ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಗೆ ಭದ್ರೆ ನೀರು ಬರಲು ಬೇಕು ಎರಡು ವರ್ಷ’

ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳಗಳಿಗೆ ರೈತ ಸಂಘದ ಮುಖಂಡರ ಭೇಟಿ
Last Updated 1 ಮಾರ್ಚ್ 2018, 10:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸುಮಾರು ಇನ್ನೂರಕ್ಕೂ ಹೆಚ್ಚು ರೈತರು ತಂಡ ಬುಧವಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ನೇತೃತ್ವದಲ್ಲಿ ಸುಮಾರು ಒಂಬತ್ತು ಸ್ಥಳಗಳಿಗೆ ಭೇಟಿ ನೀಡಿ, ಕಾಮಗಾರಿಯನ್ನು ವೀಕ್ಷಿಸಿದರು. ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಚಳ್ಳಕೆರೆಯ ರೈತ ಮುಖಂಡರು ಈ ತಂಡದಲ್ಲಿದ್ದರು.

ಜಾನಕಲ್‌ ಸಮೀಪ ನಡೆಯುತ್ತಿರುವ ಸುರಂಗ ಕಾಮಗಾರಿ ವೀಕ್ಷಿಸಿದ ತಂಡ, ಮುಂದೆ ಮದುರೆ ಕಣಿವೆ, ಚಿಕ್ಕಯಗಟಿ, ಸಾಣೆಹಳ್ಳಿ, ಅಜ್ಜಂಪುರ (ಸುರಂಗ ಕಾಮಗಾರಿ), ಬೆಟ್ಟತಾವರೆಕೆರೆ, ಪಂಪ್‌ಹೌಸ್‌ಗಳ ವೀಕ್ಷಣೆ, ಬಿ.ಆರ್. ಪ್ರಾಜೆಕ್ಟ್ ನಂತರ ಸಂಜೆ ವೇಳೆಗೆ ಗಾಜನೂರು ಜಲಾಶಯದ ಹಿನ್ನೀರು ಪ್ರದೇಶಕ್ಕೆ (ಚಿತ್ರದುರ್ಗಕ್ಕೆ ನೀರು ಹರಿಯುವ ತುಂಗಾ ನದಿ ಸಮೀಪ) ಭೇಟಿ ನೀಡಿದರು.

‘ಭದ್ರಾ ನೀರು ಹರಿಸುವುದಾಗಿ ರಾಜಕಾರಣಿಗಳು ನೀಡುತ್ತಿರುವ ಭರವಸೆಗಳೆಲ್ಲ ಅಪ್ಪಟ ಸುಳ್ಳು. ಡಿಸೆಂಬರ್ 2017ಕ್ಕೆ ಜಿಲ್ಲೆಗೆ ಭದ್ರಾ ನೀರು ಹರಿಯುತ್ತದೆ ಎಂದು ಸುಳ್ಳು ಹೇಳಿದ್ದಾಗಿದೆ. ಈಗ 2018ರ ಮುಂಗಾರು ಹೊತ್ತಿಗೆ ನೀರು ಹರಿಯುತ್ತದೆ ಎಂದು ಪುನಃ ಸುಳ್ಳು ಹೇಳುತ್ತಿದ್ದಾರೆ. ಕಾಮಗಾರಿಯಲ್ಲಿ ತೊಡಗಿರುವ ಕೆಲಸಗಾರರೇ ಹೇಳುವಂತೆ, ಯಾವುದೇ ಅಡೆತಡೆಗಳಿಲ್ಲದೇ, ವೇಗವಾಗಿ ಕೆಲಸ ನಡೆದರೂ ಜಿಲ್ಲೆಗೆ ನೀರು ಹರಿಯಲು ಕನಿಷ್ಠ 24 ತಿಂಗಳು ಬೇಕಾಗುತ್ತದೆ’ ಎಂದು ತಂಡದ ನೇತೃತ್ವ
ವಹಿಸಿದ್ದ ಈಚಘಟ್ಟ ಸಿದ್ದವೀರಪ್ಪ ತಿಳಿಸಿದರು.

‘ಜಾನಕಲ್‌ ಬಳಿ ಒಂದೂವರೆ ಕಿ.ಮೀ ಸುರಂಗ ಮಾರ್ಗ ಕಾರ್ಯ ಮುಗಿದಿದೆಯಂತೆ. ಇನ್ನೂ ಒಂದೂ ಮುಕ್ಕಾಲು ಕಿ.ಮೀ ಬಾಕಿ ಇದೆ’ ಎಂದು ಅಲ್ಲಿನ ಗುತ್ತಿಗೆದಾರರು ಹೇಳಿದರು. ಸುರಂಗದ ಒಳಗೆ ಹೋಗುವುದು ಕಷ್ಟವಾಗಿರುವುದರಿಂದ ಒಳಗೆ ಬಿಡಲಿಲ್ಲ’ ಎಂದು ಹೇಳಿದರು.

‘ಅಜ್ಜಂಪುರದ ಸಮೀಪದಲ್ಲಿ ನಡೆಯುತ್ತಿರುವ ಸುರಂಗ ಕಾರ್ಯ ಇನ್ನೂ 500 ಮೀಟರ್ ಬಾಕಿದೆ. ಕಾಲುವೆ ಇನ್ನೂ ಫಿನಿಷಿಂಗ್ ಆಗಿಲ್ಲ. ಸಡಿಲ ಮಣ್ಣು ಬರ್ತಿದೆಯೆಂತೆ. ಈ ಎಲ್ಲ ಸುರಂಗಗಳ ಕಾಮಗಾರಿ ಮುಗಿಯುವುದಕ್ಕೇ ಒಂದು ವರ್ಷ ಬೇಕಾಗಬಹುದು’ ಎಂದು ಅಂದಾಜಿಸಿದರು.

‘2016ರಲ್ಲಿ ಗಾಜನೂರು ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದಾಗ, ಕಾಲುವೆ ತೆಗೆದಿರಲಿಲ್ಲ. ಈಗ ಕಾಲುವೆ ತೆಗೆದಿದ್ದಾರೆ. ಆದರೆ, ಸಿಮೆಂಟ್ ಪ್ಲಾಸ್ಟಿಂಗ್ ಆಗಿಲ್ಲ. ಅದೂ ಅರ್ಧ ಕಾಲುವೆ ಕೆಲಸವಾಗಿದೆ’ ಎಂದು ತಿಳಿಸಿದರು.

ತಂಡದಲ್ಲಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕಾರ್ಯಾಧ್ಯಕ್ಷ ಎಸ್. ಬೈಲಪ್ಪ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಪಟೇಲ್ ಚಂದ್ರಶೇಖರಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಹಿರೇಕಬ್ಬಿಗೆರೆ ರಾಜಣ್ಣ, ಚಳ್ಳಕೆರೆ, ಹೊಸದುರ್ಗ ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT