ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗಾಗಿ ಮಾಡಿದ ನಿಯಮವೇ ಕಾನೂನು

ಕಾನೂನು ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಅಂಬಾದಾಸ್ ಜಿ. ಕುಲಕರ್ಣಿ
Last Updated 16 ಜೂನ್ 2019, 14:24 IST
ಅಕ್ಷರ ಗಾತ್ರ

ದಾವಣಗೆರೆ: ಬದುಕು ಸುಗಮವಾಗಿ ಸಾಗಲು ನಾವು ಮಾಡಿಕೊಂಡ ನಿಯಮಗಳೇ ಕಾನೂನು. ಅವುಗಳನ್ನು ಉಲ್ಲಂಘಿಸಿ ನಡೆದಾಗ ಅಪರಾಧಗಳು ಉಂಟಾಗುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಅಂಬಾದಾಸ್ ಜಿ. ಕುಲಕರ್ಣಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಬಾಲಕಿಯರ ಬಾಲಭವನದ ಆಶ್ರಯದಲ್ಲಿ ಬಾಲಮಂದಿರದಲ್ಲಿ ಭಾನುವಾರ ನಡೆದ ಮಕ್ಕಳಿಗೆ ಒಂದು ದಿನದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ಜೀವನ ಮುಂದೆ ಬೇಕು ಎಂದರೆ ಮತ್ತೆಂದೂ ಬರುವುದಿಲ್ಲ. ಬಾಲ್ಯದಲ್ಲಿ ಓದುವುದು ನಿಮ್ಮ ಹಕ್ಕು. ಶಾಲಾ ನಿಯಮಗಳನ್ನು ಪಾಲಿಸಿ ವಿದ್ಯೆ ಕಲಿಯಬೇಕು. ಜೀವನದಲ್ಲಿ ಶಿಸ್ತು ಇದ್ದಾಗ ಸಾಧನೆ ಸಾಧ್ಯ ಎಂದು ತಿಳಿಸಿದರು.

ಪೋಕ್ಸೊ ಕಾಯ್ದೆ ಬಗ್ಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್‌. ನಾಗಶ್ರೀ ಮಾತನಾಡಿ, ‘ನಾವು ಚಿಕ್ಕವರು ಇರುವಾಗ ಹೊರಗೆ ಹೋಗಲು ಯಾವುದೇ ಅಭ್ಯಂತರಗಳಿರಲಿಲ್ಲ. ಹೊರಗೆ ಅಪಾಯಗಳೂ ಇರಲಿಲ್ಲ. ಈಗ ಹಾಗಿಲ್ಲ. ಒಂದೆರಡು ವರ್ಷಗಳ ಮಕ್ಕಳ ಮೇಲೂ ಲೈಂಗಿಕ ಹಲ್ಲೆಗಳಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಧಾರಾವಾಹಿ, ಸಿನಿಮಾಗಳಲ್ಲಿ ಮಕ್ಕಳ ಪ್ರೇಮ, ಪ್ರಣಯಗಳನ್ನು ತೋರಿಸುತ್ತಾರೆ. ಹಾಗೆ ನಾವು ಜತೆಯಾಗಿ ಖುಷಿಯಾಗಿರಬಹುದು ಎಂದು ಅದನ್ನು ನೋಡಿದ ಮಕ್ಕಳು ಅಂದುಕೊಳ್ಳುತ್ತವೆ. ಆದರೆ ನಿಜ ಬದುಕು ಹಾಗಿರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಲಿತು ಒಳ್ಳೆಯ ಉದ್ಯೋಗ ಕಂಡುಕೊಂಡ ಬಳಿಕ ಮದುವೆ ಬಗ್ಗೆ ಯೋಚನೆ ಮಾಡಿ. ಅದಕ್ಕಿಂತ ಮೊದಲು ಆ ಬಗ್ಗೆ ಚಿಂತಿಸಬೇಡಿ ಎಂದು ಸಲಹೆ ನೀಡಿದರು.

ಅಪರಿಚಿತರು ಪೆನ್ನು, ಚಾಕಲೇಟು ಕೊಟ್ಟು ಕರೆಯಬಹುದು. ನಿಮಗೆ ಇಷ್ಟದ ಮೊಬೈಲನ್ನು ಆಟವಾಡಲು ನೀಡಬಹುದು. ನಿಮ್ಮ ಇಷ್ಟದ ವಸ್ತು ಸಿಕ್ಕಿತೆಂದು ಹೋದಾಗಲೇ ಲೈಂಗಿಕ ಹಲ್ಲೆಗಳಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಕ್ಕೆ ಬರುವ ಅಪರಿಚಿತರು ಕೂಡ ನಿಮ್ಮನ್ನು ದುರುಪಯೋಗ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.

ಬಾಲನ್ಯಾಯ ಕಾಯ್ದೆ ಬಗ್ಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆಂಗಬಾಲಯ್ಯ ಮಾತನಾಡಿ, ‘ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ಆದಷ್ಟು ಬೇಗ ಅದರಿಂದ ಹೊರಬರಬೇಕು. 18 ವರ್ಷದ ಒಳಗೆ ಎಲ್ಲರೂ ಮಕ್ಕಳೇ. ಅವರಿಗೆ ಮಗುವಾಗುವುದು ಎಂದರೆ ಮಗುವಿನ ಕೈಯಲ್ಲಿ ಮಗು ಎಂದಾಗುತ್ತದೆ. ಮಕ್ಕಳನ್ನು ಪೋಷಣೆ, ಆರೈಕೆ ಮಾಡುವುದು ಹೇಗೆ ಎಂಬ ತಿಳಿವಳಿಕೆ ಬರುವ ಮೊದಲೇ ಮಕ್ಕಳಾಗುವುದು ಜೀವನವನ್ನು ಕತ್ತಲಿಗೆ ದೂಡುತ್ತದೆ’ ಎಂದರು.

ಮಕ್ಕಳ ವ್ಯಕ್ತಿತ್ವ ವಿಕಸನ ಬಗ್ಗೆ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್‌. ಜಿನರಾಲ್ಕರ್‌ ಮಾತನಾಡಿದರು. 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಇ. ಚಂದ್ರಕಲಾ, ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಭು ಎನ್‌. ಬಡಿಗೇರ್‌, ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ ಕುಮಾರ್‌ ಉಪಸ್ಥಿತರಿದ್ದರು.

ಸಿಡಿಪಿಒ ಡಾ. ಎಂ. ವೀಣಾ ಅಧ್ಯಕ್ಷತೆ ವಹಿಸಿದ್ದರು. ಬಾಲಕಿಯರ ಬಾಲಮಂದಿರದ ಪರಿವೀಕ್ಷಣಾಧಿಕಾರಿ ಟಿ.ಆರ್‌. ಶೋಭಾ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT