ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂ ವ್ಯಾಜ್ಯ; ಕಡಿಮೆಯಾಗುತ್ತಿದೆ ಹೊರೆ

Published : 13 ಸೆಪ್ಟೆಂಬರ್ 2024, 5:11 IST
Last Updated : 13 ಸೆಪ್ಟೆಂಬರ್ 2024, 5:11 IST
ಫಾಲೋ ಮಾಡಿ
Comments

ದಾವಣಗೆರೆ: ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳಾದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕೋರ್ಟ್‌ಗಳಲ್ಲಿನ ಭೂವ್ಯಾಜ್ಯ ಪ್ರಕರಣಗಳ ಹೊರೆ ನಿಧಾನವಾಗಿ ಕರಗುತ್ತಿದೆ. ಎರಡು ವರ್ಷಕ್ಕೂ ಮುನ್ನ ಈ ನ್ಯಾಯಾಲಯಗಳಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರಕರಣಗಳು ಮೂರಂಕಿ ಹಾಗೂ ಎರಡಂಕಿಗೆ ಕುಸಿದಿವೆ.

ಭೂವ್ಯಾಜ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದ ಬಳಿಕ ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ವೇಗ ಸಿಕ್ಕಿದೆ. ಕಲಾಪಗಳು ನಿಯಮಿತವಾಗಿ ನಡೆಯುತ್ತಿದ್ದು, ವಕೀಲರ ಸಹಕಾರವೂ ದೊರಕುತ್ತಿದೆ. ಉಪವಿಭಾಗಾಧಿಕಾರಿ ನ್ಯಾಯಾಲಯ ತಾಲ್ಲೂಕು ಹಂತಕ್ಕೂ ವಿಸ್ತರಿಸಿದ್ದು, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕಾರಿಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಎರಡು ಕಂದಾಯ ಉಪವಿಭಾಗಗಳಿವೆ. ಹೊನ್ನಾಳಿ ಉಪವಿಭಾಗದಲ್ಲಿ ನ್ಯಾಮತಿ, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳಿವೆ. ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕುಗಳು ದಾವಣಗೆರೆ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿವೆ. ದಾವಣಗೆರೆಗಿಂತ ಹೊನ್ನಾಳಿ ಉಪವಿಭಾಗದಲ್ಲಿ ಭೂವ್ಯಾಜ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಪ್ರತಿ ಮಂಗಳವಾರ ಹಾಗೂ ಗುರುವಾರ ಕಲಾಪ ನಡೆಸುವಂತೆ ಕಂದಾಯ ಇಲಾಖೆ ಈ ಹಿಂದೆ ನಿರ್ದೇಶನ ನೀಡಿತ್ತು. ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದ ಕಲಾಪ ಬೇರೆ ಬೇರೆ ದಿನ ನಡೆಯುತ್ತಿವೆ. ಜಿಲ್ಲಾಧಿಕಾರಿ ನ್ಯಾಯಾಲಯದ ಕಲಾಪ ಪ್ರತಿ ಸೋಮವಾರ, ಗುರುವಾರ ಹಾಗೂ ಶುಕ್ರವಾರ ನಡೆಯುತ್ತಿದೆ. ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ನ್ಯಾಯಾಲಯಗಳಿಗೂ ಪ್ರತಿ ವಾರ ನಿರ್ದಿಷ್ಟ ದಿನವೊಂದನ್ನು ನಿಗದಿಪಡಿಸಲಾಗಿದೆ.

ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ಅಪೀಲುಗಳ ಸಂಖ್ಯೆ ಹೆಚ್ಚಾಗಿದೆ. ತಹಶೀಲ್ದಾರ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಹಾಗೂ ಅಲ್ಲಿಂದ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ನೀರಾವರಿ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿರುವುದರಿಂದ ಕಕ್ಷಿದಾರರು ಭೂವ್ಯಾಜ್ಯಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಲು ಇಷ್ಟಪಡುತ್ತಿಲ್ಲ.

‘ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ ಭೂವ್ಯಾಜ್ಯಗಳ ಸಂಖ್ಯೆ ಕಡಿಮೆ ಇದೆ. ವರ್ಷಕ್ಕೆ ಸರಾಸರಿ ಮೂರಂಕಿಯಷ್ಟು ಪ್ರಕರಣಗಳು ಮಾತ್ರ ನ್ಯಾಯಾಲಯದ ಮುಂದೆ ಬರುತ್ತಿವೆ. ಪ್ರತಿ ತಿಂಗಳು ಕಂದಾಯ ಅಧಿಕಾರಿಗಳ ಸಭೆ ನಡೆಸಿ ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಹಿಂದೆ ಉಪವಿಭಾಗಾಧಿಕಾರಿ ನ್ಯಾಯಾಲಗಳಿಗೆ ದಾವಣಗೆರೆ ಹಾಗೂ ಹೊನ್ನಾಳಿಗೆ ಕಕ್ಷಿದಾರರು ಅಲೆಯಬೇಕಾಗಿತ್ತು. ಇತ್ತೀಚೆಗೆ ಪ್ರತಿ ತಾಲ್ಲೂಕುಗಳಲ್ಲಿ ವಾರದ ಒಂದು ದಿನ ಉಪವಿಭಾಗಾಧಿಕಾರಿ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ. ಉಪವಿಭಾಗಾಧಿಕಾರಿ ವ್ಯಾಪ್ತಿಯ ತಾಲ್ಲೂಕಿನ ಕಕ್ಷಿದಾರರಿಗೆ ಇದರಿಂದ ಅನುಕೂಲವಾಗಿದೆ.

‘ಕಕ್ಷಿದಾರರೊಬ್ಬರಿಗೆ ನ್ಯಾಯದಾನ ನೀಡಲು ಪ್ರಕರಣವನ್ನು ಕನಿಷ್ಠ ಐದಾರು ಬಾರಿಯಾದರೂ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ದಾಖಲೆಗಳ ಕೊರತೆಯ ನೆಪ ಮುಂದಿಟ್ಟುಕೊಂಡು ವಕೀಲರು ಮತ್ತು ಕಕ್ಷಿದಾರರು ಮತ್ತೊಂದು ದಿನಾಂಕಕ್ಕೆ ಬೇಡಿಕೆ ಇಡುತ್ತಿದ್ದರು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ. ತ್ವರಿತ ವಿಚಾರಣೆ, ಶೀಘ್ರ ವಿಲೇವಾರಿಗೆ ಶ್ರಮಿಸಲಾಗುತ್ತಿದೆ. ಮುಂದಿನ ತಿಂಗಳ ಹೊತ್ತಿಗೆ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಎರಡಂಕಿಗೆ ಇಳಿಸುವ ಗುರಿ ಹೊಂದಲಾಗಿದೆ’ ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್‌ ಕುಮಾರ್‌ ತಿಳಿಸಿದ್ದಾರೆ.

ದೀರ್ಘಾವಧಿ ಪ್ರಕರಣಕ್ಕೆ ಮುಕ್ತಿ

ಜಿಲ್ಲೆಯ ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ದೀರ್ಘಾವಧಿಯಿಂದ ವಿಲೇವಾರಿಗೆ ಬಾಕಿ ಉಳಿದಿದ್ದ ಪ್ರಕರಣಗಳಿಗೆ ಮುಕ್ತಿ ಸಿಕ್ಕಿದೆ. ಆರು ತಿಂಗಳ ಮೇಲ್ಪಟ್ಟ ಯಾವುದೇ ಪ್ರಕರಣಗಳು ಜಿಲ್ಲೆಯ ಯಾವುದೇ ತಹಶೀಲ್ದಾರ್‌ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲ.

ತಹಶೀಲ್ದಾರ್‌ ನ್ಯಾಯಾಲಯದಲ್ಲಿ ವಿಲೇವಾರಿಗೆ ಬಾಕಿ ಇರುವ 249 ಪ್ರಕರಣಗಳಲ್ಲಿ 3 ತಿಂಗಳಿಂದ 6 ತಿಂಗಳವರೆಗಿನ 13 ಪ್ರಕರಣಗಳಿವೆ. 2ರಿಂದ 3 ತಿಂಗಳ ಒಳಗಿನ 36 ಹಾಗೂ ಎರಡು ತಿಂಗಳ ಒಳಗಿನ 199 ಪ್ರಕರಣಗಳಿವೆ. ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 2 ವರ್ಷ ಮೇಲ್ಪಟ್ಟ ಯಾವುದೇ ಪ್ರಕರಣ ವಿಲೇವಾರಿಗೆ ಬಾಕಿ ಉಳಿದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT