ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಹಿಂದೆ ಸುತ್ತುವುದನ್ನು ಬಿಡಿ

ಸಂಸದ ಜಿ.ಎಂ. ಸಿದ್ದೇಶ್ವರಗೆ ಡಿ.ಬಸವರಾಜ್ ಸಲಹೆ
Last Updated 18 ಮೇ 2021, 2:41 IST
ಅಕ್ಷರ ಗಾತ್ರ

ದಾವಣಗೆರೆ: ‘ಸಂಸದ ಜಿ.ಎಂ. ಸಿದ್ದೇಶ್ವರ ಅವರು ಪ್ರಚಾರಕ್ಕಾಗಿ ಸುತ್ತುವುದನ್ನು ಬಿಟ್ಟು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಜಿಲ್ಲೆಗೆ ಬೇಕಾಗಿರುವ ಆಮ್ಲಜನಕ, ವೆಂಟಿಲೇಟರ್, ರೆಮ್‌ಡಿಸಿವಿರ್ ಹಾಗೂ ಕೋವಿಡ್ ಲಸಿಕೆಗಳನ್ನು ಜಿಲ್ಲೆಗೆ ತೆಗೆದುಕೊಂಡು ಬನ್ನಿ’ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರಲಾರಂಭಿಸಿದ್ದು, ಜಿಲ್ಲೆಯ ಬಡಜನರು ಕೋವಿಡ್ ಸಲಕರಣೆಗಳು ಹಾಗೂ ಲಸಿಕೆಗೆ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸದೇ ಮೂರು ಹೊತ್ತು ಜಿಲ್ಲಾಧಿಕಾರಿ ಹಿಂದೆ ಸುತ್ತಬಾರದು. ಡಿಸಿ ನಿಮ್ಮ ಹಿಂದೆ ಸುತ್ತುವಂತೆ ಪ್ರಭಾವ ಬೆಳೆಸಿಕೊಳ್ಳಿ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

‘ನರೇಂದ್ರ ಮೋದಿಯವರು ದೆಹಲಿಯಲ್ಲಿ ಜೂಮ್ ಮೀಟಿಂಗ್ ಮಾಡುವುದರ ಬದಲು ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ದಾವಣಗೆರೆಗೆ ತಿಂಗಳಿಗೊಮ್ಮೆ ಪಿಕ್‌ನಿಕ್‌ ಸ್ಪಾಟಿಗೆ ಬಂದ ಹಾಗೆ ಬಂದು ಹೋಗುತ್ತಿದ್ದಾರೆ’ ಎಂದು ಟೀಕಿಸಿದರು.

‘ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದ್ದು, ಕೊರೊನಾ ಪರೀಕ್ಷೆ ಹೆಚ್ಚಿಸುತ್ತಿಲ್ಲ. 18ರಿಂದ 44 ವರ್ಷದೊಳಗಿನವರಿಗೆ ಒಂದು ದಿವಸ ಲಸಿಕೆ ಕೊಟ್ಟು ಬಂದ್ ಮಾಡಿಸಿದ್ದಾರೆ. ಎಷ್ಟು ಲಸಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ನೀಡಿಲ್ಲ’ ಎಂದರು.

ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ‘ಲಾಕ್‌ಡೌನ್ ಅನ್ನು ಇನ್ನಷ್ಟು ಬಿಗಿಗೊಳಿಸಬೇಕು. ಪೊಲೀಸ್ ಬೀಟ್‌ಗಳನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಮನಿ, ಎಚ್.ಸುಭಾನ್ ಸಾಬ್, ಕೆ.ಎಂ. ಮಂಜುನಾಥ್, ಟಿ.ಶಿವಕುಮಾರ್, ಡಿ. ಶಿವಕುಮಾರ್, ದಾದಾಪೀರ್, ಜುಬೇರ್, ಜಬೀವುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT