ಶುಕ್ರವಾರ, ಡಿಸೆಂಬರ್ 6, 2019
22 °C
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದೇವೇಂದ್ರಪ್ಪ ಯಮನಪ್ಪ ಬಸಾಪುರ ಅಭಿಪ್ರಾಯ

ಐತಿಹಾಸಿಕ ತೀರ್ಪುಗಳಿಗೆ ವಕೀಲರು ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭಾರತದಲ್ಲಿ ಐತಿಹಾಸಿಕ ತೀರ್ಪು ಹೊರಬರಲು ವಕೀಲರು ಕಾರಣ. ತೀರ್ಪು ಕೊಡುವವರು ನ್ಯಾಯಾಧೀಶರೇ ಇರಬಹುದು. ಆದರೆ ಕಾನೂನಿನ ಅಂಶಗಳು, ಆಲೋಚನೆಗಳನ್ನು ಇಡುವವರು ವಕೀಲರೇ. ಇವುಗಳು ಚೆನ್ನಾಗಿದ್ದರೆ ಮಾತ್ರ ಒಳ್ಳೆಯ ತೀರ್ಪು ಬರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದೇವೇಂದ್ರಪ್ಪ ಯಮನಪ್ಪ ಬಸಾಪುರ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ವಕೀಲರ ಸಂಘ ಹಾಗೂ ವಕೀಲರ ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾ ವಕೀಲರ ಸಾಂಸ್ಕೃತಿಕ ಸಭಾ ಭವನದಲ್ಲಿ ಮಂಗಳವಾರ ನಡೆದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ’ವಕೀಲ ವೃತ್ತಿ ತನ್ನದೇ ಆದ ಘನತೆ ಗೌರವ ಕಾಪಾಡಿಕೊಂಡು ಬಂದಿದೆ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ನಾವು ಟೀಕೆ ಟಿಪ್ಪಣಿ ಕಾಣುತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಅಂದಿನ ರಾಷ್ಟ್ರೀಯ ನಾಯಕರು ಸ್ವಾತಂತ್ರ್ಯಪೂರ್ವದಲ್ಲಿ ಎಲ್ಲರೂ ಬ್ಯಾರಿಸ್ಟರ್ ಆಗಿದ್ದರು. ಅಂದಿನ ಬ್ಯಾರಿಸ್ಟರ್‌ ಈಗಿನ ವಕೀಲರು ಹಾಗೂ ಅಂದಿನ ರಾಜಕೀಯ ವ್ಯಕ್ತಿಗಳಿಗೂ ಇಂದಿನವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಬ್ಯಾರಿಸ್ಟರ್‌ಗಳು ಕೇವಲ ವಕೀಲ ವೃತ್ತಿಗೆ ಸೀಮಿತಗೊಳ್ಳದೇ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು’ ಎಂದು ಸ್ಮರಿಸಿದರು.

‘ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ವಕೀಲರಿಗೆ ಕೋರ್ಟ್, ಕಚೇರಿ ಬಿಟ್ಟರೆ ಬೇರೆ ಏನು ಗೊತ್ತಿರುವುದಿಲ್ಲ. ನ್ಯಾಯಾಂಗದಲ್ಲಿನ ಬದಲಾವಣೆ, ಹೊಸ ಹೊಸ ತೀರ್ಪುಗಳ ಬಗ್ಗೆ ವರ್ಷಕ್ಕೆ ಒಂದು ಬಾರಿಯಾದರೂ ತಿಳಿದುಕೊಳ್ಳುವುದು ಮುಖ್ಯ. ಅದಕ್ಕಾಗಿ ವಕೀಲರ ದಿನವನ್ನು ಆಚರಿಸಲಾಗುತ್ತದೆ' ಎಂದರು.

‘ಅನ್ಯ ವೃತ್ತಿಗಳಿಗಿಂತ ವಕೀಲ ವೃತ್ತಿ ದೊಡ್ಡದು. ವಕೀಲರಿಗೆ ಸೋಷಿಯಲ್ ಎಂಜಿನಿಯರ್ ಎಂದು ಕರೆಯುತ್ತಾರೆ. ಕೇವಲ ಕಾನೂನಿನ ಬಗ್ಗೆ ಅಷ್ಟೇ ಅಲ್ಲದೇ ಸಮಾಜದ ಆಗುಹೋಗುಗಳ ಬಗ್ಗೆಯೂ ವಕೀಲರಿಗೆ ತಿಳಿದಿರುತ್ತದೆ. ವೈದ್ಯ ವೃತ್ತಿಯಲ್ಲಿ ನೇರ ಸ್ಪರ್ಧೆ ಇರುತ್ತದೆ. ಆದರೆ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತೇವೆ’ ಎಂದರು.

‘ವೃತ್ತಿ ಸಂಬಂಧ ಕೆಲವೊಂದು ವಿಷಯಗಳಲ್ಲಿ ನಾವು ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಯಾವುದೇ ವಿಷಯದಲ್ಲೇ ಆಗಲಿ ಪೊಲೀಸ್ ಠಾಣೆಗೆ ಹೋಗಬಾರದು. ವೃತ್ತಿಯಲ್ಲಿ ಸಾಮರ್ಥ್ಯ ತೋರಿಸಿದರೆ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ. ಅದನ್ನು ಬಿಟ್ಟು ಕಪ್ಪು ಕೋಟು ಧರಿಸಿ ರಾಜಕೀಯದವರ ಬಳಿ ಹೋಗಬಾರದು’ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಂ.ಎಂ. ಖಿಲ್ಲೇದಾರ್‌, ಗುಮ್ಮನೂರು ಶಿವಕುಮಾರ್ ಮಾತನಾಡಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್, ಒಂದನೇ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆಂಗಬಾಲಯ್ಯ,  2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಈ. ಚಂದ್ರಕಲಾ, ಒಂದನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ಚೇತನಾ ಪಾಟೀಲ್, ಎರಡನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ಕಿರಣ್ ಇದ್ದರು.

ಪ್ರತಿಕ್ರಿಯಿಸಿ (+)