ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಷ್ಠಾನದಿಂದ ಶೈಕ್ಷಣಿಕ ಸಂಸ್ಥೆ ನಿರ್ಮಾಣವಾಗಲಿ’

ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರಧಾನ ಮಾಡಿದ ಶಾಸಕ ಬಂಡೆಪ್ಪ ಕಾಶಂಪುರ್‌
Last Updated 8 ಆಗಸ್ಟ್ 2022, 4:53 IST
ಅಕ್ಷರ ಗಾತ್ರ

ದಾವಣಗೆರೆ: ಎಚ್‌.ಡಿ. ದೇವೇಗೌಡ ಅವರು ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಹೆಸರಲ್ಲಿ ಇರುವ ಪ್ರತಿಷ್ಠಾನವು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆಯೂ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಎಚ್‌.ಡಿ. ದೇವೇಗೌಡ ಪ್ರತಿಷ್ಠಾನದ ಗೌರವ ಅಧ್ಯಕ್ಷ, ಶಾಸಕ ಬಂಡೆಪ್ಪ ಕಾಶಂಪುರ್‌ ಹೇಳಿದರು.

ನಗರದ ಕುವೆಂಪು ಕನ್ನಡ ಭವನ ದಲ್ಲಿ ಎಚ್.ಡಿ. ದೇವೇಗೌಡ ಪ್ರತಿಷ್ಠಾನದ ವತಿಯಿಂದ ಎಚ್.ಡಿ. ದೇವೇಗೌಡ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಿ ಅವರು ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳ ಮೂಲಕ ಸಮಾಜ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಪ್ರತಿಷ್ಠಾನ ಮಾಡುತ್ತಾ ಬಂದಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಈ ಪ್ರಶಸ್ತಿ ನೀಡಿರಲಿಲ್ಲ. ಈ ಬಾರಿ ಮೂವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಷ್ಠಾನವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ಪುರಸ್ಕಾರ, ಪ್ರೋತ್ಸಾಹ, ಪ್ರಶಸ್ತಿ ವಿತರಣೆಗೆ ಸೀಮಿತವಾಗದೇ ತನ್ನ ಕಾರ್ಯವನ್ನು ಇನ್ನಷ್ಟು ವಿಸ್ತರಿಸಬೇಕಿದೆ. ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಕಾರಿಯಾಗುವ ರೀತಿಯಲ್ಲಿ ಶಿಕ್ಷಣ ವಲಯದಲ್ಲಿ ಸಂಸ್ಥೆಗಳನ್ನು ಕಟ್ಟಬೇಕಿದೆ. ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಿದೆ ಎಂದರು.

ಪ್ರತಿಷ್ಠಾನ ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ದೇವೇಗೌಡರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪನೆ ಮಾಡುವುದು ದೊಡ್ಡ ಕೆಲಸವಲ್ಲ. ಅದನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವುದು ದೊಡ್ಡ ಕೆಲಸ. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಇಲ್ಲಿ ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಪ್ರತಿಷ್ಠಾನ ಕೆಲಸ ಮಾಡಬೇಕು. ಇದಕ್ಕೆ ಸರ್ಕಾರದ ನೆರವು ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಯುಗಧರ್ಮ ರಾಮಣ್ಣ ಅವರು ಹಿಂದುಳಿದ ಸಮುದಾಯದಲ್ಲಿ ಹುಟ್ಟಿದವರು. ಜನಪದ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಇವೆಲ್ಲ ಶಾಲೆಯಲ್ಲಿ ಸಿಗುವುದಿಲ್ಲ. ಪ್ರತಿಭಾವಂತರನ್ನು ಅರಸಿಕೊಂಡು ಬರುತ್ತದೆ ಎಂಬುದಕ್ಕೆ ರಾಮಣ್ಣ ಉದಾಹರಣೆ ಎಂದು ಹೇಳಿದರು.

ಡಾ. ಜಿ.ಡಿ. ರಾಘವನ್ ಅವರು ಕೊರೊನಾ ಸಮಯದಲ್ಲಿ ಸ್ಮರಣಾರ್ಹ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷ ಕಾಲ ಅವರು ಮನೆಗೆ ಹೋಗಿದ್ದೇ ಕಡಿಮೆ. ಅವರನ್ನು ಈ ಪ್ರಶಸ್ತಿಗೆ ಗುರುತಿಸುವ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ ಎಂದು ಶ್ಲಾಘಿಸಿದರು.

ಮಂದಕೃಷ್ಣ ಅವರು ದಂಡೋರ ಮಾದಿಗ ಸಮಾಜದ ಧ್ವನಿಯಾಗಿ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಪ್ರತಿಷ್ಠಾನ ಗುರುತಿಸಿದೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅನೀಸ್ ಪಾಷ ಸ್ವಾಗತಿಸಿದರು. ಜಸ್ಟಿನ್‌ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ವನಜಾಕ್ಷಮ್ಮ, ಪರಮೇಶ್ವರಪ್ಪ, ಎಂ.ವಿ. ವೀರೇಶ್ ಬಾಡ, ಹೊನ್ನಮ್ಮ ದೇವರಬೆಳಕೆರೆ, ಎಚ್‌.ಎಸ್‌. ಪ್ರಕಾಶ್‌, ಕೆ.ಎನ್. ತಿಪ್ಪೇಸ್ವಾಮಿ, ಬಾತಿ ಶಂಕರ್, ದಾದಾಪೀರ್‌, ಮುಖಂಡರಾದ ಕೆ.ಬಿ. ನರಸಿಂಹ, ಸಿ.ಎನ್. ನಾಗರಾಜ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT