ್ಳಿಯ ಕಾಮಗಾರಿಯೊಂದಕ್ಕೆ ಕಾಲೊನಿಯ ಅನುದಾನ ಬಳಸಿದ್ದಾರೆ. ಹರಪನಹಳ್ಳಿ ತಾಲ್ಲೂಕಿಗೆ ಬಂದಿರುವ ಅನುದಾನ ಇಲ್ಲಿಗೆ ವರ್ಗಾಯಿಸಿಕೊಳ್ಳಬೇಕಿದೆ. ಈ ಕೆಲಸ ಇಲಾಖೆಯ ಉನ್ನತ ಅಧಿಕಾರಿಗಳ ಹಂತದಲ್ಲಿ ಆಗಬೇಕಿದೆ.

-ಗಣೇಶ್ ಬಾಬು, ಕಾರ್ಯನಿರ್ವಾಹಕ ಎಂಜಿನಿಯರ್‌, ಕೆಆರ್‌ಐಡಿಎಲ್

...........

ಜೀಜಾಮಾತಾ ಕಾಲೊನಿ ಕಾಮಗಾರಿಗೆ ಬಂದ ಅನುದಾನವನ್ನು ಹರಪನಹಳ್ಳಿಗೆ ವರ್ಗಾಯಿಸಲಾಗಿದೆ. ಕಾಮಗಾರಿ ವಿಳಂಬ ಹಾಗೂ ಬೇರೆಡೆಗೆ ಅನುದಾನ ವರ್ಗಾಯಿಸಿದ ಅಧಿಕಾರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
-ಆಟೊ ಹನುಮಂತಪ್ಪ, ನಗರಸಭೆ 3ನೇ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT