ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಓಲೈಕೆಗೆ ಅಭ್ಯರ್ಥಿಗಳ ಕೊನೆ ಕ್ಷಣದ ಕಸರತ್ತು

Last Updated 22 ಏಪ್ರಿಲ್ 2019, 15:48 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಯ ಮತದಾನದ ಮುನ್ನಾ ದಿನವಾದ ಸೋಮವಾರ ‘ಮತದಾರ ಪ್ರಭು’ಗಳನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಕೊನೆ ಕ್ಷಣದ ‘ಕಸರತ್ತು’ ನಡೆಸಿದರು.

ಬಹಿರಂಗ ಪ್ರಚಾರದ ಅಬ್ಬರಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತ್ತು. ಹೀಗಾಗಿ ಸೋಮವಾರ ಬೆಳಿಗ್ಗೆಯಿಂದಲೇ ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಗ್ರಾಮೀಣ ಭಾಗಗಳ ಓಣಿ ಓಣಿಗಳಲ್ಲೂ ಸಂಚರಿಸಿದ ಕಾರ್ಯಕರ್ತರು ಕೊನೆಯ ದಿನದ ‘ರಾತ್ರಿಯ ಕರಾಮತ್ತು’ ತೋರಿಸಿದರು.

ನಗರದಲ್ಲೇ ತಂಗಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರು ಈ ಹಿಂದೆ ನಡೆಸಿದ್ದ ‘ಪ್ರಬುದ್ಧರ’ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿನ ಮುಖಂಡರಿಗೆ ದೂರವಾಣಿ ಕರೆ ಮಾಡಿ ಗೆಲುವಿಗೆ ರಣತಂತ್ರ ರೂಪಿಸಿದರು. ಅವರ ಪುತ್ರ ಅನೀತ್‌ಕುಮಾರ್‌ ಅವರು ಜಗಳೂರಿನಲ್ಲಿ ಮತ್ತು ಪತ್ನಿ ಗಾಯತ್ರಿ ಸಿದ್ದೇಶ್ವರ ಹಾಗೂ ಪುತ್ರಿ ಅಶ್ವಿನಿ ಶ್ರೀನಿವಾಸ್‌ ಅವರು ನಗರದ ವಿವಿಧೆಡೆ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರು ಹೊನ್ನಾಳಿಯಲ್ಲಿ ತಮ್ಮ ಮನೆಯಲ್ಲೇ ಉಳಿದುಕೊಂಡು ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಗೆಲುವಿಗೆ ತಂತ್ರ ರೂಪಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತ ಹಾಕುವಂತೆ ಮನವಿ ಮಾಡಿದರು.

ಎಸ್‌.ಯು.ಸಿ.ಐ.(ಸಿ) ಪಕ್ಷದ ಅಭ್ಯರ್ಥಿ ಮಧು ತೊಗಲೇರಿ ಅವರು ಮಾಯಕೊಂಡ, ಜಗಳೂರು ವಿಧಾನಸಭಾ ಕ್ಷೇತ್ರಗಳ ಹತ್ತಾರು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಮತಯಾಚಿಸಿದರು. ಪಕ್ಷದ ಕಾರ್ಯಕರ್ತರು ನಗರದ ವಿವಿಧೆಡೆ ಮನೆ ಮನೆಗೆ ಹೋಗಿ ಮತಯಾಚಿಸಿದರು.

ಉಳಿದ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಮನೆ ಮನೆಗೆ ಸಂಚರಿಸಿ ಮತ ನೀಡುವಂತೆ ಕೋರಿದರು.

ಚುನಾವಣೆಗೆ ಒಟ್ಟು 25 ಜನ ಸ್ಪರ್ಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT