ಶುಕ್ರವಾರ, ಮಾರ್ಚ್ 24, 2023
31 °C
ಜನಪದ ನೃತ್ಯ ಸಂಗೀತೋತ್ಸವ ಕಾರ್ಯಕ್ರಮ

ಚಿತ್ರದುರ್ಗ: ಜಾನಪದ ಹೊಸ ರೂಪ ಪಡೆಯಲಿ- ಡಾ.ಜೆ.ಕರಿಯಪ್ಪ ಮಾಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಜನಪದ ಕಲೆ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಸಮಾಜಕ್ಕೆ ಮೌಲ್ಯ, ನೀತಿ ಹಾಗೂ ಉತ್ತಮ ಸಂದೇಶ ಸಾರುತ್ತಿದೆ. ಅದರಲ್ಲಿ ಬದುಕಿನ ಸತ್ವವೂ ಅಡಗಿದೆ. ಆದ್ದರಿಂದ ಹೊಸ ರೂಪ ಪಡೆಯಬೇಕಾದ ಅಗತ್ಯವೂ ಇದೆ’ ಎಂದು ರಾಜ್ಯ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.

ತರಾಸು ರಂಗಮಂದಿರದಲ್ಲಿ ಮದಕರಿ ಯುವಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಜಾನಪದ ಪರಿಷತ್‌ನಿಂದ ಮಂಗಳವಾರ ಆಯೋಜಿಸಿದ್ದ ಜಾನಪದ ನೃತ್ಯ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಪದ ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಇದು ಪರಂಪರೆಯ ಅರಿವಿನ ಸಂಕೇತವಾಗಿದೆ. ವೈವಿಧ್ಯಮಯವಾದ ಮಾನವನ ಬದುಕಿಗೆ ಆಧುನಿಕತೆ ಪ್ರಭಾವ ಬೀರಿದೆ. ಆದ್ದರಿಂದ ಅನೇಕ ಕಲಾ ಪ್ರಕಾರಗಳು ಅದಕ್ಕೆ ತಕ್ಕಂತೆ ಮುಖಾಮುಖಿ ಆಗಬೇಕಿದೆ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಧನಂಜಯ, ‘ಹಣವೊಂದರಿಂದಲೇ ಸಂಪದ್ಭರಿತ, ಆರೋಗ್ಯವಂತ ಸಮಾಜ ನಿರ್ಮಾಣ ಅಸಾಧ್ಯ. ಅದಕ್ಕಾಗಿ ಕಲೆಗೆ ಹೆಚ್ಚು ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಆಧುನೀಕರಣ, ಜಾಗತೀಕರಣಗಳ ಪ್ರಭಾವದ ನಡುವೆಯೂ ಸಾಂಪ್ರದಾಯಿಕ ಜನಪದ ಕಲೆಗಳು ಇಂದಿಗೂ ಸಶಕ್ತವಾಗಿವೆ. ಕಲೆ ಮಾನವನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿರುವ ಈ ಕಲೆ ಜನರಲ್ಲಿ ಅರಿವು ಮೂಡಿಸುವಲ್ಲಿಯೂ ಸಹಕಾರಿಯಾಗಿದೆ’ ಎಂದರು.

ಕಲಾವಿದರಿಂದ ಶಾಸ್ತ್ರೀಯ, ಹಿಂದೂಸ್ತಾನಿ, ಸುಗಮ, ಜನಪದ ಸಂಗೀತ, ತತ್ವಪದಗಳು, ಭರತನಾಟ್ಯ, ರಂಗಗೀತೆಗಳು, ಗೋರವರ ಕುಣಿತ, ಭಜನೆ, ಜೋಗಿ ಕುಣಿತ ಹಾಗೂ ಕೋಲಾಟ ಪ್ರದರ್ಶನ ನಡೆಯಿತು.

ವಿದ್ವಾನ್ ತಿಪ್ಪೇಸ್ವಾಮಿ, ಕಲಾವಿದ ಮೂರ್ತಪ್ಪ, ಉಪನ್ಯಾಸಕ ಎ.ನಾಗರಾಜ್, ವದ್ದಿಕೆರೆ ಗುರು ಕರಿಬಸವೇಶ್ವರಸ್ವಾಮಿ, ಮಠದ ವದ್ದಿಕೆರೆ ಕಾಂತರಾಜ್, ಮದಕರಿ ಯುವಕ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು