ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುದಾನ ಹಂಚಿಕೆ: ಬಿಜೆಪಿ ಅವಧಿಯಲ್ಲೇ ಹೆಚ್ಚು ತಾರತಮ್ಯ’

Last Updated 8 ಮೇ 2018, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಶಾಸಕರಲ್ಲಿ ಯಶವಂತಪುರದ ಶಾಸಕ ಎಸ್‌.ಟಿ. ಸೋಮಶೇಖರ್‌ ಒಬ್ಬರು. ಪದೇ ಪದೇ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದವರೂ ಹೌದು. ಬಿಬಿಎಂಪಿಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಐದು ವರ್ಷಗಳ ಅಭಿವೃದ್ಧಿ ಕಾರ್ಯ, ಎದುರಾದ ವಿವಾದಗಳ ಬಗ್ಗೆ ಅವರು ಇಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

* ನಿಮಗೆ ಏಕೆ ಮತ ಹಾಕಬೇಕು?

ಈ ಕ್ಷೇತ್ರದಿಂದ 2008ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೆ. ಕಿರು ಅಂತರದಲ್ಲಿ (1,076 ಮತಗಳು) ಸೋತೆ. ಸೋತಾಗಲೂ ಜನರ ಜತೆಗೆ ಒಡನಾಟ ಇಟ್ಟು
ಕೊಂಡೆ. ಪರಿಣಾಮವಾಗಿ 2013ರ ಚುನಾವಣೆಯಲ್ಲಿ ಗೆದ್ದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 17 ಗ್ರಾಮ ಪಂಚಾಯಿತಿಗಳು ಹಾಗೂ ಪಾಲಿಕೆಯ 5 ವಾರ್ಡ್‌ಗಳು ಇವೆ. ಈ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿ ಮಾಡಿದ್ದೇನೆ. ವಾರ್ಡ್‌ಗಳಲ್ಲೆಲ್ಲ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇನೆ. ಪ್ರತಿ ವಾರ್ಡ್‌ನಲ್ಲಿ ಯೋಗ ಕೇಂದ್ರಗಳು ತಲೆ ಎತ್ತಿವೆ.

* ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಈ ಹಳ್ಳಿಗಳ ಅಭಿವೃದ್ಧಿಗೆ ಯಾವ ಕ್ರಮ ಕೈಗೊಂಡಿದ್ದೀರಿ?

ಹಿಂದಿನ ಸರ್ಕಾರ ಅಭಿವೃದ್ಧಿಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಈ ಹಳ್ಳಿಗಳಿಗೆ ಕಾವೇರಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನನ್ನ ಕ್ಷೇತ್ರದಲ್ಲಿರುವ 23 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಕಾಮಗಾರಿ ಶೇ 60ರಷ್ಟು ಪೂರ್ಣಗೊಂಡಿದೆ. ಒಳಚರಂಡಿ ಕಾಮಗಾರಿಗೆ ಎರಡು ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸರ್ವೆ ನಡೆಯುತ್ತಿದೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿರುವ ಹಳ್ಳಿಗಳ ಅಭಿವೃದ್ಧಿಗೆ ₹250 ಕೋಟಿ ಅನುದಾನ ನೀಡಲಾಗಿದೆ. ಇದರಿಂದಾಗಿ ರಸ್ತೆಗಳ ಡಾಂಬರೀಕರಣ ಹಾಗೂ ಮೂಲಸೌಕರ್ಯ ಒದಗಿಸುವ ಕೆಲಸ ಭರದಿಂದ ಸಾಗಿದೆ.

* ರಾಜ್ಯ ಸರ್ಕಾರ ಬಿಬಿಎಂಪಿಗೆ ನೀಡಿರುವ ಅನುದಾನದ ಪೈಕಿ ಸಿಂಹಪಾಲು ‘ತ್ರಿಮೂರ್ತಿ’ಗಳ ಕ್ಷೇತ್ರಗಳಿಗೆ (ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜ್‌) ಸಿಕ್ಕಿದೆ ಎಂದು ಬಿಜೆಪಿಯವರು ದೂರುತ್ತಿದ್ದಾರಲ್ಲ?

110 ಹಳ್ಳಿಗಳು 10 ಕ್ಷೇತ್ರಗಳಲ್ಲಿ ಹಂಚಿಹೋಗಿವೆ. ಇಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಸಹಜವಾಗಿ ನಮ್ಮ ಕ್ಷೇತ್ರಗಳಿಗೆ ಹೆಚ್ಚು ಹಣ ಬಂದಿದೆ. ಮಹದೇವಪುರ ಶಾಸಕರಿಗೆ ಅತೀ ಹೆಚ್ಚು ಅನುದಾನ ಬಂದಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗಷ್ಟೇ ಅನುದಾನ ನೀಡಿದ್ದರು. ಈ ಬಗ್ಗೆ ಬಿಜೆಪಿಯವರು ಏಕೆ ಚರ್ಚಿಸುತ್ತಿಲ್ಲ. ಅವರ ಅವಧಿಯಲ್ಲೇ ಹೆಚ್ಚು ತಾರತಮ್ಯ ನಡೆದಿದೆ.

* ಯಶವಂತಪುರ ಕ್ಷೇತ್ರದ ಐದು ಕಸ ಸಂಸ್ಕರಣಾ ಘಟಕಗಳಿಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ನಿಮ್ಮ ನಿಲುವು ಏನು?

ವೈಜ್ಞಾನಿಕ ರೀತಿಯಲ್ಲಿ ಕಸ ಸಂಸ್ಕರಿಸುವ ಉದ್ದೇಶದಿಂದ ಬಿಬಿಎಂಪಿ ಘಟಕಗಳನ್ನು ಆರಂಭಿಸಿತು. ಘಟಕಗಳಿಂದ ದುರ್ವಾಸನೆ ಬರುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಹೀಗಾಗಿ ಒಂದು ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಐದೂ ಘಟಕಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಕಸದಿಂದ ವಿದ್ಯುತ್‌ ಉತ್ಪಾದನೆಗೆ ಬಿಬಿಎಂಪಿ ನಿರ್ಧರಿಸಿದ್ದು, ಟೆಂಡರ್‌ ಪ್ರಕ್ರಿಯೆ ನಡೆದಿದೆ. ರಾಜಕೀಯ ಲಾಭಕ್ಕಾಗಿ ಜೆಡಿಎಸ್‌ ಮುಖಂಡರು ಹೋರಾಟ ಮಾಡುತ್ತಿದ್ದಾರೆ. ದೊಡ್ಡಬಿದರಕಲ್ಲು ಘಟಕವನ್ನು ಜೆಡಿಎಸ್‌ ಅಭ್ಯರ್ಥಿ ಜವರಾಯಿ ಗೌಡ ಅವರ ಪತ್ನಿ (ಪಾಲಿಕೆ ಸದಸ್ಯೆಯಾಗಿದ್ದರು) ಉದ್ಘಾಟಿಸಿದ್ದರು. ಆದರೆ, 4–5 ತಿಂಗಳಿಂದ ಅವರೇ ಹೋರಾಟ ಮಾಡುತ್ತಿದ್ದಾರೆ. ಇದ್ಯಾವ ನ್ಯಾಯ.

* ನಿಮ್ಮ ಕ್ಷೇತ್ರ ವ್ಯಾಪ್ತಿಯ ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಒದಗಿಸುವ ಕೆಲಸ ಶುರುವಾಗಿಲ್ಲ ಎಂಬುದು ನಿವೇಶನದಾರರ ಅಳಲು. ಈ ಬಗ್ಗೆ ನೀವೇನು ಹೇಳುತ್ತೀರಿ?

ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಮುಖ್ಯಮಂತ್ರಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಆ ಕೆಲಸ ಸಮರೋಪಾದಿಯಲ್ಲಿ ನಡೆಯಲಿದೆ. ಈ ಬಡಾವಣೆಗೆ ಕಾವೇರಿ ನೀರು ಒದಗಿಸಲಾಗುತ್ತದೆ. ಒಳಚರಂಡಿ ಸಂಪರ್ಕ ಕಲ್ಪಿಸುವ ಕೆಲಸವೂ ಶುರುವಾಗಲಿದೆ. ಬಡಾವಣೆ ನಿರ್ಮಾಣಕ್ಕಾಗಿ 4500 ರೈತರು ಭೂಮಿ ಕಳೆದುಕೊಂಡಿದ್ದರು. ಈ ಪೈಕಿ 2,350 ರೈತರಿಗೆ ನಿವೇಶನ ನೀಡಲಾಗಿದೆ. ಉಳಿದವರಿಗೂ ಶೀಘ್ರದಲ್ಲಿ ನಿವೇಶನ ನೀಡುತ್ತೇವೆ. ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ 150 ಅಡಿ ರಸ್ತೆ ನಿರ್ಮಿಸುವ ಕಾಮಗಾರಿಗೂ ಚಾಲನೆ ನೀಡಲಾಗಿದೆ.

* ಭೂಕಬಳಿಕೆ ಆರೋಪ ನಿಮ್ಮ ಮೇಲೆ ಇದೆಯಲ್ಲ?

ನಾವು ಯಾವುದೇ ಭೂಕಬಳಿಕೆ ಮಾಡಿಲ್ಲ. ಭೂಕಬಳಿಕೆಯ ಆರೋಪ ಮಾಡಿರುವ ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌ ಅವರಿಗೆ ಬೇರೆ ಏನೂ ಕೆಲಸ ಇಲ್ಲ. ಕಾಂಗ್ರೆಸ್‌ ಶಾಸಕರನ್ನು ಹುಡುಕಿ ಹುಡುಕಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ. ಬ್ಲ್ಯಾಕ್‌ಮೇಲ್‌ ಮಾಡುವುದು ಅವರ ಚಾಳಿ. ಆರೋಪ ಮಾಡಿ ಓಡಿ ಹೋಗುತ್ತಾರೆ. ನನ್ನ ವಿರುದ್ಧ 2–3 ಸಲ ಪತ್ರಿಕಾಗೊಷ್ಠಿ ನಡೆಸಿದರು. ಈ ಬಗ್ಗೆ
ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ದಾಖಲೆ ಸಲ್ಲಿಸಲು ಸಮಯಾ
ವಕಾಶ ಕೇಳಿದ್ದಾರೆ. ಅವರ ಬಳಿ ದಾಖಲೆಗಳೇ ಇಲ್ಲ. ಶಾಸಕ ಆರ್‌.ಅಶೋಕ ವಿರುದ್ಧ ಕಣಕ್ಕೆ ಇಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದ ಬಳಿಕ ಆರೋಪ ಮಾಡುವುದು ಕಡಿಮೆಯಾಯಿತು.

* ಕ್ಷೇತ್ರದಲ್ಲಿ ವಸತಿ ಸಮಸ್ಯೆ ಇದೆಯಲ್ಲ?

ಕ್ಷೇತ್ರದಲ್ಲಿ 6,500 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಸರ್ಕಾರಿ ಜಾಗದಲ್ಲಿ ನೆಲೆಸಿರುವವರಿಗೆ 94 ಸಿಸಿ ಯೋಜನೆಯಡಿ ಹಕ್ಕುಪತ್ರ ನೀಡಲಾಗುತ್ತಿದೆ. ವಸತಿ ಸಮಸ್ಯೆ ಬಹುತೇಕ ಬಗೆಹರಿದಿದೆ. ಮುಖ್ಯಮಂತ್ರಿ ವಸತಿ ಯೋಜನೆಯಡಿ 1 ಲಕ್ಷ ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಆರು ತಿಂಗಳ ಹಿಂದೆ ಪ್ರಕ್ರಿಯೆ ಆರಂಭಿಸಿತ್ತು. ಮನೆ ನಿರ್ಮಾಣಕ್ಕಾಗಿ ಕ್ಷೇತ್ರದಲ್ಲಿ 350 ಎಕರೆ ಜಾಗ ಮೀಸಲಿಡಲಾಗಿದೆ. ಈ ಪೈಕಿ 160 ಎಕರೆಯನ್ನು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಹಸ್ತಾಂತರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT