ಗುರುವಾರ , ಆಗಸ್ಟ್ 11, 2022
23 °C
ಕಟ್ಟಡ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದು ರೈತರಲ್ಲ: ಮುತ್ತಣ್ಣನವರ

ಶಾಸಕ ಅಬ್ಬಯ್ಯ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ವೀರಾಪುರ ಓಣಿಯಲ್ಲಿ ಡಿ. 6ರಂದು ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಆ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಣ್ಣನವರ ‘ಅಂದು ಆಯೋಜನೆಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಸರ್ಕಾರಿ ಕಾರ್ಯಕ್ರಮದಲ್ಲಿ ಅಬ್ಬಯ್ಯ ರೈತಭವನಕ್ಕೆ ರೈತರು ಜಾಗ ನೀಡಿದ್ದಾರೆ. ಆದ್ದರಿಂದ ರೈತರಿಗೆ ಈ ಭವನ ಕೊಡಲಾಗುವುದು ಎಂದು ಹೇಳಿದ್ದರು. ಇದು ಸುಳ್ಳು, ಆ ಭವನ ರೈತರಿಗೆ ಕೊಡಬೇಕೊ; ಮಹಿಳಾ ಭವನ ಮಾಡಬೇಕೊ ಎನ್ನುವುದರ ಬಗ್ಗೆ ನಿರ್ಧಾರವೇ ಆಗಿಲ್ಲ. ಯಾವ ರೈತರೂ ಅದಕ್ಕೆ ಜಾಗ ನೀಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಎದುರು ಸುಳ್ಳು ಹೇಳಿ ಅಬ್ಬಯ್ಯ ಜನರ ದಿಕ್ಕು ತಪ್ಪಿಸಿದ್ದಾರೆ. ರೈತರು ಜಾಗ ಕೊಟ್ಟಿದ್ದರೆ ಕೊಟ್ಟವರು ಮುಂದೆ ಬರಲಿ’ ಎಂದು ಸವಾಲು ಹಾಕಿದರು.

‘ಅಂದಿನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕೆ ವೇದಿಕೆ ಮೇಲೆ ಹೋಗಿದ್ದೆ. ಕಟ್ಟಡ ನಿರ್ಮಾಣದ ಹಿಂದೆ ಎಷ್ಟೊಂದು ಶ್ರಮವಿದೆ ಎನ್ನುವುದನ್ನು ಅರಿಯದೇ ಅಬ್ಬಯ್ಯ ಪ್ರಾಯೋಜಕತ್ವದ ವಿವಿಧ ದಲಿತ ಸಂಘಸಂಸ್ಥೆಗಳ ಮಹಾಮಂಡಳ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರಿಕಾಗೋಷ್ಠಿ ನಡೆಸಿತ್ತು. ದಲಿತ ಶಾಸಕನಿಗೆ ಅವಮಾನ ಮಾಡಲಾಗಿದೆ ಎಂದು ಆ ಮಹಾಮಂಡಳದವರು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ದಲಿತ ಎಂದು ಯಾರನ್ನೂ ಹೇಳುವಂತಿಲ್ಲ. ಪರಿಶಿಷ್ಟ ಜಾತಿಯವರು ಎಂದು ಕರೆಯಬೇಕೆಂದು ಆದೇಶಿಸಿದೆ. ದಲಿತ ಎನ್ನುವ ಪದ ಬಳಸಿ ಮಹಾಮಂಡಳದವರು ಪರಿಶಿಷ್ಟ ಜಾತಿಯ ಜನರನ್ನೇ ಅವಮಾನಿಸಿದ್ದಾರೆ’ ಎಂದು ಟೀಕಿಸಿದರು.

‘ಅಬ್ಬಯ್ಯ ವಿನಾಕಾರಣ ಹಿಂಬಾಲಕರನ್ನು ಬಿಟ್ಟು ಲಿಂಗಾಯತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಜಾಗ ಕೊಟ್ಟವರು ಯಾರು ಎನ್ನುವ ಸತ್ಯ ಎಲ್ಲರಿಗೂ ಗೊತ್ತಾಗಲಿ. ನನ್ನ ಬಳಿಯೂ ದಾಖಲೆಗಳಿದ್ದು, ಈ ಕುರಿತು ಮಾಧ್ಯಮಗಳ ಎದುರು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅಬ್ಬಯ್ಯ ಇದನ್ನು ಒಪ್ಪಿಕೊಳ್ಳುವರೇ’ ಎಂದು ಪ್ರಶ್ನಿಸಿದರು.

ಸಿದ್ದಣ್ಣ ಅಮರಾವತಿ, ಶಿವಣ್ಣ ಹೆಬ್ಬಳ್ಳಿ, ಗುರುಸಿದ್ದಣ್ಣ ಕಟಕಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.