ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ ಬೈಕ್‌: ₹ 15 ಸಾವಿರ ಪರಿಹಾರಕ್ಕೆ ಗ್ರಾಹಕರ ನ್ಯಾಯಾಲಯ ಸೂಚನೆ

ಜೈನ್‌ ಬಜಾಜ್‌ ಶೋರೂಂಗೆ ಗ್ರಾಹಕರ ವೇದಿಕೆ ಚಾಟಿ ಏಟು
Last Updated 28 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಹಕನಿಗೆ ಮಾರಾಟ ಮಾಡಿದ್ದ ಬೈಕ್‌ನ ದೋಷ ನಿವಾರಿಸದೇ ಸೇವಾ ಲೋಪ ಎಸಗಿದ ಹರಿಹರದ ಜೈನ್‌ ಬಜಾಜ್‌ ಶೋರೂಂ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ನೂತನ ಬೈಕ್‌ ನೀಡಬೇಕು ಇಲ್ಲವೇ ಗ್ರಾಹಕ ಪಾವತಿಸಿದ್ದ ₹ 98,900 ಅನ್ನು ಬಡ್ಡಿ ಸಮೇತ ಮರಳಿಸಬೇಕು ಎಂದು ಆದೇಶಿಸಿದೆ.

ದೂರುದಾರರಾದ ಹರಿಹರದ ವಿದ್ಯಾನಗರದ ಎಸ್‌. ಕುಮಾರ್‌ (ಕುಮಾರ್‌ ವೈ.ಎಸ್‌.) ಅವರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 10 ಸಾವಿರ ಹಾಗೂ ಪ್ರಕರಣಕ್ಕೆ ಮಾಡಿದ ವೆಚ್ಚ ಭರಿಸಲು ₹ 5 ಸಾವಿರವನ್ನು 60 ದಿನಗಳ ಒಳಗೆ ಪಾವತಿಸಬೇಕು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಅವರು ಡಿ. 23ರಂದು ಆದೇಶಿಸಿದ್ದಾರೆ.

ಪ್ರಕರಣದ ವಿವರ: ಎಸ್‌. ಕುಮಾರ್‌ ಅವರು ಹರಿಹರದ ಜೈನ್‌ ಬಜಾಜ್‌ ಶೋರೂಂನಲ್ಲಿ 2018ರ ನವೆಂಬರ್‌ 8ರಂದು ‘ಬಜಾಜ್‌ ಪಲ್ಸರ್‌–150 ಸಿಸಿ’ ಬೈಕ್‌ ಖರೀದಿಸಿದ್ದರು.

₹ 39,900 ಹಣ ಪಾವತಿಸಿ, ಬಾಕಿ ಉಳಿದ ₹ 59 ಸಾವಿರನ್ನು ಬಜಾಜ್‌ ಫೈನಾನ್ಸ್‌ ಕಂಪನಿಯರಿಂದ ಸಾಲ ಪಡೆದಿದ್ದರು. ಬೈಕ್‌ ತೆಗೆದುಕೊಂಡು ಹೋಗುವ ದಿನವೇ ಚಾಲೂ ಮಾಡುವಾಗ ಸಮಸ್ಯೆ ಕಾಣಿಸಿಕೊಂಡ ಬಗ್ಗೆ ಮಳಿಗೆಯವರ ಗಮನಕ್ಕೆ ತಂದಿದ್ದರು. ಆಗ ಮೆಕ್ಯಾನಿಕಲ್‌ ಬೈಕ್‌ ತೆಗೆದುಕೊಂಡು ಹೋಗಿ ಸರಿಪಡಿಸಿಕೊಂಡು ಬಂದಿದ್ದರು. ಇದಾದ ಬಳಿಕ ಕೆಲವೇ ದಿನಗಳಲ್ಲಿ ಎಂಜಿನ್‌ ಬಳಿ ಆಯಿಲ್‌ ಸೋರಿಕೆಯಾಗಲು ಶುರುವಾಗಿತ್ತು.

ಐದು ವರ್ಷ ವಾರಂಟಿ ಅಥವಾ 75,000 ಕಿ.ಮೀ ಚಾಲನೆ ಅವಧಿಯ ಮೊದಲೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕುಮಾರ್‌ ಅವರು ನೂತನ ಬೈಕ್‌ ನೀಡುವಂತೆ ಶೋರೂಂಗೆ ಮನವಿ ಮಾಡಿದ್ದರು. ಆದರೆ, ಶೋರೂಂ ಇದಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ಕುಮಾರ್‌ ಅವರು ಕಳೆದ ಏಪ್ರಿಲ್‌ 12ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು. ವಕೀಲ ಬಿ. ಬಸವರಾಜು ಯು. ಅವರು ಕುಮಾರ್‌ ಪರ ವಾದ ಮಂಡಿಸಿದ್ದರು.

ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ಗ್ರಾಹಕರ ವೇದಿಕೆಯ ನ್ಯಾಯಾಧೀಶರು, ಶೋರೂಂ ಸೇವಾ ಲೋಪವೆಸಗಿರುವುದು ದೃಢಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೈಕ್‌ನಲ್ಲಿರುವ ದೋಷವನ್ನು ಹದಿನೈದು ದಿನಗಳಲ್ಲಿ ಸರಿಪಡಿಸಬೇಕು ಇಲ್ಲವೇ ಒಂದು ತಿಂಗಳಲ್ಲಿ ಹೊಸ ಬೈಕ್‌ ಅನ್ನು ದೂರುದಾರರಿಗೆ ನೀಡಬೇಕು. ತಪ್ಪಿದರೆ ಹಳೆಯ ಬೈಕ್‌ ಮರಳಿ ಪಡೆದು,₹ 98,900 ಹಾಗೂ ದೂರು ನೀಡಿದ ದಿನದಿಂದ ಶೇ 9 ಬಡ್ಡಿ ಬಡ್ಡಿ ಪಾವತಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಟಾಟಾ ಏಸ್‌ನಲ್ಲಿ ದೋಷ: ₹ 10 ಸಾವಿರ ಪರಿಹಾರಕ್ಕೆ ಆದೇಶ

‘ಟಾಟಾ ಏಸ್‌ ಗೋಲ್ಡ್‌–ಬಿ.ಎಸ್‌ 5’ ವಾಹನದಲ್ಲಿನ ದೋಷವನ್ನು ಸರಿಪಡಿಸದೇ ಸೇವಾಲೋಪವೆಸಗಿದ ಹಿನ್ನೆಲೆಯಲ್ಲಿ ದೊಡ್ಡಬಾತಿಯ ಗ್ರಾಹಕ ಡಿ.ಎಚ್‌. ಉಮೇಶ್‌ ಅವರಿಗೆ ಟಾಟಾ ಮೋಟರ್ಸ್‌ ಲಿಮಿಟೆಡ್‌ ಕಂಪನಿ ಹಾಗೂ ಪ್ರೇರಣಾ ಮೋಟರ್ಸ್‌ ಮಳಿಗೆಯು 30 ದಿನಗಳ ಒಳಗೆ ಸಮಸ್ಯೆ ನಿವಾರಿಸಬೇಕು ಇಲ್ಲವೇ 60 ದಿನಗಳ ಒಳಗೆ ಹೊಸ ವಾಹನವನ್ನು ನೀಡಬೇಕು. ತಪ್ಪಿದರೆ ವಾಹನಕ್ಕೆ ಪಾವತಿಸಿದ್ದ ಹಣದ ಜೊತೆಗೆ ಶೇ 9 ಬಡ್ಡಿ ಸೇರಿಸಿ ಮರಳಿಸಬೇಕು ಎಂದು ಗ್ರಾಹಕರ ವೇದಿಕೆಯು ಆದೇಶಿಸಿದೆ.

ದೂರುದಾರರಾದ ಉಮೇಶ್‌ ಅವರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 5 ಸಾವಿರ ಹಾಗೂ ಪ್ರಕರಣದ ವೆಚ್ಚಕ್ಕಾಗಿ ₹ 5 ಸಾವಿರ ಪರಿಹಾರ ನೀಡಬೇಕು ಎಂದು ಗ್ರಾಹಕರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ, ಸದಸ್ಯರಾದ ಜ್ಯೋತಿ ರಾದೇಶ್‌ ಜಂಬಗಿ, ಕೆ.ಎನ್‌. ಶಿವಕುಮಾರ್‌ ಒಳಗೊಂಡ ಪೀಠವು ನಿರ್ದೇಶನ ನೀಡಿದೆ.

ಉಮೇಶ್‌ ಅವರು ಇಂಡಸ್‌ ಬ್ಯಾಂಕ್‌ನಿಂದ ಸಾಲ ಪಡೆದು ಒಟ್ಟು ₹ 4,22,549 ಪಾವತಿಸಿ ಪ್ರೇರಣಾ ಮೋಟರ್ಸ್‌ನಿಂದ ಖರೀದಿಸಿದ್ದ ಟಾಟಾ ಏಸ್‌ ವಾಹನವನ್ನು 2018ರ ಜೂನ್‌ 2ರಂದು ನೋಂದಣಿ ಮಾಡಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ವಾಹನದಲ್ಲಿ ಮೇಲಿಂದ ಮೇಲೆ ತಾಂತ್ರಿಕ ದೋಷ ಕಾಣಿಸಿಕೊಳ್ಳತೊಡಗಿತು. ವಾಹನ ನೀಡಿದ್ದ ಪ್ರೇರಣಾ ಮೋಟರ್ಸ್‌ ಸಮಸ್ಯೆ ನಿವಾರಿಸದೇ ಇರುವುದರಿಂದ ಏಪ್ರಿಲ್‌ 15ರಂದು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. 2 ವರ್ಷ ವಾರಂಟಿ ಅವಧಿ ಇರುವುದರಿಂದ ಹೊಸ ವಾಹನ ನೀಡಬೇಕು ಎಂಬ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT