ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೂರಲ್ಲಿ ಚಿರತೆ ಸೆರೆ: ಮುಂದುವರಿದ ಕಾರ್ಯಾಚರಣೆ

Last Updated 29 ಡಿಸೆಂಬರ್ 2018, 13:07 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ನಸುಕಿನ ಜಾವ ಎರಡು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮತ್ತೂರು ಗ್ರಾಮದಲ್ಲಿ ಡಿಸೆಂಬರ್ ತಿಂಗಳೊಂದರಲ್ಲೇ ಮೂರು ಚಿರತೆಗಳು ಸೆರೆ ಸಿಕ್ಕಿವೆ. ಡಿ.6 ರಂದು ಗ್ರಾಮದ ಅಂಬ್ಲಿ ಶಿವರಾಮಪ್ಪ ಅವರ ಕಣದಲ್ಲಿ ಹಾಗೂ ಡಿ.16ರಂದು ಗ್ರಾಮದ ಇಟ್ಟಿಗುಡಿ ಹನುಮಂತಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಸೆರೆ ಸಿಕ್ಕಿತ್ತು. ಅದೇ ಜಮೀನಿನಲ್ಲಿ ಶನಿವಾರ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ.

‘ಈ ಭಾಗದಲ್ಲಿ ಇನ್ನು ಎರಡು ಮರಿ ಚಿರತೆ ಹಾಗೂ ಒಂದು ದೊಡ್ಡ ಚಿರತೆ ಇದೆ. ನಮ್ಮ ಗ್ರಾಮವೊಂದರಲ್ಲೇ ಮೂರು ಚಿರತೆಗಳು ಸೆರೆ ಸಿಕ್ಕಿರುವುದು ಭಯಕ್ಕೆ ಕಾರಣವಾಗಿದೆ. ಕಬ್ಬು ಕಡಿಯಲು ಕೆಲಸಗಾರರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನುಳಿದ ಚಿರತೆಗಳನ್ನು ಸೆರೆ ಹಿಡಿದು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಗ್ರಾಮಸ್ಥರಾದ ಜಿ. ಪ್ರಕಾಶ್, ಎಂ. ರವೀಂದ್ರಗೌಡ, ಕೆ. ಬಸವರಾಜ, ಡಿ. ಶೇಖಪ್ಪ, ವಿಷ್ಣಪ್ಪ, ಪಿ. ಹನುಮಂತಪ್ಪ ಆಗ್ರಹಿಸಿದ್ದಾರೆ.

‘ಬೋನಿಗೆ ಬಿದ್ದಿರುವುದು ಎರಡು ವರ್ಷದ ಹೆಣ್ಣು ಚಿರತೆ. ಈ ಭಾಗದಲ್ಲಿ ಕಂಡು ಬಂದಿದ್ದ ಎಲ್ಲ ಚಿರತೆಗಳು ಸೆರೆ ಸಿಕ್ಕಿವೆ. ಮತ್ತೂರು ಗ್ರಾಮಸ್ಥರ ಸಹಕಾರದಿಂದ ಒಂದು ತಿಂಗಳಲ್ಲಿ ಮೂರು ಚಿರತೆ ಸೆರೆ ಹಿಡಿಯಲಾಗಿದೆ. ಶಿವಮೊಗ್ಗ ಅರಣ್ಯ ಪ್ರದೇಶದಲ್ಲಿ ಚಿರತೆ ಬಿಡಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಜೆ. ಅಶೋಕ್ ತಿಳಿಸಿದ್ದಾರೆ.

ವಲಯ ಅರಣ್ಯ ಅಧಿಕಾರಿ ಶಂಕರನಾಯ್ಕ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜೆ. ಅಶೋಕ್, ಅರಣ್ಯ ರಕ್ಷಕ ಲಕ್ಷ್ಮಣ, ಸಿಬ್ಬಂದಿ ಶಿವಕುಮಾರ, ಕೆಂಚಪ್ಪ, ಹೊಳೆಯಪ್ಪ, ನಂದಪ್ಪ, ಇಫ್ತಿಯಾರ್, ಬಸವರಾಜ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT