ಭಾನುವಾರ, ಡಿಸೆಂಬರ್ 8, 2019
25 °C
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಸಲಹೆ

ಕನ್ನಡಿಗರಿಗೆ ಕಾಯಕ ಸಂಸ್ಕೃತಿ ಜಾಗೃತವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಈ ನಾಡಿನ ಕವಿಗಳು, ಜ್ಞಾನಪೀಠ ಪುರಸ್ಕೃತರು, ಶರಣರು, ದಾಸರು ಹಾಗೂ ಸಂತರು ಕನ್ನಡ ಸಾಹಿತ್ಯದ ತೇರು ಎಳೆದಿದ್ದು, ಸದ್ಬುದ್ಧಿಯ ಪ್ರಣತಿಯನ್ನು ಹೊತ್ತಿಸುವ ಕಾರ್ಯ ಮಾಡಿದ್ದಾರೆ. ಇದರಿಂದಾಗಿಯೇ ಕನ್ನಡ ತನ್ನತನ ಉಳಿಸಿಕೊಂಡು ಬಂದಿದೆ. ಆದ್ದರಿಂದ ನಾವು ಬುದ್ಧಿಜೀವಿಗಳಾಗುವುದರ ಜೊತೆಗೆ ಶ್ರಮಜೀವಿಗಳಾಗಬೇಕು ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಆವರಗೆರೆಯ ಸ್ನೇಹಜೀವಿ ಯುವಕ ಸಂಘ ಹಾಗೂ ಎಸ್‌.ಎಸ್. ನಾರಾಯಣ ಹಾರ್ಟ್‌ ಸೆಂಟರ್‌ವತಿಯಿಂದ ಆಂಜನೇಯ ದೇವಸ್ಥಾನದ ಮುಂಭಾಗ ಬುಧವಾರ ಆಯೋಜಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಭಾವೈಕ್ಯತಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಾವಣಗೆರೆ ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರಾಗಿತ್ತು. ಮಿಲ್ಲುಗಳು, ನೂಲುಗಳು ಇದ್ದವು. ಚೆನ್ನಾಗಿ ದುಡಿಯುತ್ತಿದ್ದರು. ಈಗ ಅವೆಲ್ಲಾ ಮುಚ್ಚಿವೆ. ಕನ್ನಡಿಗರು ಕೇವಲ ತಮ್ಮ ಭಾಷಾವೃತ್ತಿಯನ್ನು ಕಳೆದುಕೊಳ್ಳುತ್ತಿಲ್ಲ. ಬದುಕಿಗೆ ಆಧಾರವಾಗಿರುವ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರು ಹಂತ ಹಂತವಾಗಿ ಪರಾಧೀನವಾಗುತ್ತಿದೆ’ಎಂದು ಹೇಳಿದರು.

‘ರೈತರು ಮಾರ್ವಾಡಿಗಳಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಿ ಕಾಲೊನಿಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಸರ್ಕಾರ ನೀಡುತ್ತಿರುವ ಅನ್ನಭಾಗ್ಯ, ಕ್ಷೀರಭಾಗ್ಯಕ್ಕೆ ಕೈ ಚಾಚುತ್ತಿದ್ದಾರೆ. ಆದರೆ ಭೂಮಿಯನ್ನು ಉಳಿಸಿಕೊಂಡಿದ್ದರೆ ನೀವೇ ಸರ್ಕಾರಕ್ಕೆ ಮಾರಾಟ ಮಾಡಬಹುದು. ಭೂಕೇಂದ್ರೀತ ಬದುಕು ನಮ್ಮದು. ಆದರೆ ಅವುಗಳನ್ನೇ ಮಾರಿಕೊಂಡಿದ್ದಾರೆ. ಶರಣರು ಹೇಳಿದಂತೆ ಶ್ರಮ ಜೀವಿಗಳಾಗಬೇಕು. ಆಗ ಮಾತ್ರ ಕಾಯಕ ಸಂಸ್ಕೃತಿ ಜಾಗೃತವಾಗುತ್ತದೆ. ಕಾಯಕ ಸಂಸ್ಕೃತಿ ಶ್ರೇಷ್ಠವಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡಿ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿ’ ಎಂದು ಸಲಹೆ ನೀಡಿದರು.

‘ಆವರಗೆರೆಯಲ್ಲಿ ಹಲವಾರು ಜಾತಿ, ಧರ್ಮ, ಜನಾಂಗದ ಜನರು ಇದ್ದು, ಅವರು ಸ್ನೇಹ, ಪ್ರೀತಿಯಿಂದ ಜೀವನ ನಡೆಸುತ್ತಿದ್ದಾರೆ. ಯುವಕರು ಕನ್ನಡ ಕಟ್ಟುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ಜೀವನದಲ್ಲಿ ಸ್ನೇಹ ಮಾಡಬೇಕು, ಬಾಂಧವ್ಯ ಬೆಸೆಯಬೇಕು, ಜಾತಿ ಜಾತಿಗಳ ನಡುವೆ ಸಂಪರ್ಕ ಸೇತುವೆಯನ್ನು ಕಟ್ಟಬೇಕು. ಸ್ನೇಹಜೀವಿಗಳ ಜೊತೆ, ಬುದ್ಧಿಜೀವಿಗಳಾಗಬೇಕು. ಮಾನವನ ಬದುಕಿನಲ್ಲಿ ಇಡೀ ಜಗತ್ತಿಗೆ ಕೊಡುವಷ್ಟು ದುರ್ಬುದ್ಧಿ ಇದೆ. ಇದರಿಂದ ಹಾರ್ದಿಕ ಬದುಕು ಸಾಧ್ಯವಾಗುವುದಿಲ್ಲ. ದುರ್ಬುದ್ಧಿಯ ಜೊತೆ ಸಾಗದೇ ಸದ್ಬುದ್ಧಿಯ ಜೊತೆ ಸಾಗಬೇಕು’ ಎಂದು ಸಲಹೆ ನೀಡಿದರು.

ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಹಾಜರಿದ್ದರು. ನಗರಪಾಲಿಕೆ ಸದಸ್ಯರಾದ ಜಯ್ಯಮ್ಮ ಗೋಪಿನಾಯ್ಕ್, ಬಿ.ಜಿ. ಅಜಯ್‌ಕುಮಾರ್, ನಾಗರಾಜ್, ಮಾಜಿ ಸದಸ್ಯ ಜಿ.ಸುರೇಶ್‌, ವಕೀಲರಾದ ಪರಮೇಶ್‌, ಜೆಡಿಎಸ್ ಮುಖಂಡ ಅರುಣ್‌ಕುಮಾರ್, ಕಾಂಗ್ರೆಸ್ ಮುಖಂಡ ಅಣ್ಣೇಶ್‌ ನಾಯ್ಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ವೀರಾಚಾರಿ ಹಾಜರಿದ್ದರು. ಸ್ನೇಹಜೀವಿ ಯುವಕ ಸಂಘದ ಅಧ್ಯಕ್ಷ ಭೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯ ಎಚ್.ಜಿ. ಉಮೇಶ್ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು