ಶನಿವಾರ, ಡಿಸೆಂಬರ್ 7, 2019
21 °C
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸವಾಲು

ಹೊನ್ನಾಳಿ: ಮೋದಿ ಕಿವಿ ಹಿಂಡಿ ಸಾಲ ಮನ್ನಾ ಮಾಡಿಸಲಿ, ಬಿಜೆಪಿಗೆ ಕಾಂಗ್ರೆಸ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊನ್ನಾಳಿ: ಅಧಿಕಾರಿಗಳ ಮೇಲೆ ಗೂಂಡಾ ವರ್ತನೆ ತೋರುತ್ತಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ತಾಕತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿಯವರ ಕಿವಿ ಹಿಂಡಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸವಾಲು ಹಾಕಿದರು.

ಬುಧವಾರ ಕೇಂದ್ರ ಸರ್ಕಾರ ಹಾಗೂ ರೇಣುಕಾಚಾರ್ಯ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪ್ರತಿಭಟನೆ, ಹೋರಾಟ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಮನಬಂದಂತೆ ಮಾತನಾಡಿದ್ದಾರೆ. ಇಂತಹ ಗೂಂಡಾವರ್ತನೆಯಿಂದ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಮೋದಿ ಅಧಿಕಾರಕ್ಕೆ ಬರುವ ಮುನ್ನ ಹಲವಾರು ಭರವಸೆಗಳನ್ನು ನೀಡಿದ್ದರು. ‘ಇಡೀ ದೇಶದ ಚಿತ್ರಣವನ್ನು ಬದಲಾಯಿಸುತ್ತೇನೆ’ ಎಂದಿದ್ದರು. ಆದರೆ ನೋಟು ರದ್ದತಿ, ಜಿಎಸ್‍ಟಿ ಹೊರೆ, ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವುದೇ ಇವರ ಸಾಧನೆ ಎಂದು ಕುಟುಕಿದರು.

ಎಂ.ಪಿ.ರೇಣುಕಾಚಾರ್ಯ ಒಬ್ಬ ಪ್ರಚಾರ ಪ್ರಿಯ ಶಾಸಕ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಲೇವಡಿ ಮಾಡಿದರು.

ಬೆಂಗಳೂರಿನಲ್ಲಿ 13 ಕ್ವಾರಿಗಳ ಗುತ್ತಿಗೆದಾರರ ಸಭೆ ಕರೆದ ಶಾಸಕ ರೇಣುಕಾಚಾರ್ಯ ತಮ್ಮ ಲಾಭದಲ್ಲಿ ನನಗೂ ಒಂದು ಪಾಲು ಕೊಡಿ ಎಂದು ತಾಕೀತು ಮಾಡಿದ್ದಾರೆ ಎಂದು ದೂರಿದರು.

‘ನಾನು ಶಾಸಕನಾಗಿದ್ದಾಗ ನನ್ನ ಮೇಲೆ ಅಕ್ಕಿ ಹಾಗೂ ಮರಳು ಅಕ್ರಮ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು. ಈಗ ನಾನು ಅವರಿಗೆ ಸವಾಲು ಹಾಕುತ್ತೇನೆ. ಮಠದಲ್ಲಿ ಬಂದು ಅವರು ಪ್ರಮಾಣ ಮಾಡಲಿ, ಅವರ ಅವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ’ ಎಂದು ಸವಾಲು ಹಾಕಿದರು.

ಅಭಿವೃದ್ಧಿ ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಿಸಲಿ. ಅದನ್ನು ಬಿಟ್ಟು ಪುಕ್ಕಟ್ಟೆ ಪ್ರಚಾರವನ್ನು ಕೈ ಬಿಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಜಿ. ವಿಶ್ವನಾಥ್, ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಬಿ. ಸಿದ್ದಪ್ಪ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಎಚ್.ಎ. ಗದ್ದಿಗೇಶ್ , ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಎಚ್.ಎ. ಉಮಾಪತಿ, ಎಂ. ರಮೇಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು