ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ 3ನೇ ಹಂತಕ್ಕೆ ತಲುಪದಿರಲಿ: ಸಚಿವ ಕೆ.ಎಸ್. ಈಶ್ವರಪ್ಪ

‘ಕೋವಿಡ್‌ 19’, ಹಕ್ಕಿಜ್ವರ ಮುಂಜಾಗರೂಕ ಕ್ರಮಗಳ ಬಗ್ಗೆ ಪ್ರಗತಿಪರಿಶೀಲನೆ
Last Updated 21 ಮಾರ್ಚ್ 2020, 14:04 IST
ಅಕ್ಷರ ಗಾತ್ರ

ದಾವಣಗೆರೆ: ಭಾರತದಲ್ಲಿ ಕೊರೊನಾ ಎರಡನೇ ಹಂತದಲ್ಲಿಯೇ ಇದೆ. ಅದು ಮೂರನೇ ಹಂತಕ್ಕೆ ದಾಟಿ ಬಿಟ್ಟರೆ ನಿಯಂತ್ರಿಸುವುದು ಕಷ್ಟ. ಆಮೇಲೆ ಈ ರೀತಿಯ ಸಭೆ ಕೂಡ ಮಾಡಲೂ ಸಾಧ್ಯವಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೆ ಮೂರನೇ ಹಂತಕ್ಕೆ ಹೋಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಹಕ್ಕಿಜ್ವರ ಮತ್ತು ಕೊರೋನಾ ವೈರಸ್ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಲು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಮಾತನಾಡಿದರು.

ಅಂಗಡಿಗಳನ್ನು, ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೊರಂಟ್‌ಗಳನ್ನು, ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿಸುವುದು ಇನ್ನೊಬ್ಬರಿಗೆ ಉಪಕಾರ ಮಾಡಲು ಅಲ್ಲ. ಸ್ವತಃ ಅವರಿಗೆ ಹರಡಬಾರದು ಎಂಬ ಕಾರಣಕ್ಕೆ ಎಂದು ಎಲ್ಲ ಕಡೆ ಜಾಗೃತಿ ಮೂಡಿಸಬೇಕು. ಹೆಂಡತಿ, ಮಕ್ಕಳನ್ನು ಸಾಕಲು ವ್ಯಾಪಾರ ಮಾಡುತ್ತಿರುವುದಾಗಿ ಅವರ ಹೇಳಬಹುದು. ನೀನು ಬದುಕಿದ್ದರೆ ತಾನೆ ಅವರನ್ನು ಸಾಕುವುದು. ಮೊದಲು ನೀನು ಬದುಕಿಕೊಳ್ಳಲು ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಕೊರೊನಾ ವೈರಸ್‌ ಭಾರತದಲ್ಲಿ ಇಲ್ಲ. ವಿದೇಶದಲ್ಲಿರುವ ವ್ಯಕ್ತಿಗಳು ಸೋಂಕಿಗೆ ಒಳಗಾಗಿದ್ದರೆ, ಅವರು ಭಾರತಕ್ಕೆ ಬಂದಾಗ ಅವರಿಗೆ ಆ ರೋಗದಿಂದ ಬಳಲುವುದು ಮೊದಲ ಹಂತ. ಅವರ ನಿಕಟ ಸಂಪರ್ಕದಲ್ಲಿ ಇರುವ ಮನೆಯವರು, ಸ್ನೇಹಿತರಿಗೆ ಬರುವುದು ಎರಡನೇ ಹಂತ. ಸುತ್ತಮುತ್ತಲಿನ ಮನೆಯವರಿಗೆ, ಬೀದಿಯ ಇತರರಿಗೆ ಕೂಡ ಹರಡುವುದು ಮೂರನೇ ಹಂತ. ರಾಜ್ಯ, ದೇಶವಿಡಿ ಹರಡಿಬಿಡುವುದು ನಾಲ್ಕನೇ ಹಂತ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿದರು.

ಎರಡನೇ ಹಂತದಲ್ಲಿ ಒಬ್ಬ ವ್ಯಕ್ತಿಯಿಂದ ಒಂದು ವಾರದಲ್ಲಿ 2.5 ಜನರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಮೂರನೇ ಹಂತಕ್ಕೆ ದಾಟಿದರೆ ಒಬ್ಬ ವ್ಯಕ್ತಿಯಿಂದ ದಿನಕ್ಕೆ 350 ಮಂದಿಗೆ ಸೋಂಕು ಹರಡಲಿದೆ ಎಂದು ಎಸ್‌ಎಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಕಾಳಪ್ಪನವರ್‌ ತಿಳಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. 6 ವಿವಿಧ ತಂಡಗಳನ್ನು ರಚಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ, ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 15, ಬಾಪೂಜಿ ಆಸ್ಪತ್ರೆಯಲ್ಲಿ 15 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 100 ಬೆಡ್‌ಗಳ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಗಂಟಲು ದ್ರವ ಮಾದರಿಗಳನ್ನು ಸದ್ಯಕ್ಕೆ ಶಿವಮೊಗ್ಗ ಮತ್ತು ಹಾಸನಕ್ಕೆ ಕಳುಹಿಸಲಾಗುತ್ತಿದೆ ಎಂದು ಡಾ. ರಾಘವನ್‌ ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಹಿತ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳನ್ನು ಆಯಾ ಇಲಾಖಾ ಮುಖ್ಯಸ್ಥರು ವಿವರಿಸಿದರು.

ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ ಸ್ಯಾನಿಟೈಸರ್ ಮತ್ತು ಬಟ್ಟೆಯ ಮಾಸ್ಕ್ ತಯಾರಿಸುವ ತರಬೇತಿ ನೀಡಲಾಗಿದೆ. ನಿರಂತರವಾಗಿ ಪಿಡಿಒಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಿ ಗ್ರಾಮೀಣ ಭಾಗದಲ್ಲಿ ಜನ ಜಾಗೃತಿ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಮಾಹಿತಿ ನೀಡಿದರು.

ಈ ಸೋಂಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 10 ವೆಂಟಿಲೇಟರ್‌ಗಳನ್ನು ಮೀಸಲಿಡಲಾಗಿದೆ. ಪಲ್ಮಮನರಿ ಮತ್ತು ನೆಫ್ರಾಲಜಿಗೆ ಸಂಬಂಧಿಸಿದಂತೆ ಅಗತ್ಯ ವೈದ್ಯರು ಇದ್ದಾರೆ ಎಂದು ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ತಿಳಿಸಿದರು.

ಹಕ್ಕಿಜ್ವರ ದೃಢಪಟ್ಟಿರುವ ಬನ್ನಿಕೋಡಿಗೆ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಶಾಸಕ ರಾಮಪ್ಪ ತಿಳಿಸಿದರು.

ಕೋಳಿಗಳ ನಾಶ, ಸೋಂಕಿತ ವಲಯಗಳ ಶುಚಿತ್ವ, ಸೋಂಕಿತ ವಲಯದ ಕೋಳಿಗಳ ನಿಕಟ ಸಂಪರ್ಕದಲ್ಲಿ ಇದ್ದವರಿಗೆ ಚಿಕಿತ್ಸೆ, ಕೋಳಿ ಸಾಕುವವರಿಗೂ ಮಾಸ್ಕ್‌, ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ನಿಷೇಧ ಹೀಗೆ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯ್ಕ್‌ ವಿವರಿಸಿದರು.

2667 ಕೋಳಿಗಳನ್ನು ನಾಶ ಮಾಡಬೇಕಿದ್ದು, ಇದುವರೆಗೆ 2162 ಕೋಳಿಗಳನ್ನು ವೈಜ್ಞಾನಿಕವಾಗಿ ನಾಶ ಮಾಡಲಾಗಿದೆ. ಉಳಿದವುಗಳ ನಾಶ ಕಾರ್ಯ ಆಗಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಂತರಾಯ,ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ರಾಮಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಮೇಯರ್‌ ಬಿ.ಜಿ. ಅಜಯ್‌ಕುಮಾರ್, ಜಿಲ್ಲ ಪಂಚಾಯಿತಿ ಸದಸ್ಯ ಬಸವಂತಪ್ಪ ಅವರೂ ಇದ್ದರು.

ಲ್ಯಾಬ್‌, ಕಿಟ್‌ಗೆ ಬೇಡಿಕೆ

ಎಸ್‌ಎಸ್‌ ಮೆಡಿಕಲ್‌ ಕಾಲೇಜಿನಲ್ಲಿ ಮತ್ತು ಜೆಜೆಎಂ ಮೆಡಿಕಲ್‌ ಕಾಲೇಜಿನಲ್ಲಿ ದೃಢೀಕೃತ ಪಿಸಿಆರ್ ಲ್ಯಾಬ್‌ಗಳು ಇವೆ. ಪರೀಕ್ಷೆ ನಡೆಸಲು ಅನುಮತಿ ನೀಡಬೇಕು. ಕೊರೊನಾ ಪರೀಕ್ಷೆ ನಡೆಸುವವರಿಗೆ ಕಿಟ್ಸ್‌ ಒದಗಿಸಬೇಕು. ಆಗ ಸೋಂಕು ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿ ಫಲಿತಾಂಶಕ್ಕೆ ಕಾಯುವುದು ತಪ್ಪಲಿದೆ ಎಂದು ಡಾ. ಕಾಳಪ್ಪನವರ್‌, ಡಾ. ಪ್ರಸಾದ್‌ ಬೇಡಿಕೆ ಇಟ್ಟರು.

ಲ್ಯಾಬ್‌ ಇರುವುದರಿಂದ ಅನುಮತಿ ನೀಡಲು ಸಚಿವ ಈಶ್ವರಪ್ಪ ಅಲ್ಲಿಂದಲೇ ದೂರವಾಣಿ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಕ್ತರ್‌ ಜತೆಗೆ ಮಾತನಾಡಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಸೋಮವಾರ ಬನ್ನಿ. ಅನುಮತಿ ಕೊಡಿಸುವುದಾಗಿ ಸಚಿವರು ಬಳಿಕ ಭರವಸೆ ನೀಡಿದರು.

ಮಾಧ್ಯಮಗಳಿಗೆ ಜಾಹೀರಾತು ನೀಡಿ

ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ದೃಶ್ಯ, ಪತ್ರಿಕಾಮಾಧ್ಯಮಗಳು ಮಾಡುತ್ತಿವೆ. ಅವುಗಳಿಗೆ ಕೊರೊನಾ ಬಗ್ಗೆ ಜಾಹೀರಾತು ನೀಡುವ ಮೂಲಕ ಜಾಗೃತಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT