ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠರೋಗ: ಜಿಲ್ಲೆಯಲ್ಲಿ 17 ಪ್ರಕರಣ ಪತ್ತೆ

ಎರಡ್ಮೂರು ವರ್ಷಗಳಲ್ಲಿ ಯಥಾಸ್ಥಿತಿಯಲ್ಲಿ ರೋಗ ಪ್ರಕರಣ
Last Updated 8 ನವೆಂಬರ್ 2019, 10:18 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಸೆ.5ರಿಂದ 23ರವರೆಗೆ ನಡೆದ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನದಲ್ಲಿ 17 ಕುಷ್ಠರೋಗ ಪ್ರಕರಣ ಪತ್ತೆಯಾಗಿದೆ.

ಕಳೆದ ಕೆಲವು ದಶಕಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಎರಡ್ಮೂರು ವರ್ಷಗಳಿಗೆ ಹೋಲಿಸಿದರೆ ಕುಷ್ಠರೋಗದ ಪ್ರಕರಣಗಳ ಪ್ರಮಾಣದಲ್ಲಿ ಬದಲಾವಣೆ ಕಂಡಿಲ್ಲ. ಯಥಾಸ್ಥಿತಿ ಮುಂದುವರಿದಿದೆ.

ಜಿಲ್ಲೆಯ ರೋಗ ಪತ್ತೆ ಪ್ರಮಾಣ 10 ಸಾವಿರ ಜನಸಂಖ್ಯೆಗೆ 0.37 (ಇದು 1 ರಷ್ಟಿದ್ದರೆ ಗಂಭೀರ ಪ್ರಕರಣ ಎಂದು ಪರಿಗಣಿಸಲಾಗುತ್ತದೆ) ರಷ್ಟಿದೆ. ಜಿಲ್ಲಾ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿಲ್ಲ. ಇದು ಸಮಾಧಾನ ಸಂಗತಿ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ರೋಗಿಗಳಿಗೆ ತಾರತಮ್ಯ ಮಾಡಬಾರದು ಎಂಬ ಉದ್ದೇಶದಿಂದ ಸರ್ಕಾರದಿಂದ ಹಲವು ಸೌಲಭ್ಯ ಕಲ್ಪಿಸಲಾಗಿದೆ. ರೋಗದಿಂದ ಗುಣಮುಖರಾದವರಿಗೆ ಅಗತ್ಯ ನೆರವು, ವಸತಿ ಸೌಲಭ್ಯ, ನಿವೇಶನ, ಪಿಂಚಣಿ, ಗ್ರೂಪ್‌ ‘ಡಿ’ ಹುದ್ದೆ ಉದ್ಯೋಗ ಸೌಲಭ್ಯ ಸಿಗಲಿದೆ.

ಅಲ್ಲದೇ ಚಿಕಿತ್ಸೆಗೆ ಸಂಬಂಧಿಸಿ ಹಲವು ಸೌಲಭ್ಯ ಸಿಗಲಿದೆ. ರೋಗ ಪತ್ತೆ ಸಂಬಂಧ ಮಾಹಿತಿ ನೀಡುವ ಆಶಾ ಕಾರ್ಯಕರ್ತೆಯರಿಗೆ ₹ 250 ಪ್ರೋತ್ಸಾಹಧನ. ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ರೋಗಿಗಳು ಗುಣಮುಖರಾಗುವಂತೆ ಮಾಡಿದರೆ ₹ 450 ಪ್ರೋತ್ಸಾಹಧನ ನೀಡುವ ಸೌಲಭ್ಯ ಇದೆ. ಪತ್ತೆಯಾದ ರೋಗಿಗಳಿಗೆ ಔಷಧದ ಕಿಟ್‌, ಚಿಕಿತ್ಸೆ ಸೌಲಭ್ಯ ಇದೆ. ರೋಗಿಗಳು ಸಮೀಪದ ಆರೋಗ್ಯ ಕೇಂದ್ರದಲ್ಲೂ ಔಷಧದ ಕಿಟ್‌ ಪಡೆಯಬಹುದು.

ಕುಷ್ಠರೋಗದಲ್ಲಿ 5 ಮಚ್ಚೆಗಿಂತ ಕಡಿಮೆ ಇರುವುದು ರೋಗದ ಕಡಿಮೆ ಪ್ರಮಾಣವನ್ನು ಸೂಚಿಸುತ್ತದೆ. ಇದಕ್ಕೆ 6 ತಿಂಗಳು ಚಿಕಿತ್ಸೆ ನೀಡಿದರೆ ಸಾಕು ರೋಗಿಗಳು ಗುಣಮುಖರಾಗುತ್ತಾರೆ. ಇನ್ನೊಂದು (ಎಂ.ಬಿ) ರೋಗ ಪ್ರಮಾಣ ಹೆಚ್ಚಿರುವುದು. ‌ರೋಗಿಗಳಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಕುಷ್ಠರೋಗಿಗಳ ಪುನರ್ವಸತಿ ಕೇಂದ್ರ ತುಮಕೂರು ಜಿಲ್ಲೆಯ ಪಾವಗಡದಲ್ಲಿದ್ದು, ಅಗತ್ಯ ಕಂಡುಬಂದರೆ ಅಲ್ಲಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಕುಷ್ಠರೋಗ ನಿವಾರಣಾ ಕಾರ್ಯಕ್ರಮಾಧಿಕಾರಿ ಡಾ.ಪಿ.ಡಿ. ಮುರಳೀಧರ್‌ ಮಾಹಿತಿ ನೀಡಿದರು.

‘ಪ್ರಾಥಮಿಕ ಹಂತದಲ್ಲೇ ರೋಗ ಗುರುತಿಸುವುದು ರೋಗ ಪತ್ತೆ ಕಾರ್ಯಕ್ರಮದ ಮುಖ್ಯ ಉದ್ದೇಶ. ಜಿಲ್ಲೆಯಲ್ಲಿ ಹೊಸ ಪ್ರಕರಣ ಸೇರಿ ಒಟ್ಟು 68 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗದ ಸಂಪೂರ್ಣ ನಿರ್ಮೂಲನೆಯೇ ನಮ್ಮ ಉದ್ದೇಶ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರನ್ನು ಒಳಗೊಂಡ ತಂಡಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT